ಬೆಂಗಳೂರು
ಸ್ನೇಹಿತರ ದಿನಾಚರಣೆಗೆ ಪಬ್‍ಗೆ ಹೋಗಿದ್ದ ಎರಡು ಜಿಮ್ ತರಬೇತುದಾರರ(ಟ್ರೈನರ್) ಗುಂಪಿನ ನಡುವೆ ಸಿಗರೇಟ್ ಹೊಗೆಯ ವಿಚಾರದ ಜಗಳ ವಿಕೋಪಕ್ಕೆ ತಿರುಗಿ ಮಾರಾಮಾರಿ ನಡೆದು ಓರ್ವ ಗಂಭೀರ ಗಾಯಗೊಂಡು ನಾಲ್ಕೈದು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿರುವ ದುರ್ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡಿರುವ ಅಮೃತಹಳ್ಳಿಯ ನವೀನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದು ಉಳಿದೆಲ್ಲರೂ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಡಿಸಿಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಕಳೆದ ಆ.4ರ ಸ್ನೇಹಿತರ ದಿನ ಆಚರಣೆಗಾಗಿ ಅಮೃತಹಳ್ಳಿಯ ಕೋರ್ಟ್ ಯಾರ್ಡ್ ಬೈ ಮ್ಯಾರೆಯೇಟ್ ಹೋಟೆಲಿನ `ನಝಾರಾ’ ಪಬ್‍ನಲ್ಲಿ ಜಿಮ್ ಟ್ರೈನರ್ ನವೀನ್ ಮತ್ತವರ ತಂಡ ಹಾಗೂ ಮತ್ತು ಪ್ರಶಾಂತ್ ಗೌಡ ಮತ್ತವರ ತಂಡ ಪ್ರತ್ಯೇಕವಾಗಿ ತೆರಳಿತ್ತು.
ಸ್ನೇಹಿತರ ಜೊತೆ ಖುಷಿಯಲ್ಲಿದ್ದ ಪ್ರಶಾಂತ್ ಒಳಗಡೆ ಸಿಗರೇಟ್ ಸೇವನೆ ಮಾಡಲಾರಂಭಿಸಿದ್ದಾನೆ. ಪಕ್ಕದ ಟೇಬಲ್ ನಲ್ಲಿದ್ದ ನವೀನ್, ಹೊರಗಡೆ ಹೋಗಿ ಸಿಗರೇಟ್ ಸೇದುವಂತೆ ಸೂಚಿಸಿದ್ದಾರೆ. ಇದೇ ವಿಚಾರಕ್ಕೆ ಎರಡು ಟೀಂಗಳ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಎರಡೂ ತಂಡದ ನಡುವೆ ಮಾರಾಮಾರಿ ನಡೆದಿದೆ.
ಪ್ರಶಾಂತ್ ಮತ್ತು ಆತನ ಸಹಚರರು ಕೈಗೆ ಸಿಕ್ಕ ವಸ್ತುಗಳಿಂದ ನವೀನ್ ತಂಡವರ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ವೇಳೆ ಎರಡೂ ತಂಡದ ಸದಸ್ಯರು ಮದ್ಯ ಸೇವಿಸಿದ್ದು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ನವೀನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಮೃತಹಳ್ಳಿ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಪ್ರಶಾಂತ್ ಗೌಡ ತಂಡದ ಬಂಧನಕ್ಕೆ ಬಲೆ ಬೀಸಿದ್ದಾರೆ.