ರಾಷ್ಟ್ರ ಧ್ವಜಕ್ಕೆ ಅಪಮಾನ : ಸತ್ಯಾಗ್ರಹದ ಎಚ್ಚರಿಕೆ

ಗುಬ್ಬಿ

     ಕಳೆದ 9 ತಿಂಗಳ ಹಿಂದೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕೊಠಡಿಯೊಂದರಲ್ಲಿ ರಾಷ್ಟ್ರಧ್ವಜಕ್ಕೆ ಆಗಿರುವ ಅಪಮಾನದ ಪ್ರಕರಣವನ್ನು ತನಿಖೆ ನಡೆಸಿ ಆರೋಪಿತರನ್ನು ಬಂಧಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಪೊಲೀಸ್ ಮತ್ತು ಶಿಕ್ಷಣ ಇಲಾಖೆಯ ವಿರುದ್ದ ಬೇಸರ ವ್ಯಕ್ತಪಡಿಸಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಸ್ವಾತಂತ್ರ್ಯ ದಿನಾಚರಣೆ ದಿನದಂದು ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆಯ ಲಿಖಿತಪತ್ರವನ್ನು ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ ಅವರಿಗೆ ನೀಡಿದರು.

     ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯ ಆರಂಭಕ್ಕೆ ಮುನ್ನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪರಮೇಶ್ವರಪ್ಪ ಅವರ ನೇತೃತ್ವದಲ್ಲಿ ಲಿಖಿತ ಎಚ್ಚರಿಕೆ ಪತ್ರ ನೀಡಿದ ವಿವಿಧ ಸಂಘಟನೆಯ ಪದಾಧಿಕಾರಿಗಳು, ಶತಮಾನದ ಅಂಚಿನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕೊಠಡಿಯೊಂದರಲ್ಲಿ ಕಳೆದ ಡಿಸೆಂಬರ್ ಮಾಹೆಯ 13 ನೆ ತಾರೀಖು ಅಪ್ಪಟ ಖಾದಿಯ ರಾಷ್ಟ್ರೀಯ ಬಾವುಟವನ್ನು ವಿರೂಪಗೊಳಿಸಿ ಕಸದೊಂದಿಗೆ ಹಾಕಲಾಗಿತ್ತು. ಈ ಪ್ರಕರಣದ ಬಗ್ಗೆ ತಕ್ಷಣ ತನಿಖೆ ನಡೆಸಬೇಕಿದ್ದ ಇಲಾಖೆಗಳು ನಿರ್ಲಕ್ಷ್ಯ ತೋರುತ್ತಿವೆ ಎಂದು ಸಭೆಗೆ ವಿವರಿಸಿದರು.

   ನಂತರ ಮಾತನಾಡಿದ ಕೆಲ ಸಾಮಾಜಿಕ ಕಾರ್ಯಕರ್ತರು, ತಾಲ್ಲೂಕು ಆಡಳಿತಕ್ಕೆ ಒತ್ತಡ ತಂದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಗಣ ರಾಜ್ಯೋತ್ಸವದಲ್ಲಿ ವಿರೋಧ ಮಾಡಲು ಚಿಂತನೆ ನಡೆಸಲಾಗಿತ್ತು. ನಂತರ ಚುರುಕುಗೊಂಡಂತೆ ಎಚ್ಚ್ಚೆತ್ತ ಪೊಲೀಸ್ ಇಲಾಖೆ ಸಾಮಾಜಿಕ ಹೋರಾಟಗಾರರು, ದೇಶಭಕ್ತರ ಮನವೊಲಿಸಿ ಶೀಘ್ರದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಎಫ್‍ಐಆರ್ ದಾಖಲಿಸಲಾಯಿತು. ನಂತರ ಸಿಸಿ ಕ್ಯಾಮರಾ ಫುಟೇಜ್ ಪಡೆಯಲು ಪರದಾಡುವಂತಾಗಿದೆ. ಶಾಲೆಯ ಉಪಪ್ರಾಂಶುಪಾಲರು ಕ್ಯಾಮರಾ ಫುಟೇಜ್ ನೀಡುವಲ್ಲಿ ಮಾಡಿದ ವಿಳಂಬ ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

   ಸಿಸಿ ಕ್ಯಾಮರಾ ಫುಟೇಜ್ ನೀಡುವಲ್ಲಿ ವಿಳಂಬ ನೀತಿ ಅನುರಿಸಿದ ಶಾಲೆಯ ಮುಖ್ಯಸ್ಥೆಯಿಂದಲೆ ದೂರು ಪಡೆದ ಪೊಲೀಸ್ ಇಲಾಖೆ ವಿನಾಕಾರಣ ವಿಳಂಬ ಮಾಡಿದೆ. ಕೇವಲ ಲ್ಯಾಬ್ ವರದಿ ಬರಬೇಕಿದೆ ಎಂದು ವಿಳಂಬ ಮಾಡುವ ಮುನ್ನ ರಾಷ್ಟ್ರಧ್ವಜಕ್ಕೆ ಆಗಿರುವ ಅಪಮಾನದ ಪ್ರಕರಣವನ್ನು ಸುಮೋಟೋ ಮೂಲಕ ಕೇಸು ದಾಖಲಿಸಬಹುದಿತ್ತು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಯಾವುದೇ ಶಿಫಾರಸ್ಸಿಗೆ ಬಗ್ಗದೆ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ದಿನದಂದು ಸತ್ಯಾಗ್ರಹವನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ನೇತೃತ್ವದಲ್ಲಿ ಮಾಜಿ ಸೈನಿಕರೊಂದಿಗೆ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ನಾಗಸಂದ್ರ ವಿಜಯ್‍ಕುಮಾರ್ ಎಚ್ಚರಿಕೆ ನೀಡಿದರು.

   ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರಾದ ಜಿ.ಎಸ್.ಮಂಜುನಾಥ್, ಜಿ.ಆರ್.ರಮೇಶ್, ಬಿ.ಲೋಕೇಶ್, ಜಯ ಕರ್ನಾಟಕ ಸಂಘಟನೆಯ ವಿನಯ್, ಮಧು ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap