ಹೊಳಲ್ಕೆರೆ:
2019ನೇ ಪಲ್ಸ್ ಪೋಲಿಯೋ ಕಾರ್ಯಕ್ರಮ ಮಾರ್ಚ್ 10ರಿಂದ 14ರವರೆಗೆ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಹೊಳಲ್ಕೆರೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಯಸಿಂಹ ತಿಳಿಸಿದ್ದಾರೆ.
ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪಲ್ಸ್ ಪೊಲೀಯೊ ಮತ್ತು ಜಂತು ಹುಳು ನಾಶಕದಿಂದ ನಿವಾರಣೆ ಮಾಡುವ ಆಚರಣೆ ಬಗ್ಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ತಹಶೀಲ್ದಾರ್ ಕೆ,ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ಪಲ್ಸ್ ಪೊಲಿಯೋ ಕಾರ್ಯಕ್ರಮ ನಿರಂತರ ನಡೆದಿದ್ದು ಯಾವೊಂದು ಪ್ರಕರಣ ಬೆಳಕಿಗೆ ಬಂದಿಲ್ಲ.
ತಾಲ್ಲೂಕಿನಾದ್ಯಾಂತ 15700 ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುವುದು. ಪಟ್ಟಣದಲ್ಲಿ 1162 ಗ್ರಾಮಾಂತರ ಪ್ರದೇಶದಲ್ಲಿ 1403 ಮಕ್ಕಳನ್ನು ಈಗಾಗಲೆ ತಮ್ಮ ಇಲಾಖೆ ಗುರುತಿಸಿದೆ. ಈ ಮಕ್ಕಳಿಗೆ ಆರೋಗ್ಯ ಕಾರ್ಯಕರ್ತರು ಲಸಿಕೆಯನ್ನು ಹಾಕಲಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ತಿಳಿಸಿದರು.
ಒಟ್ಟು 143 ಭೂತ್‍ಗಳು ಮತ್ತು 9 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ವಲಸೆ ಬಂದ ಮಕ್ಕಳಿಗೂ ಸಹ ಲಸಿಕೆಯನ್ನು ಹಾಕಲಾಗುವುದು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತೀತರ ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುವ 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆಯನ್ನು ಹಾಕಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು, ನೌಕರರು, ಜನಪ್ರತಿನಿಧಿಗಳು, ಸಮಾಜ ಸೇವಕರು ಈ ಕಾರ್ಯಕ್ರಮ ಯಶಸ್ವಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಜಂತು ಹುಳು ನಾಶಕ ಕಾರ್ಯಕ್ರಮ:
ಶಾಲಾ ಮಕ್ಕಳಿಗೆ ಒಂದರಿಂದ 19 ವರ್ಷದವರಿನ ಮಕ್ಕಳಿಗೆ ಫೆಬ್ರವರಿ 8 ರಂದು ರಾಷ್ಟ್ರೀಯ ಜಂತು ಹುಳು ನಿವಾರಣ ದಿನದ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ವೈಧ್ಯಾಧಿಕಾರಿ ಡಾ.ಜಯಸಿಂಹ ತಿಳಿಸಿದ್ದಾರೆ.ಈ ಕಾರ್ಯಕ್ರಮದಲ್ಲಿ ಎಲ್ಲಾ ತಂದೆ ತಾಯಿಗಳು ಪೋಷಕರು ಸಮಾಜ ಸೇವಕರು, ಈ ಆಚರಣೆಯಲ್ಲಿ ಭಾಗವಹಿಸಿ ಜಂತುಹುಳು ನಿವಾರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ. ಈ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಗುಳಿಗೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕೃಷ್ಣಮೂರ್ತಿ, ಪ.ಪಂ ಮುಖ್ಯಾಧಿಕಾರಿ ಡಿ.ಉಮೇಶ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎನ್.ಶಿವಮೂರ್ತಿ, ಡಾ.ಆನಂದ್, ಡಾ.ದಿವ್ಯ, ಮುಂತಾದವರು ಉಪಸ್ಥಿತರಿದ್ದರು.