ದಾವಣಗೆರೆ:
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥುರಾಮ್ ಗೋಡ್ಸೆಯನ್ನು ಮಹಾನ್ ದೇಶಭಕ್ತ ಎಂದ ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್ ಹಾಗೂ ಈ ಹೇಳಿಕೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಪಾಲಿಕೆ ಆವರಣದಲ್ಲಿನ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಪ್ರಜ್ಞಾಸಿಂಗ್ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮಾಲೆಗಾಂವ್ ಸ್ಪೋಟದ ಮುಖ್ಯ ರೂವಾರಿಯಾಗಿರುವ ಪ್ರಜ್ಞಾಸಿಂಗ್ ಠಾಕೂರ್, ರಾಷ್ಟ್ರಪಿತ ಗಾಂಧಿರವರ ಹತ್ಯೆಗೈದ ನಾಥುರಾಮ್ ಗೋಡ್ಸೆಯನ್ನು ಮಹಾನ್ ದೇಶ ಭಕ್ತ ಎಂದಿರುವುದು ಹಾಗೂ ಈ ಹೇಳಿಕೆಯನ್ನು ಸಚಿವ ಅನಂತಕುಮಾರ್ ಹೆಗಡೆ ಹಾಗೂ ಸಂಸದ ನಳಿನ್‍ಕುಮಾರ್ ಕಟೀಲ್ ಅವರುಗಳು ಸಮರ್ಥಿಸಿಕೊಂಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶ ಪ್ರೆಮಿಗಳನ್ನು ವಿರೋಧಿಸುವುದು ಹಾಗೂ ಸಂವಿಧಾನವನ್ನು ಬದಲಿಸುವುದು ಬಿಜೆಪಿ ಮತ್ತು ಸಂಘ ಪರಿವಾರದ ಗುಪ್ತ ಅಜೆಂಡವಾಗಿದೆ. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲೂ ಸಂಘಪರಿವಾರಕ್ಕೆ ಸೇರಿದ್ದ ನಕಲಿ ದೇಶಭಕ್ತರು ಬ್ರಿಟೀಷರ ಜೊತೆ ರಾಜಿ ಮಾಡಿಕೊಳ್ಳುವ ಮೂಲಕ ದೇಶದ್ರೋಹದ ಕೆಲಸ ಮಾಡಿ, ಇಡೀ ಸ್ವಾತಂತ್ರ್ಯ ಚಳವಳಿಯ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು ಎಂದು ಆರೋಪಿಸಿದರು.
ಪ್ರಜ್ಞಾಸಿಂಗ್ ಠಾಕೂರ್, ಅನಂತಕುಮಾರ್ ಹೆಗಡೆ, ನಳಿನ್‍ಕುಮಾರ್ ಕಟೀಲ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗದ ಬಿಜೆಪಿ ನಾಯಕರು, ಈ ಮೂವರಿಗೆ ನೆಪಮಾತ್ರಕ್ಕೆ ನೋಟೀಸ್ ನೀಡಿದ್ದಾರೆ. ಆದರೆ, ಬಡಪಾಯಿ ಕಾರ್ಯಕರ್ತರನ್ನು ಈ ಹೇಳಿಕೆಗೆ ಸಂಬಂಧಿಸಿದಂತೆ ಪಕ್ಷದಿಂದ ಉಚ್ಛಾಟಿಸುವ ಮೂಲಕ, ಕ್ರಮ ಕೈಗೊಂಡಿರುವಂತೆ ಬಿಂಬಿಸುತ್ತಿದ್ದು, ಇಂತಹ ನಾಟಕವನ್ನು ಬಿಟ್ಟು, ಬಿಜೆಪಿಗೆ ನಿಜಕ್ಕೂ ದೇಶಭಕ್ತರ ಬಗ್ಗೆ ಕಾಳಜಿ ಇದ್ದರೆ, ಈ ಮೂವರನ್ನು ಪಕ್ಷದಿಂದ ಉಚ್ಚಾಟಿಸುವ ಮೂಲಕ ಬದ್ಧತೆ ಪ್ರದರ್ಶಿಸಬೇಕೆಂದು ಆಗ್ರಹಿಸಿದರು.
2014ರ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಸುಳ್ಳು ಹೇಳಿಕೊಂಡೇ, ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.
ಆದರೆ, ಈ ಬಾರಿ ದೇಶದ ಜನತೆ ಮೋದಿ ಮಾತಿಗೆ ಮರಳಾಗಿಲ್ಲ. ಈ ಸಲ ಮೋದಿ ಮನೆಗೆ ಹೋಗುವುದು ಶತಃಸಿದ್ಧ. ಮೋದಿ ಆಡಳಿತಾವಧಿಯಲ್ಲಿ ಉದ್ಯೋಗ ಸೃಷ್ಟಿ ಮಾಡಿಲಿಲ್ಲ. ಬದಲಿಗೆ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್‍ನಂತಹ ಸಂಸ್ಥೆಯನ್ನು ದಿವಾಳಿ ಎಬ್ಬಿಸಿದ್ದು, ಕಳೆದ 9 ತಿಂಗಳಿಂದ ನೌಕರರಿಗೆ ವೇತನ ನೀಡಿಲ್ಲ. ಇದರ ಹಿಂದೆ ಜಿಯೋ ಮೊಬೈಲ್ ಕಂಪನಿಗೆ ಲಾಭ ಮಾಡಿಕೊಡುವ ಹುನ್ನಾರ ಅಡಗಿದೆ ಎಂದು ದೂರಿದರು.
ಕಾಂಗ್ರೆಸ್ ಹಿರಿಯ ಮುಖಂಡ ಸೋಮ್ಲಾಪುರ ಹನುಮಂತಪ್ಪ ಮಾತನಾಡಿ, ಆರ್‍ಎಸ್‍ಎಸ್ ಅನ್ನು ಈ ದೇಶದ ಜನ ಹಿಂದೆಯೇ ತಿರಸ್ಕರಿಸಿದ್ದಾರೆ. ಆದರೆ, ಸಂವಿಧಾನ ವಿರೋಧಿ ಆರ್‍ಎಸ್‍ಎಸ್‍ನವರು ಈಗ ಬಿಜೆಪಿ ಮುಖವಾಡ ಹಾಕಿಕೊಂಡು ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಸ್ವಾತಂತ್ರ್ಯ ಚಳವಳಿಯಲ್ಲಿ ಕಾಂಗ್ರೆಸ್‍ನಿಂದ ತ್ಯಾಗಬಲಿದಾನ ಮಾಡಿದವರ ಪಟ್ಟಿ ನೀಡುತ್ತೇವೆ. ಬಿಜೆಪಿ, ಆರ್‍ಎಸ್‍ಎಸ್‍ನವರು ಸ್ವಾತಂತ್ರ್ಯ ಹೋರಾಟ ಮಾಡಿರುವುದೇ ನಿಜವಾಗಿದ್ದರೆ, ಅವರ ಪಟ್ಟಿ ನೀಡಲಿ ಎಂದು ಸವಾಲು ಹಾಕಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎ.ನಾಗರಾಜ್, ಎಂ.ಹಾಲೇಶ್, ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ್, ಶಫಿ ಅಹ್ಮದ್, ಗಡಿಗುಡಾಳು ಮಂಜುನಾಥ್, ಶುಭಮಂಗಳ, ಯತಿರಾಜ್, ಡೋಲಿ ಚಂದ್ರು, ಜಬ್ಬಾರ್, ರೇಣುಕಮ್ಮ, ಮುಜಾಹಿದ್, ಅಂಜಿನಪ್ಪ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
