ಪುನರ್ವಸತಿ ಕಲ್ಪಿಸಿ, ವಿಕಲಚೇತನರಿಗೆ ಬೆಳಕಾಗಿ

 ದಾವಣಗೆರೆ:

    ಆತ್ಮಸಾಕ್ಷಿಯಿಂದ ವಿವಿಧ ಸೌಲಭ್ಯಳನ್ನು ತಲುಪಿಸುವ ಮೂಲಕ ಪುನರ್ವಸತಿ ಕಲ್ಪಿಸಿ, ವಿಕಲಚೇತನರ ಬಾಳಿನ ಆಶಾಕಿರಣ ಆಗಬೇಕೆಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತ ವಿ.ಎಸ್.ಬಸವರಾಜು ಸೂಚಿಸಿದರು.

     ನಗರದ ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ವಿಕಲಚೇತನರಿಗಾಗಿ ಇರುವ ಸೌಲಭ್ಯಗಳ ಕುರಿತು ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿಗಳು ವಿಕಲಚೆತನರಿಗೆ ಸಮರ್ಪಕ ಮಾಹಿತಿ ನೀಡಿ, ಆ ಸೌಲಭ್ಯಗಳನ್ನು ತಲುಪಿಸುವ ಮೂಲಕ ಪುನರ್ವಸತಿ ಕಲ್ಪಿಸಬೇಕೆಂದು ಸಲಹೆ ನೀಡಿದರು.

     ವಿಕಲಚೇತನರ ಪುನರ್ವಸತಿಗೆ ಮುಖ್ಯವಾಗಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಹಕಾರ ಅತ್ಯಗತ್ಯವಾಗಿದ್ದು, ದಿನಕ್ಕೆ ಒಬ್ಬ ವಿಕಲಚೇತನರಿಗೆ ಪುನರ್ವಸತಿ ಕಲ್ಪಿಸಿದರೂ, ಜಿಲ್ಲೆಯಲ್ಲಿ ಮಹತ್ವದ ಬದಲಾವಣೆ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ವೈದ್ಯರು, ಶಿಕ್ಷಕರು ಸೇರಿದಂತೆ ವಿಕಲಚೇತನರ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.

        ಅಂಗವೈಕಲ್ಯ ಮಗು ಹೊಂದಿರುವ ತಾಯಿಗೆ ಮುಖ್ಯವಾಗಿ ತರಬೇತಿ ನೀಡಬೇಕಾಗಿದೆ. ಆರೋಗ್ಯ ಇಲಾಖೆಯಿಂದ ಅಂಗವಿಕಲತೆಗೆ ಸಂಬಂಧಿಸಿದಂತೆ ನಮ್ಮಲ್ಲಿ 7 ಮುಖ್ಯ ರಾಷ್ಟ್ರೀಯ ಕಾರ್ಯಕ್ರಮಗಳಿದ್ದು, ಅವುಗಳನ್ನು ಇನ್ನೂ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವತ್ತ ಅಧಿಕಾರಿಗಳು ಗಮನ ಹರಿಸಬೇಕೆಂದು ತಾಕೀತು ಮಾಡಿದರು.

       ಇಲ್ಲಿನ ದೇವರಾಜ ಅರಸು ಬಡಾವಣೆಯಲ್ಲಿ ವಿಕಲಚೇತನರಿಗಾಗಿ ಸಂಯೋಜಿತ ಪ್ರಾದೇಶಿಕ ಕೇಂದ್ರ ಸ್ಥಾಪಿಸಲಾಗಿದ್ದು, ಇಲ್ಲಿ ಅತ್ಯಂತ ನುರಿತ ತಜ್ಞರಿದ್ದಾರೆ. ಇಲ್ಲಿ ಫಿಸಿಯೋ ಥೆರಪಿ, ಆಕ್ಯುಪೇಷನಲ್ ಥೆರಪಿ, ಪುನರ್ವಸತಿ ಹೀಗೆ ವಿವಿಧ ಸೌಲಭ್ಯಗಳು ದೊರೆಯಲಿವೆ. ಅಲ್ಲದೇ, ವಿಕಲಚೇತನರಿಗೆ ಡಿಪ್ಲೊಮಾ ಕೋರ್ಸ್‍ಗಳನ್ನು ಸಹ ಇಲ್ಲಿ ಆರಂಭಿಸಲಾಗಿದ್ದು, ಈ ಕೋರ್ಸ್‍ನ ತರಬೇತಿ ಪಡೆದರೆ, ವಿಫುಲ ಉದ್ಯೋಗಾವಕಾಶಗಳು ದೊರೆಯಲಿವೆ.

        ಇಲ್ಲಿ ಶಿಕ್ಷಣ ಪಡೆದವರಿಗೆ ಕಾನೂನಿನ ಪ್ರಕಾರ ಸರ್ಕಾರಿ ಅಥವಾ ಖಾಸಗಿ ಕಚೇರಿಗಳಲ್ಲಿ ಉದ್ಯೋಗ ನೀಡಬೇಕೆಂಬ ನಿಯವಿದೆ. ಆದ್ದರಿಂದ ಅರ್ಹ ವಿಕಲಚೇತನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

       ಸಿಆರ್‍ಸಿ (ಕಾಂಪೋಸಿಟ್ ರೀಜನಲ್ ಸೆಂಟರ್)ನ ನಿರ್ದೇಶಕ ಥಾಮಸ್ ಸೆಲ್ವನ್ ಮಾತನಾಡಿ, ಸಿಆರ್‍ಸಿ ಕೆಂದ್ರದಲ್ಲಿ ನುರಿತ ಉದ್ಯೋಗಿಗಳಿದ್ದು, ಪ್ರಸಕ್ತ ಸಾಲಿನಿಂದ ವಿಕಲಚೇತನರಿಗಾಗಿ ಎರಡು ವರ್ಷದ ಡಿಪ್ಲೊಮಾ ಕೋರ್ಸ್ ಆರಂಭಿಸಲಾಗಿದೆ. ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಕಿವಿ ಕೇಳದವರಿಗೆ ಇಂಡಿಯನ್ ಸೈನ್ ಲ್ಯಾಂಗ್ವೇಜ್ ಡಿಪ್ಲೊಮಾ ಕೋರ್ಸ್ ಆರಂಭಿಸಲಾಗುವುದು. ಪೋಷಕರಿಗೆ ಕೇರ್ ಗಿವರ್ ತರಬೇತಿ ನೀಡಲಾಗುವುದು. ಈ ಎಲ್ಲಾ ಕೋರ್ಸ್ ಮಾಡಿದವರಿಗೆ ಅತ್ಯುತ್ತಮ ಉದ್ಯೋಗಾವಕಾಶವಿದೆ. ಆದರೆ ಜಿಲ್ಲೆಯಲ್ಲಿ ಸಿಆರ್‍ಸಿಗೆ ಉತ್ತಮ ಸಹಕಾರ ಲಭ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

       ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತ ವಿ.ಎಸ್.ಬಸವರಾಜು ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 15 ಸಾವಿರ ಕಿವುಡರಿದ್ದಾರೆ. ಆಸ್ಪತ್ರೆಗಳಲ್ಲಿ ಕಿವಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯಲ್ಲಿ ಶೇ.50 ಯಶಸ್ವಿಯಾಗುತ್ತಿವೆ. ಈ ಪ್ರಮಾಣ ಇನ್ನೂ ಹೆಚ್ಚಿಸಬೇಕು. ಇವರಿಗೆ ದೊರಕಬೇಕಾದ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸಬೇಕು. ವಿವಿಧ ತಾಲ್ಲೂಕುಗಳಲ್ಲಿ ಕೆಲಸ ಮಾಡುತ್ತಿರುವ ಬಿಐಆರ್‍ಟಿಗಳು ಮಕ್ಕಳನ್ನು ಪರೀಕ್ಷಿಸಿದಾಗ ಕಂಡುಬರುವ ಕಿವಿ, ಕಣ್ಣು, ಬುದ್ದಿ, ಇತರೆ ನ್ಯೂನತೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಮರ್ಪಕವಾದ ಚಿಕಿತ್ಸೆ ಸೌಲಭ್ಯ ಒದಗಿಸಬೇಕು ಎಂದರು.

         ವಿಕಲಚೇತನ ಮಕ್ಕಳಲ್ಲಿ ಕಂಡು ಬರುವ ಮಂದಗಣ್ಣನ್ನು ಸರ್ಕಾರಿ ವೈದ್ಯರು ಸಮರ್ಪಕವಾಗಿ ಕಂಡು ಹಿಡಿದು ಅದಕ್ಕೆ ಅಗತ್ಯವಾದ ಕನ್ನಡಕ, ಇತರೆ ಚಿಕಿತ್ಸೆ ಬಗ್ಗೆ ಮಾರ್ಗದರ್ಶನ ನೀಡಬೇಕು. ಇದಕ್ಕೂ ಮುನ್ನ ವೈದ್ಯರು ಸಹ ಅಗತ್ಯ ತರಬೇತಿ ಪಡೆಯಬೇಕೆಂದ ಅವರು, ವರ್ಷವೊಂದಕ್ಕೆ ಸುಮಾರು 400 ಮಾನಸಿಕ ರೋಗಿಗಳಿಗೆ ಜಿಲ್ಲೆಯಲ್ಲಿ ಪುನರ್ವಸತಿಯ ಅಗತ್ಯವಿದೆ. ಜೀವನ ಕೌಶಲ್ಯ ಶಿಕ್ಷಣವನ್ನು ಪರಿಣಾಮಕಾರಿಯಾಗಿ ನೀಡಬೇಕು. ಇವರಿಗೆ ಕೌಶಲ್ಯಗಳು ಅತ್ಯಗತ್ಯವಾಗಿದ್ದು ಸಿಆರ್‍ಸಿ ಸಹಾಯ ತೆಗೆದುಕೊಳ್ಳಬೇಕೆಂದು ಸೂಚಿಸಿದರು.

        ಡಿಹೆಚ್‍ಓ ಡಾ.ತ್ರಿಪುಲಾಂಭ ಮಾತನಾಡಿ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಇಲಾಖೆ ಹಾಗೂ ಸಿಆರ್‍ಸಿ ಸೇರಿದಂತೆ ಇದಕ್ಕೆ ಸಂಬಂಧಿಸಿದ ಇಲಾಖೆಗಳು ಸಭೆ ಸೇರಿ ಆರ್‍ಬಿಎಸ್‍ಕೆ ಪರಿಣಾಮಕಾರಿ ಅನುಷ್ಟಾನ, ವಿಕಲಚೇತನರ ಸೌಲಭ್ಯಗಳ ಅನುಷ್ಟಾನ ಕುರಿತು ಕ್ರಿಯಾ ಯೋಜನೆ ರಚಿಸಿ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಪ್ರತಿ ಶಾಲೆಯಲ್ಲಿ ನ್ಯೂನತೆಯುಳ್ಳ ಮಕ್ಕಳನ್ನು ಜಿಲ್ಲಾಸ್ಪತ್ರಗೆ ರೆಫರ್ ಮಾಡಿ ಕ್ರಮ ವಹಿಸಲು ಒಬ್ಬ ನೋಡಲ್ ಶಿಕ್ಷಕರನ್ನು ನೇಮಕ ಮಾಡುವಂತೆ ಮನವಿ ಮಾಡಿದರು.

       ವಿಕಲಚೇತನರು, ಮಕ್ಕಳ ಉತ್ತಮ ಆರೋಗ್ಯ ಅವರ ಹಕ್ಕಾಗಿದ್ದು ಅದನ್ನು ಕಸಿದುಕೊಳ್ಳುವಂತೆ ಆಗಬಾರದು. ಈ ನಿಟ್ಟಿನಲ್ಲಿ ವೈದ್ಯರು, ಶಿಕ್ಷಕರು ಎಲ್ಲರೂ ಕೈಜೋಡಿಸಬೇಕು. ಜಿಲ್ಲಾ ಆಸ್ಪತ್ರೆ ಅಧೀಕ್ಷಕರು ಕೂಡ ಪ್ರತಿ ಮಗುವಿನ ಡೇಟಾ ಇಟ್ಟುಕೊಂಡು ಫಾಲೋ ಅಪ್ ಮಾಡಬೇಕು. ಆರೋಗ್ಯ, ಶಿಕ್ಷಣ ಹೀಗೆ ಇಲಾಖೆಗಳ ನಡುವೆ ಸಮನ್ವಯತೆ ಇರಬೇಕು. ಎಲ್ಲವನ್ನೂ ವಿಕಲಚೇತನರ ಇಲಾಖೆ ಮೇಲೆ ಹೇಳಬಾರದು. ಇದೊಂದು ಸಮನ್ವಯಗೊಳಿಸುವ ಇಲಾಖೆಯಾಗಿದೆ ಎಂದ ಅವರು ಸಂಬಂಧಿಸಿದ ಎಲ್ಲ ಇಲಾಖೆಗಳು ವಿಕಲಚೇತನರ ಕಾರ್ಯಕ್ರಮಗಳಿಗೆ ಒಂದು ಕಾಯಕಲ್ಪ ನೀಡಿ, ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

      ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಸಹಾಯಕ ಆಯುಕ್ತ ಪದ್ಮನಾಭ, ಸಲಹೆಗಾರ ಸುರೇಶ್ ಹನಗವಾಡಿ, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ಬಣಕಾರ್ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಹಾಜರಿದ್ದರು. ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಶಶಿಧರ್ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap