ದಾವಣಗೆರೆ :
ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದ ದುರ್ಘಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ದೇವಸ್ಥಾನ, ಮಸೀದಿ ಹಾಗೂ ಚರ್ಚುಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೇರಾ ಅಳವಡಿಸಬೇಕೆಂದು ಜಿಲ್ಲಾ ಪೊಲೀಸ್ ವರಿದ್ಠಾಧಿಕಾರಿ ಚೇತನ್.ಆರ್ ಸೂಚನೆ ನೀಡಿದರು.
ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ದುರ್ಘಟನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಭದ್ರತಾ ವ್ಯವಸ್ಥೆ ಕುರಿತು ಶುಕ್ರವಾರ ಸಂಜೆ ದೇವಸ್ಥಾನ, ಮಸೀದಿ, ಚರ್ಚ್‍ಗಳ ಆಡಳಿತ ಮಂಡಳಿಯ ಸದಸ್ಯರು ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಹಾಗೂ ಹೋಟೆಲ್, ರೆಸ್ಟೋರೆಂಟ್ ಮಾಲೀಕರೊಂದಿಗೆ ಚರ್ಚಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಭದ್ರತಾ ಕ್ರಮವಾಗಿ ದೇವಸ್ಥಾನ, ಚರ್ಚ್, ಮಸೀದಿ, ಪ್ರಾರ್ಥನ ಮಂದಿರಗಳು, ಬಸ್‍ನಿಲ್ದಾಣಗಳು, ಛತ್ರಗಳು, ಲಾಡ್ಜ್‍ಗಳು ಸೇರಿದಂತೆ ಹೆಚ್ಚು ಜನ ಭೇಟಿ ನೀಡುವ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೇರಾ ಅಳವಡಿಸುವ ಮೂಲಕ ಸೂಕ್ತ ಸಾರ್ವಜನಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಯಾವುದೇ ವಿಧ್ವಂಸಕ ಕೃತ್ಯ ನಡೆದಿರುವ ಸ್ಥಳಗಳನ್ನು ಪರಿಶೀಲಿಸಿದಾಗ, ಸಮಾಜಘಾತುಕ ಶಕ್ತಿಗಳು ಆ ಸ್ಥಳದಲ್ಲೇ ನೆಲೆಸಿ, ಸಂಪೂರ್ಣ ಮಾಹಿತಿ ಪಡೆದ ಬಳಿಕ ವಿಧ್ವಂಸಕ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಬೇರೆಡೆಯಿಂದ ಬಂದು ಲಾಡ್ಜ್‍ಗಳು ಅಥವಾ ಯಾವುದಾದರೂ ಧಾರ್ಮಿಕ ಛತ್ರಗಳಲ್ಲಿ ಉಳಿದುಕೊಳ್ಳಬಹುದಾದ್ದರಿಂದ ಯಾವುದೇ ಲಾಡ್ಜ್, ಹೋಟೆಲ್ ಮಾಲೀಕರು, ಧಾರ್ಮಿಕ ಸಂಸ್ಥೆಯ ಮುಖ್ಯಸ್ಥರು ಹೀಗೆ ಉಳಿಯಲು ಬರುವವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕು. ಹಾಗೂ ಅನುಮಾನ ಕಂಡು ಬಂದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಕಿವಿಮಾತು ಹೇಳಿದರು.
ಕರ್ನಾಟಕ ಸುರಕ್ಷತಾ ಕಾಯ್ದೆ ಪ್ರಕಾರ 100 ಜನಕ್ಕಿಂತ ಹೆಚ್ಚು ಜನರು ಸೇರುವಂತಹ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಿ ವೀಕ್ಷಿಸಬೇಕು. ಈ ಬಗ್ಗೆ ಈಗಾಗಲೇ ಕಲ್ಯಾಣಮಂಟಪಗಳು, ಕೆಎಸ್‍ಆರ್‍ಟಿಸಿ, ಹಾಸ್ಟೆಲ್‍ಗಳು ಮತ್ತು ಲಾಡ್ಜ್‍ಗಳ ಮಾಲೀಕರಿಗೆ ತಿಳುವಳಿಕೆ ನೀಡಲಾಗಿದೆ.
ಇದೇ ರೀತಿಯಲ್ಲಿ ಧಾರ್ಮಿಕ ಸಂಸ್ಥೆಗಳು, ಮುಜರಾಯಿ ಇಲಾಖೆ, ವಕ್ಫ್, ದೇವಸ್ಥಾನ ಸಮಿತಿಗಳ ಮುಖಂಡರಿಗೆ ಇಂದು ಈ ಸಭೆ ಕರೆಯಲಾಗಿದ್ದು 100 ಮತ್ತು 500 ಜನಕ್ಕಿಂತ ಹೆಚ್ಚು ಜನರು ಭೇಟಿ ನೀಡಬಹುದಾದ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕೆಂದು ಸಲಹೆ ನೀಡಿದರು.
ಲಾಡ್ಜ್‍ಗಳಿಗೆ ತಂಗಲು ಬರುವ ವ್ಯಕ್ತಿಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಪಡೆಯಬೇಕು. ಹಾಗೂ ಹೊರದೇಶದಿಂದ ಬರುವ ನಾಗರೀಕರ ಬಗ್ಗೆ ನಿಗದಿತ ಸಾಫ್ಟ್‍ವೇರ್ ಪೋರ್ಟಲ್‍ನಲ್ಲಿ ವಿವರ ಭರ್ತಿ ಮಾಡಬೇಕು ಹಾಗೂ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಸಾಮಾನ್ಯವಾಗಿ ಧಾರ್ಮಿಕ ಕೇಂದ್ರಗಳಲ್ಲಿ ನಂಬಿಕೆ ಆಧಾರದಲ್ಲಿ ಎಲ್ಲ ಭಕ್ತರು, ಪ್ರವಾಸಿಗರಿಗೆ ಊಟ, ವಸತಿಗೆ ಅವಕಾಶ ನೀಡಲಾಗುತ್ತಿದೆ.
ಇಂತಹ ಕಡೆಗಳಲ್ಲಿ ಉಳಿಯುವ ಸ್ಥಳದಲ್ಲಿಯೂ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಹಾಗೂ ಸಾರ್ವಜನಿಕ ಸುರಕ್ಷತೆಗೆ ಅಗತ್ಯವಾದ ಎಲ್ಲ ಕ್ರಮ ಕೈಗೊಂಡು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಟಿ.ಜೆ.ಉದೇಶ್, ಗ್ರಾಮಾಂತರ ಡಿವೈಎಸ್‍ಪಿ ದೇವರಾಜ್, ಇತರೆ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.