ಶ್ರೀ ರಾಘವೇಂದ್ರ ಸಮುದಾಯ ಭವನ ಉದ್ಘಾಟನೆ

ಹೊಳಲ್ಕೆರೆ:

     ವಿದ್ಯೆಯಿಂದ ವಿವೇಕ ಲಭ್ಯವಾಗಿ, ವಿವೇಕದಿಂದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

     ತಾಲೂಕಿನ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ರಾಘವೇಂದ್ರ ಸಮುದಾಯ ಭವನವನ್ನು ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

     ವ್ಯಕ್ತಿ ಪರಿಪೂರ್ಣನಾಗಲು ವಿದ್ಯೆ ಮುಖ್ಯ, ನಂತರದಲ್ಲಿ ಅವನಿಗೆ ವಿವೇಕ ಜಾಗೃತಿಗೊಂಡು ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವುದಲ್ಲದೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುತ್ತಾನೆ. ವಿದ್ಯೆ ಕಲಿಯುವುದಕ್ಕೆ ಕಟ್ಟಡಗಳು ಮುಖ್ಯವಲ್ಲ, ಬದುಕಿನ ಕಟ್ಟಡಗಳನ್ನು ನಿರ್ಮಿಸಲು ವಿದ್ಯೆ ಮುಖ್ಯವಾಗುತ್ತದೆ. ವಿದ್ಯಾರ್ಥಿ ದಿಸೆಯಿಂದಲೇ ಯಾರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆಯೋ ಅವರಿಗೆ ಗ್ರಹಣ ಶಕ್ತಿ ಹೆಚ್ಚಾಗಿ ಸ್ಮರಣೆ ವೃದ್ಧಿಯಾಗುತ್ತದೆ. ಗ್ರಾಮೀಣ ಭಾಗದಲ್ಲಿನ ಸಮುದಾಯಗಳ ಅಭಿವೃದ್ಧಿಗೆ ಇಂತಹ ಸಮುದಾಯ ಭವನಗಳ ಅವಶ್ಯಕತೆ ಇದ್ದು ನಾವೆಲ್ಲರೂ ಸಂಸ್ಥೆಯನ್ನು ಕಟ್ಟುವ ಅದರ ಮೂಲಕ ಇಂತಹ ಕಾಯಕಲ್ಪಕೊಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕಾಗಿದೆ ಎಂದರು.

        ಅನಾಥ ಸೇವಾಶ್ರಮದ ವಿಶ್ವಸ್ತ ಸಮಿತಿ ಸದಸ್ಯ ಪ್ರೊ.ಕೆ.ಈ.ರಾಧಾಕೃಷ್ಣ ಮಾತನಾಡಿ, ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಪೂಜ್ಯ ಶ್ರೀ ಸೂರುದಾಸ್‍ಜೀ ಸ್ವಾಮೀಜಿಯವರು ಕಟ್ಟಿದ ಈ ಆಶ್ರಮ ಮತ್ತು ಅದರ ಮೂಲಕ ನಿರ್ವಹಿಸಲ್ಪಡುವ ಶಿಕ್ಷಣ ಸಂಸ್ಥೆ ರಾಜ್ಯದಲ್ಲಿಯೇ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿದ್ದು ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸುವ ಈ ಸಂಸ್ಥೆಗೆ ಸರ್ಕಾರವೇ ಸಮುದಾಯ ಭವನ ಕಟ್ಟಲಿಕ್ಕೆ ಸಹಾಯ ಮಾಡಿರುವುದು ಶ್ಲಾಘನೀಯ.

       ಮನುಷ್ಯ ಹುಟ್ಟಿದ ಮೇಲೆ ಮನುಷ್ಯನಾಗಲು ಸಾಕಷ್ಟು ಪ್ರಯತ್ನ ಪಡಬೇಕು ಡಾ.ಶಿವಮೂರ್ತಿ ಮುರುಘಾ ಶರಣರ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಮತ್ತಷ್ಟು ಬೆಳೆಯಲಿ ಎಂದರು. ಮುದ್ದೇನಹಳ್ಳಿ ಸತ್ಯಸಾಯಿ ವಿದ್ಯಾಲಯದ ಎ.ಆರ್.ಮಂಜುನಾಥ್ ಮಾತನಾಡಿ, ಸಮಾಜದಲ್ಲಿ ಹೇಗೆ ಉತ್ತಮವಾಗಿ ಬದುಕಬೇಕು ಎಂಬುದನ್ನು ಶ್ರೀಗಳು ನಮಗೆ ತೋರಿಸಿಕೊಟ್ಟಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಅದನ್ನು ರೂಢಿಸಿಕೊಂಡಿದ್ದರಿಂದ ಉತ್ತಮ ನಾಗರೀಕರಾಗಿ ಬಾಳುತ್ತಿದ್ದಾರೆ ಎಂದರು.

        ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ, ಚಿತ್ರದುರ್ಗ ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ವಿಶ್ವಸ್ತರಾದ ಡಿ.ನಟರಾಜ್, ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ, ಸ್ಥಾನಿಕಾಧಿಕಾರಿ ಕೆ.ಎಂ.ತಿಮ್ಮರಾಜು, ಅನಾಥಸೇವಾಶ್ರಮದ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರು, ಸಿಬ್ಬಂದಿವರ್ಗ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ