ದಾವಣಗೆರೆ:
ಡೂಡಾ ಅಭಿವೃದ್ಧಿ ಪಡೆಸಿರುವ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ಅಕ್ರಮವಾಗಿ ನಿವೇಶನ ಪಡೆದಿರುವ ರಾಜಕಾರಣಿಗಳು, ಉದ್ಯಮಿಗಳು ಜೈಲಿಗೆ ಹೋಗುವ ವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ.
ಸಮೀಪದ ಜೆ.ಹೆಚ್.ಪಟೇಲ್ ಬಡಾವಣೆಯ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ನಡೆದಿರುವ ಹಗರಣದ ಬಗ್ಗೆ ಶ್ರೀರಾಮ ಸೇನೆಯಿಂದ ಲೋಕಾಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ದಾಖಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ನ್ಯಾಯಾಲಯಕ್ಕೆ ಹಾಜುರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರಿಗೆ ಸಿಗಬೇಕಿದ್ದ ಜೆ.ಹೆಚ್.ಪಟೇಲ್ ಬಡಾವಣೆಯ ನಿವೇಶನಗಳನ್ನು ಎಲ್ಲಾ ಪಕ್ಷಗಳ ರಾಜಕಾರಣಿಗಳು, ಹೋಟೆಲ್ ಉದ್ಯಮಿಗಳು ಹಾಗೂ ವೈದ್ಯರು ಅಕ್ರಮವಾಗಿ ಪಡೆದಿದ್ದು, ಅಕ್ರಮ ನಡೆದಿರುವ ಬಗ್ಗೆ ಬಲವಾದ ಸಾಕ್ಷಿಗಳಿವೆ.
ಇವರೆಲ್ಲರೂ ಜೈಲಿಗೆ ಹೋಗುವ ವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಪುನರ್ ಉಚ್ಚರಿಸಿದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ಡೂಡಾದಿಂದ ಅಭಿವೃದ್ಧಿ ಪಡಿಸಿದ ಜೆ.ಹೆಚ್.ಪಟೇಲ್ ಬಡಾವಣೆಯ 507 ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಹಗರಣ ನಡೆದಿದ್ದು, ಸುಮಾರು 91 ನಿವೇಶನಗಳನ್ನು ಅಕ್ರಮವಾಗಿ ಅಂದಿನ ಉಸ್ತುವಾರಿ ಸಚಿವರಾಗಿದ್ದ ಎಸ್.ಎ.ರವೀಂದ್ರನಾಥ್, ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ, ಎಂ.ಬಸವರಾಜ ನಾಯ್ಕ, ಅಂದಿನ ಡೂಡಾ ಅಧ್ಯಕ್ಷ ಯಶವಂತರಾವ್ ಜಾಧವ್, ಬಿಜೆಪಿ ಮುಖಂಡ ಹೆಚ್.ಎಸ್.ನಾಗರಾಜ್, ವೈದ್ಯರಾದ ಡಾ.ಶ್ರೀಶೈಲ ಬ್ಯಾಡಗಿ, ಡಾ.ಸುನೀಲ್ ಬ್ಯಾಡಗಿ ಸೇರಿದಂತೆ ಹಲವರು ತಮ್ಮ ಪ್ರಭಾವ ಬಳಸಿ ಮಕ್ಕಳು, ಪತ್ನಿ, ಅಳಿಯಂದರಿಗೆ, ಸಂಬಂಧಿಕರಿಗೆ ಹಂಚಿಕೆ ಮಾಡಿಸಿದ್ದಾರೆ. ಈ ಅಕ್ರಮದಲ್ಲಿ ಎಲ್ಲಾ ಪಕ್ಷದವರು ಇದ್ದಾರೆಂದು ಆರೋಪಿಸಿದರು.
ದೊಡ್ಡ, ದೊಡ್ಡ ಹೋಟೆಲ್‍ಗಳು, ಎಂಟೆಂಟು ಮನೆಗಳಿದ್ದು ಸ್ಥಿತಿವಂತರಾಗಿದ್ದರೂ ಸಹ ಬಡವರಿಗೆ ಸಿಗಬೇಕಿದ್ದ ನಿವೇಶನಗಳನ್ನು ಬಡವರ ಹೊಟ್ಟೆ ಮೇಲೆ ಹೊಡೆದು ಪಡೆದಿದ್ದಾರೆ. ಇವರೆಂಥಹ ನಿರ್ಲಜ್ಜರು, ನೀಚರು ಇರಬಹುದು ಎಂದು ಪ್ರಶ್ನಿಸಿದ ಅವರು, ಇವರಿಗೆ ನಾಚಿಕೆ, ಮಾನ-ಮರ್ಯಾದೆ ಇದ್ದರೆ, ತಮ್ಮ ತಪ್ಪೊಪ್ಪಿಕೊಂಡು, ದಂಡ ಪಾವತಿಸಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.
ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮದ ಹಿನ್ನೆಲೆಯಲ್ಲಿ 2013ರಂದು ಅಂದಿನ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಅವರಿಂದ ಲೋಕಾಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ 91 ನಿವೇಶನಗಳ ಹಂಚಿಕೆಯಲ್ಲಿನ ಅಕ್ರಮದ ಕುರಿತು ಪ್ರತ್ಯೇಕವಾಗಿ ದೂರು ನೀಡಲಾಗಿತ್ತು. ಇದರಲ್ಲಿ 21 ಪ್ರಕರಣಗಳಿಗೆ ಲೋಕಯುಕ್ತ ಅಧಿಕಾರಿಗಳು ಬಿ ರಿಪೋರ್ಟ್ ಹಾಕಿದ್ದು, ಯಾವ ಆಧಾರದ ಮೇಲೆ ಬಿ ರಿಪೋರ್ಟ್ ಹಾಕಿದ್ದಾರೆಂದು ಪ್ರಶ್ನಿಸಿದ ಮುತಾಲಿಕ್, ಈ 21 ಪ್ರಕರಣಗಳನ್ನು ಪುನರ್ ಪರಿಶೀಲಿಸಬೇಕೆಂದು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಸಿದರು.
ಡೂಡಾದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 29 ಜನರ ಸಮಿತಿ ಇರಲಿದ್ದು, ನಿವೇಶನ ಹಂಚಿಕೆಯ ಸಂದರ್ಭದಲ್ಲಿ ಅಕ್ರಮ ನಡೆಯುತ್ತಿದರೂ ಅಂದಿನ ಜಿಲ್ಲಾಧಿಕಾರಿಗಳು ಕತ್ತೆ ಕಾಯುತ್ತಿದ್ದರೆ?, ನಿಮ್ಮ ಪವರ್ ಬಳಿಸಿ ಏಕೆ ಅಕ್ರಮ ತಡೆಯಲಿಲ್ಲ? ನಿಮ್ಮನ್ನ ರಾಜಕಾರಣಿಗಳು ಏನು ಮಾಡುತ್ತಿದ್ದರು. ಹೆಚ್ಚೆಂದರೆ, ವರ್ಗಾ ಮಾಡಿಸುತ್ತಿದ್ದರು. ಆದರೆ, ನೀವು ಆ ಕ್ರಮ ತಡೆದಿದ್ದರೆ, ಕರ್ನಾಟಕದ ಜನತೆಗೆ ನಿಮ್ಮ ಪಾರದರ್ಶಕತೆಯ ಬಗ್ಗೆ ತಿಳಿಯುತ್ತಿತ್ತು. ಈ ಅಕ್ರಮಕ್ಕೆ ಜಿಲ್ಲಾಧಿಕಾರಿಗಳು ಸಾಕ್ಷಿಯಾಗಿರುವುದರಿಂದ ಅವರ ವಿರುದ್ಧವೂ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಬಡವರ ಹೆಣದ ಮೇಲೆ ಅಕ್ರಮವಾಗಿ ನಿವೇಶನ ಪಡೆದಿರುವ ಹಾಗೂ ಹಂಚಿಕೆ ಮಾಡಿರುವ ಶಾಸಕರನ್ನೇ ಜನರು ಮತ್ತೆ ಆಯ್ಕೆ ಮಾಡಿರುವ ಜನತೆ, ಇನ್ನೂ ಮುಂದಾದರೂ ಸ್ವಲ್ಪ ಯೋಚನೆ ಮಾಡಿ ಎಂಥವರನ್ನು ಆಯ್ಕೆ ಮಾಡಬೇಕೆಂದು ಯೋಚಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೂರುದಾರ, ಶ್ರೀರಾಮ ಸೇನೆ ಹಿಂದೂಸ್ತಾನ್‍ನ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್, ಜಿಲ್ಲಾಧ್ಯಕ್ಷ ಪ್ರಶಾಂತ ಮತ್ತೂರು, ರಾಜ್ಯ ಸಂಚಾಲಕ ಪರಶುರಾಮ್ ನಡುಮನಿ, ಮಾಧ್ಯಮ ಪ್ರಮುಖ ವಿನೋದ್, ಮತ್ತಿಕುಮಾರ್, ಶರತ್ ಹೆಗಡೆ, ಮೋಹನ್, ನೂತನ್ ಆಚಾರ್ಯ, ರಾಜೇಶ್, ಸಾಗರ್, ಶ್ರೀಧರ್, ಆನಂದರ್, ರಮೇಶ್, ಮಂಜು ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








