ತುರುವೇಕೆರೆ
ಕಳೆದರೆಡು ವರ್ಷಗಳಿಂದ ಸತತ ಬರಗಾಲದಿಂದ ಬಸವಳಿದ ರೈತನಿಗೆ ಇತ್ತೀಚೆಗೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಗಿ ಬೆಳೆ ನೆಲಕಚ್ಚಿರುವುದು ಮತ್ತೆ ರೈತರಲ್ಲಿ ಆತಂಕ ಸೃಷ್ಟಿಸಿದೆ.
ಈ ಬಾರಿ ಮುಂಗಾರು ಮಳೆ ಪ್ರಮಾಣ ಪ್ರಾರಂಭದಲ್ಲಿ ಕಡಿಮೆಯಾಗಿದ್ದರಿಂದ ಕೇವಲ ಶೇಕಡ 18ರಷ್ಟು ಮಾತ್ರ ಬಿತ್ತನೆಯಾಗಿ ಅಲ್ಪ ಸ್ವಲ್ಪ ಮುಂಗಾರು ಬೆ¼ಗಳು ರೈತನ ಕೈಸೇರಿತ್ತು. ನಂತರ ನಿಧಾನವಾಗಿ ಪ್ರಾರಂಭವಾದ ಹಿಂಗಾರು ಮಳೆ ಪ್ರಾರಂಭದಲ್ಲಿ ಕಡಿಮೆ ಪ್ರಮಾಣದಲ್ಲಿ ಬಿದ್ದದ್ದರಿಂದ ಎಚ್ಚೆತ್ತ ಕೆಲವೇ ಮಂದಿ ರೈತರು ರಾಗಿ ಬಿತ್ತನೆ ಮಾಡಿದರೆ ಮತ್ತೆ ಕೆಲವರು ಬಿತ್ತನೆಗೆ ಜಮೀನು ಹದ ಮಾಡಿಕೊಳ್ಳದ್ದರಿಂದ ಹೆಚ್ಚು ಮಳೆ ನಿರೀಕ್ಷೆಯಲ್ಲಿದ್ದರು. ನಂತರ ಸತತ 20-30 ದಿನ ಎಡಬಿಡದೆ ಸುರಿದ ಮಳೆಯಿಂದಾಗಿ ಬಿತ್ತನೆ ವಿಳಂಬವಾಯಿತು. ಕೆಲವರು ಮಳೆ ಮಧ್ಯದಲ್ಲಿಯೇ ಆತುರಾತುರವಾಗಿ ರಾಗಿ ಸಸಿ ನೆಟ್ಟರೆ ಉಳಿದವರು ಜಾತಕ ಪಕ್ಷಿಯಂತೆ ಕಾಯ್ದರೂ ಮಳೆ ನಿಲ್ಲಲಿಲ್ಲ.
ಮಳೆ ನಿಲ್ಲುವ ವೇಳೆಗೆ ಬಿತ್ತನೆ ಸಮಯ ಮೀರಿದ್ದರೂ ರೈತರು ಕಾಟಾಚಾರವೆಂಬಂತೆ ರಾಗಿ ಬಿತ್ತನೆ ಮಾಡಿ ಕೈತೊಳೆದುಕೊಂಡರು. ಆದರೆ ಸಕಾಲಕ್ಕೆ ಮಳೆಯಾದ್ದರಿಂದ ರಾಗಿ ಬೆಳೆ ಸಮೃದ್ದವಾಗಿ ಬೆಳೆದು ಈ ಬಾರಿಯಾದರೂ ಬೆಳೆ ಕೈ ಸೇರುತ್ತಿದೆಯಲ್ಲಾ ಎಂಬ ಆಸೆ ಹೊತ್ತ ರೈತರಿಗೆ ಇದೀಗ ಹದಿನೈದಿಪ್ಪತ್ತು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹುಲುಸಾಗಿ ಬೆಳೆದಿದ್ದ ರಾಗಿ ಪೈರು ನೆಲ ಕಚ್ಚುತ್ತಿದ್ದು ರೈತರಲ್ಲಿ ಆತಂಕ ಮೂಡಿಸಿದೆ.
ಇದೀಗ ತಾನೆ ರಾಗಿ ಹಾಲುತೆನೆಯಾಗುತ್ತಿದ್ದು ಮಳೆಯಿಂದ ಸಮೃದ್ದ ರಾಗಿ ಹುಲ್ಲು ಹೊಲದಲ್ಲಿ ಬಾಗಿದ್ದು ಹೆಚ್ಚು ನಷ್ಟವಾಗುವ ಸಾಧ್ಯತೆ ಇದೆ. ಇದರಿಂದ ದನಕರುಗಳಿಗೂ ಮೇವು ಸಿಗದಂತಾಗಲಿದೆ. ಮಳೆ ಇದೇ ರೀತಿ ಮಂದುವರೆದರೆ ರಾಗಿ ತೆನೆ ಕೊಳೆತು ಬೆಳೆ ಮಣ್ಣು ಪಾಲಾಗುವುದು ಗ್ಯಾರಂಟಿ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.
ತೋಟಗಳಿಗೆ ಸಮೃದ್ದಿ ಮಳೆ:
ಇತ್ತೀಚೆಗೆ ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಹೇಮಾವತಿ ನೀರಿನಿಂದಾಗಿ ತಾಲ್ಲೂಕಿನ ಕೆರೆ ಕಟ್ಟೆಗಳು ತುಂಬಿವೆ. ವಾಣಿಜ್ಯ ಬೆಳೆಗಳಾದ ಅಡಿಕೆ ಹಾಗು ತೆಂಗಿನ ತೋಟಗಳಲ್ಲಿ ಸಮೃದ್ದ ನೀರು ನಿಂತಿದೆ. ಹಳ್ಳಕೊಳ್ಳಗಳು ತುಂಬದಿದ್ದರೂ ಇಂತಹ ಮಳೆ ನೋಡಿ ಅದೆಷ್ಟೋ ವರ್ಷಗಳಾಗಿದ್ದವು ಎಂದು ಹಿರಿಯರು ನೆನಪು ಮಾಡಿಕೊಳ್ಳುತ್ತಿದ್ದಾರೆ. ಕುಡಿಯುವ ನೀರಿನ ಅಭಾವ ತಗ್ಗಿದೆ. ಭೂಮಿಯಲ್ಲಿ ಅಂತರ್ಜಲ ಹೆಚ್ಚಾಗಿ ರೈತನಿಗೆ ಸ್ವಲ್ಪ ಮಟ್ಟಿನ ದುಗುಡ ಕಡಿಮೆಯಾದಂತಾಗಿದೆ.
ಇತ್ತೀಚೆಗೆ ಸುರಿದ ಸತತ ಬಾರಿ ಮಳೆಯಿಂದಾಗಿ ಉತ್ತಮ ಬೆಳೆ ಬರಲಿದೆ ಎಂದು ನಾವುಗಳು ಕನಸು ಕಾಣುತ್ತಿರುವಾಗಲೆ ಇದೀಗ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಪ ಸ್ವಲ್ಪ ಬಂದಿದ್ದ ರಾಗಿ ಬೆಳೆ ಸಂಪೂರ್ಣ ನೆಲ ಕಚ್ಚುತ್ತಿದ್ದು ಕೈಯಿಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತ ಅರಳಿಕೆರೆ ಶಿವಲಿಂಗಪ್ಪ ಹತಾಶೆಯಿಂದ ನುಡಿದರು.
ಹೀಗೆಯೇ ಮಳೆ ಮುಂದುವರಿದರೆ ಸುಮಾರು ಹಣ ಖರ್ಚು ಮಾಡಿ ಉತ್ತುಬಿತ್ತಿ ಬೆಳೆದ ಬೆಳೆ ಕೈಗೆ ಬಾರದೆ ದನಕರುಗಳಿಗೆ ಮೇವು ಸಹ ಸಿಗದಂತಾಗಿ ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ಎಲ್ಲಿ ಸಿಲುಕಿಸುವುದೋ ಎಂಬ ಭಯ ರೈತರಲ್ಲಿ ಮೂಡಿದ್ದು ಪ್ರಕೃತಿ ವಿಕೋಪದಂತಹ ಇಂತಹ ಪರಿಸ್ಥಿಯಲ್ಲಿ ರೈತ ಇನ್ನೇನು ತಾನೆ ಮಾಡಲು ಸಾದ್ಯ ಎಂಬ ಯಕ್ಷ ಪ್ರಶ್ನೆ ಅವರಲ್ಲಿ ಕಾಡಲಾರಂಭಿಸಿದೆ. ಅತಿವೃಷ್ಟಿ ಇಲ್ಲವೆ ಅನಾವೃಷ್ಟಿ ಎಂಬಂತೆ ರೈತರು ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆಗಳು ಕೈಗೆ ಬಾರದಿದ್ದರೆ ಕುಟುಂಬ ನಿರ್ವಹಣೆ ಮಾಡುವುದಾದರೂ ಹೇಗೆ ಎಂಬ ಆಲೋಚನೆಯಲ್ಲಿ ತೊಡಗಿದ್ದು ಮುಂದೇಗೆ ಎಂಬುದು ತಾಲ್ಲೂಕಿನ ರೈತರಿಗೆ ಆತಂಕ ಎದುರಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ