ದಾವಣಗೆರೆ :
ಮಹಮದ್ ಪೈಗಂಬರ್‍ರವರು ಆಗಿನ ಕಾಲದಲ್ಲಿಯೇ ಮಾನವೀಯ ಮೌಲ್ಯಗಳಿಗೆ ಚೌಕಟ್ಟು ನಿರ್ಮಿಸುವ ಮೂಲಕ ಬದುಕುವ ಕಲೆಯನ್ನು ತೋರಿಸಿಕೊಟ್ಟು ಸರ್ವರ ಅಭ್ಯುದಯವನ್ನು ಬಯಸಿದರು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಕೆಂಗಬಾಲಯ್ಯ ತಿಳಿಸಿದರು.
ಇಲ್ಲಿನ ದೇವರಾಜ್ ಅರಸ್ ಬಡಾವಣೆಯಲ್ಲಿರುವ ಅಂಧ ಹೆಣ್ಣುಮಕ್ಕಳ ಶಾಲೆಯಲ್ಲಿ ಬುಧವಾರ ಪ್ರವಾದಿ ಹಜರತ್ ಮಹಮದ್ ಪೈಗಂಬರ್‍ರವರ ಜನ್ಮ ದಿನಾಚರಣೆಯ ಪ್ರತೀಕವಾಗಿರುವ ಈದ್‍ಮಿಲಾದ್ ಹಬ್ಬದ ಪ್ರಯುಕ್ತ ಅಲ್‍ಮೋಮಿನಿನ್ ಬೈತುಲ್‍ಮಾಲ್ ಕಮಿಟಿ ಹಾಗೂ ಮಾನವನ ಹಕ್ಕುಗಳ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಶಾಲೆಯ ಅಂಧ ಮಕ್ಕಳಿಗೆ ಹಣ್ಣು ಮತ್ತು ಸಿಹಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ವರ ಒಳಿತು ಬಯಸುವ ಮೂಲಕ ಸಹಬಾಳ್ವೆಯ ಜೀವನ ನಡೆಸುವುದು ಭಾರತದ ಸಂವಿಧಾನದ ಆಶಯವಾಗಿದೆ. ಆದರೆ, ಪೈಗಂಬರ್ ಅವರು ಅಂದಿನ ಕಾಲದಲ್ಲಿಯೇ ಮಾನವೀಯ ಮೌಲ್ಯಗಳಿಗೆ ಚೌಕಟ್ಟು ಹಾಕಿ ಸಹಬಾಳ್ವೆಯ ಜೀವನ ನಡೆಸಲು ಪ್ರೇರಣೆ ನೀಡಿದ್ದರು ಎಂದು ಹೇಳಿದರು.
ಮಾನವನ ಹಕ್ಕುಗಳನ್ನು ಪ್ರತಿಪಾದಿಸುವ ಮೂಲಕ ಸಂತರಾದ ಪೈಗಂಬರ್‍ರವರು ಮಾನವ ಘನತೆಯನ್ನು ಮತ್ತು ಮೌಲ್ಯಗಳನ್ನು ಉನ್ನತಿಕರಿಸಿದ್ದಾರೆ. ಅವರ ನಡೆ ನುಡಿಗಳು ನಮಗೆ ದಾರಿದೀಪವಾಗಲಿ ಎಂದರು.
ಅಲ್‍ಮೋಮಿನಿನ್ ಬೈತುಲ್‍ಮಾಲ್ ಕಮಿಟಿಯ ಕಾರ್ಯದರ್ಶಿ ನಜೀರ್ ಅಹಮದ್ ಪ್ರಾಸ್ತಾವಿಕ ಮಾತನಾಡಿ, ಮಹಮದ್ ಪೈಗಂಬರ್‍ರವರು ಇಡೀ ಮಾನವ ಕುಲದ ಶರಣರಾಗಿದ್ದಾರೆ. ಮಾನವ ಕುಲದ ಹಕ್ಕುಗಳನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಪಂಚಕ್ಕೆ ಬೆಳಕನ್ನು ತೋರಿಸಿದ್ದಾರೆ. ಆಗಿನ ಕಾಲದ ಶೋಷಿತ ಹೆಣ್ಣು ಮಕ್ಕಳ ಧ್ವನಿಯಾಗಿ ನಿಂತು, ಅಜ್ಞಾನದಿಂದ ನರಳುತ್ತಿದ್ದವರಿಗೆ ಜ್ಞಾನದ ಬೆಳಕನ್ನು ನೀಡಿ ಮಹಾನ್ ಸಂತರೆನಿಕೊಂಡಿದ್ದಾರೆಂದು ಸ್ಮರಿಸಿದರು.
ಮಾನವ ಹಕ್ಕುಗಳ ವೇದಿಕೆಯ ಕಾರ್ಯದರ್ಶಿ ಎಲ್.ಹೆಚ್. ಅರುಣ್‍ಕುಮಾರ್ ಮಾತನಾಡಿ, ಮಕ್ಕಳಲ್ಲಿ ಸ್ಫೂರ್ತಿಯನ್ನು ತುಂಬವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ನಿಜವಾದ ಮಾನವ ಧರ್ಮವಾಗಿದ್ದು, ದೀನ-ದಲಿತರು, ಶೋಷಿತರಿಗೆ ಸಹಾಯವಾಗುವ ಮೂಲಕ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಸಲಹೆ ನೀಡದರು.
ಶಾಲೆಯ ಅಧೀಕ್ಷಕ ಡಾ|| ಕೆ.ಕೆ.ಪ್ರಕಾಶ್ ಮಾತನಾಡಿ, ಮಹಮದ್ ಪೈಗಂಬರ್ ಅವರು ಹೆಣ್ಣು ಮಕ್ಕಳಿಗೆ ಒಳ್ಳೆಯ ಸ್ಥಾನಮಾನ ನೀಡಿ ಅವರು ಸಮಾಜದ ಮುಖ್ಯ ವಾಹಿನಿಯಲ್ಲಿ ಬೆರೆಯುವಂತೆ ಮತ್ತು ಬಡವರಿಗೆ ಬೆಳಕಾಗುವಂತೆ ಮಾರ್ಗದರ್ಶನ ಹಾಕಿಕೊಟ್ಟಿದ್ದಾರೆ. ಪೈಗಂಬರ್‍ರವರ ಸಂದೇಶಗಳು ಶಾಂತಿ ಸೌಹಾರ್ದತೆಯ ಸಂಕೇತವಾಗಿದೆ. ಇದನ್ನು ಪಾಲಿಸುವ ಮೂಲಕ ಇತರರಿಗೆ ಮಾದರಿಯಾಗಿ ನಡೆದುಕೊಳ್ಳಬೇಕು ಎಂದರು. ಪತ್ರಕರ್ತ ಎ. ಫಕೃದ್ದೀನ್ ಸ್ವಾಗತಿಸಿ, ನಿರೂಪಿಸಿದರು. ಬೇಬಿ ಆಯುಷ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಅಲ್‍ಮೋಮಿನಿನ್ ಬೈತುಲ್‍ಮಾಲ್ ಕಮಿಟಿಯ ಅಧ್ಯಕ್ಷ ಕೆ.ಸಿ.ಮಹಮದ್, ಹಸನ್, ಇಸ್ಮಾಯಿಲ್, ಫಾರುಕ್, ಮಹಮದ್ ನಿಹಾಲ್, ಶಾಹೀದ್, ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ