ಬೆಂಗಳೂರು
ಬಿಜೆಪಿ ಬಿಬಿಎಂಪಿ ಸದಸ್ಯ ನಾಗರಾಜು ಅವರಿಗೆ ಬಿಬಿಎಂಪಿ ನಗರ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಕೊಡಿಸಲು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಲಾಬಿ ನಡೆಸಿದ್ದಾರೆ.
ತಮ್ಮ ಪುತ್ರಿ ಸೌಮ್ಯ ರೆಡ್ಡಿ ಅವರ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ನಾಗರಾಜು ಅವರನ್ನು ಪಾಲಿಕೆಯ ಸ್ಥಾಯಿ ಸಮಿತಿ ಸ್ಥಾನಕ್ಕೆ ನೇಮಿಸಲು ಸರ್ವ ಪ್ರಯತ್ನದಲ್ಲಿ ತೊಡಗಿದ್ದಾರೆ.
ಶಾಸಕರಾಗಿದ್ದ ಬಿ.ಎನ್. ವಿಜಯಕುಮಾರ್ ನಿಧನದ ನಂತರ ನಡೆದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ಪುತ್ರಿ ಸೌಮ್ಯ ರೆಡ್ಡಿ ಅವರನ್ನು ಗೆಲ್ಲಿಸಲು ನಾಗರಾಜ್ ಭಾರೀ ಶ್ರಮಪಟ್ಟಿದ್ದರು. ಇದು ಬಿಜೆಪಿ ನಾಯಕರ ಕೆಂಗಣ್ಣಿಗೂ ಸಹ ಗುರಿಯಾಗಿತ್ತು.
ಬಿಜೆಪಿಯ ವಿರೋಧವನ್ನೂ ಸಹ ಲೆಕ್ಕಿಸದೇ ನಾಗರಾಜ್ ಸೌಮ್ಯ ರೆಡ್ಡಿ ಪರ ಬಂಡೆಯಂತೆ ನಿಂತು ಕೆಲಸ ಮಾಡಿದ್ದರು. ಇದನ್ನು ಮನಗಂಡಿರುವ ರಾಮಲಿಂಗಾರೆಡ್ಡಿ ಇದೀಗ ನಾಗರಾಜ್ ಅವರ ಪರವಾಗಿ ನಿಂತಿದ್ದು, ಋಣ ಸಂದಾಯಕ್ಕೆ ಮುಂದಾಗಿದ್ದಾರೆ. ಶುಕ್ರವಾರ ನಡೆಯಲಿರುವ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ನಾಗರಾಜ್ ಅವರನ್ನು ಅಧ್ಯಕ್ಷರನ್ನಾಗಿ ಚುನಾಯಿಸಲು ಪ್ರಯತ್ನ ನಡೆಸುತ್ತಿದ್ದಾರೆ.
ಇದೇ ತಿಂಗಳ 4 ರಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ರಾಜ್ಯಾದ್ಯಕ್ಷ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಆ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಹುದ್ದೆ ಹಂಚಿಕೆ ಕುರಿತಂತೆ ಮಹತ್ವದ ಚರ್ಚೆ ನಡೆದಿತ್ತು. ಆ ಸಭೆಯಲ್ಲೂ ಸಹ ಬಿಜೆಪಿಯ ನಾಗರಾಜು ಅವರಿಗೆ ನಗರ ಯೋಜನಾ ಸ್ಥಾಯಿ ಸಮಿತಿ ಸ್ಥಾನ ನೀಡಬೇಕು ಎಂದು ರಾಮಲಿಂಗಾ ರೆಡ್ಡಿ ಸೂಚ್ಯವಾಗಿ ತಿಳಿಸಿದ್ದರು. ನಾಗರಾಜು ಅವರನ್ನು ಮುಂಬರುವ ದಿನಗಳಲ್ಲಿ ಪಕ್ಷ ಮತ್ತು ಬಿಬಿಎಂಪಿ ವಿಚಾರದಲ್ಲಿ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬಹುದು ಎಂದು ಪಕ್ಷದ ಮುಖಂಡರ ಗಮನಕ್ಕೆ ತಂದಿದ್ದರು.
ಭೈರಸಂದ್ರ ವಾರ್ಡ್ ನ ಬಿಜೆಪಿಯ ಪಾಲಿಕೆ ಸದಸ್ಯರಾಗಿರುವ ನಾಗರಾಜು ಅವರಿಗೆ ಇದೀಗ ನಗರ ಯೋಜನಾ ಸ್ಥಾಯಿ ಸಮಿತಿ ಹುದ್ದೆ ದೊರೆಯುತ್ತಿರುವುದು ಕಾಂಗ್ರೆಸ್ ಅಷ್ಟೇ ಅಲ್ಲದೇ ಬಿಜೆಪಿ ಪಾಳಯದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ