ಬೆಳೆ ವಿಮೆ ರಫೇಲ್‍ಗಿಂತ ದೊಡ್ಡ ಹಗರಣ

ದಾವಣಗೆರೆ:

        ಫಸಲ್ ಬೀಮಾ ಯೋಜನೆಯ ಮೂಲಕ ಖಾಸಗಿ ವಿಮಾ ಕಂಪೆನಿಗಳಿಗೆ ಅನುಕೂಲ ಮಾಡುಕೊಡುತ್ತಿರುವುದು, ರಫೇಲ್‍ಗಿಂತಲೂ ಬಹುದೊಡ್ಡ ಹಗರಣವಾಗಿದೆ ಎಂದು ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್‍ನ ರಾಜ್ಯ ಅಧ್ಯಕ್ಷ ಸಚೀನ್ ಮಿಗಾ ಆರೋಪಿಸಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅದಾನಿ ಹಾಗೂ ಅಂಬಾನಿ ಒಡೆತನದ ವಿಮಾ ಕಂಪನಿಗಳಿಗೆ ಲಾಭ ಮಾಡಿ ಕೊಡುವ ದುರುದ್ದೇಶದಿಂದ ಫಸಲ್ ಬೀಮಾ ಯೋಜನೆ ಜಾರಿಗೆ ತಂದಿರುವುದರ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ಇದು ರಫೇಲ್‍ಗಿಂತಲೂ ದೊಡ್ಡ ಹಗರಣವಾಗಿದೆ ಎಂದು ದೂರಿದರು

         ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಬಾಯಿ ಮಾತಿನಲ್ಲಿ ಸಬ್‍ಕೆ ಸಾಥ್, ಸಬ್‍ಕೆ ವಿಕಾಸ್ ಎನ್ನುತ್ತಿದ್ದಾರೆ. ಆದರೆ, ಅವರು ವಾಸ್ತವದಲ್ಲಿ ಅದಾನಿ, ಅಂಬಾನಿಯವರ ವಿಕಾಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕೇವಲ ಆರು ತಿಂಗಳ ಅವಧಿಯಲ್ಲಿ ಖಾಸಗಿ ವಿಮಾ ಕಂಪನಿಗಳು ಸುಮಾರು, 1,371 ಕೋಟಿ ರೂ ಲಾಭ ಮಾಡಿಕೊಂಡಿದ್ದು, ಫಸಲ್ ಬೀಮಾ ಯೋಜನೆಯು ರೈತರಿಗಿಂತ ವಿಮಾ ಕಂಪನಿಗಳಿಗೆ ಮಾತ್ರ ಲಾಭದಾಯಕವಾಗಿವೆ ಎಂದು ಆಪಾದಿಸಿದರು.

         ದಾವಣಗೆರೆ ಜಿಲ್ಲೆಯೊಂದರಲ್ಲಿಯೇ 1,08,573 ರೈತರಿಂದ 11,68,76,034 ರೂ. ಕಂತಿನ ಹಣ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಪಾಲಿನ ಹಣ ಸೇರಿ ಒಟ್ಟು 70.12 ಕೋಟಿ ರೂ. ಹಣವನ್ನು ವಿಮಾ ಕಂಪನಿಗಳು ಸಂಗ್ರಹಿಸಿದ್ದು, ಈ ಪೈಕಿ 5,319 ರೈತರಿಗೆ 40.07 ಕೋಟಿ ರೂ.ಗಳನ್ನು ಮಾತ್ರ ಬೆಳೆ ವಿಮೆಯನ್ನಾಗಿ ನೀಡಲಾಗಿದೆ. 30.51 ಕೋಟಿ ರೂ. ಮೊತ್ತ ಕಂಪನಿಗಳಿಗೆ ಲಾಭವಾಗಿದೆ. ಇಂತಹ ಮಹತ್ತರ ಯೋಜನೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶಾಮಿಲಾಗಿರುವ ಶಂಕೆ ಇದೆ ಎಂದು ದೂರಿದರು.

          ಫಸಲ್ ಬೀಮಾ ಯೋಜನೆ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಂಬಾನಿ, ಅದಾನಿ ಸೇರಿದಂತೆ ಖಾಸಗಿ ವಿಮಾ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದ್ದಾರೆ. ಬೆಳೆನಷ್ಟದಿಂದ ಸರಿಯಾದ ಪರಿಹಾರ ದೊರೆಯದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟುವ ಗೋಜಿಗೆ ಕೇಂದ್ರ ಸರ್ಕಾರ ಹೋಗುತ್ತಿಲ್ಲ. ಫಸಲ್ ಬೀಮಾ ಯೋಜನೆಯ ಹಿಂದಿರುವ ಷಡ್ಯಂತ್ರವನ್ನು ಬಹಿರಂಗ ಪಡಿಸಲು ತಕ್ಷಣವೇ ಸರ್ವೋಚ್ಚ ನ್ಯಾಯಾಲಯವು ಉನ್ನತ ಸಮಿತಿಯಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

           ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಕೆಪಿಸಿಸಿ ಕಿಸಾನ್ ರಾಜ್ಯ ಕಾರ್ಯದರ್ಶಿ ಅಣಜಿ ಅಂಜಿನಪ್ಪ, ಎನ್‍ಎಸ್‍ಯುಐನ ರಾಜ್ಯ ಕಾರ್ಯದರ್ಶಿ ಮಹ್ಮದ್ ಮುಜಾಹೀದ್, ಬಸವನಗೌಡ, ನೇರ್ಲಗಿ ರಾಜೇಶ್, ಶಿವಮೊಗ್ಗ ಗಿರೀಶ್, ಕಾಯಕಯೋಗಿ ಮಂಜಪ್ಪ, ಅಜ್ಜಯ್ಯ, ಮಂಜುನಾಥ, ರಾಮಚಂದ್ರಪ್ಪ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ