ಹುಳಿಯಾರು
ಕಳೆದ ಹತ್ತನ್ನೆರಡು ದಿನಗಳಿಂದ ಹೋಬಳಿಯಾಧ್ಯಂತ ಮೋಡ ಮುಸುಕಿನ ವಾತಾವರಣವಿದ್ದು ಆಗಾಗ ಬಿಟ್ಟೂ ಬಿಡದಂತೆ ಸುರಿಯುತ್ತಿರುವ ಮಳೆಗೆ ಒಂದೆಡೆ ಸಂತಸ, ಮತ್ತೊಂದೆಡೆ ಆತಂಕ ಮನೆ ಮಾಡಿದೆ. ಮಳೆ ಹೊಡೆತಕ್ಕೆ ಸಿಕ್ಕಿ ತೆನೆ ಬಂದಿರುವ ರಾಗಿ ಮತ್ತು ಸಾಮೆ ಬೆಳೆ ನೆಲಕ್ಕೆ ಉರುಳಿ ಬಿದ್ದಿದೆ. ಇದರಿಂದ ರೈತರು ರಾಗಿ ಇಳುವರಿ ಕುಸಿಯುವ ಆತಂಕ ಎದುರಿಸುತ್ತಿದ್ದಾರೆ.
ಹುಳಿಯಾರು ಸುತ್ತ ಮುತ್ತ ಹತ್ತನ್ನೆರಡು ದಿನಗಳಿಂದ ರಾತ್ರಿ ಹೊತ್ತು ಸುರಿಯುತ್ತಿರುವ ಮಳೆ ರಾಗಿ ಮತ್ತು ಸಾಮೆ ಬೆಳೆಗೆ ಮುಳುವಾಗಿ ಪರಿಣಮಿಸುತ್ತಿದೆ. ಕಣಜ ತುಂಬುವ ಭರವಸೆ ನೀಡಿದ್ದ ಬೆಳೆಗಳು ಮಳೆಯ ಹೊಡೆತಕ್ಕೆ ಅಲ್ಲಲ್ಲಿ ನೆಲಕ್ಕೆ ಉರುಳುತ್ತಿದೆ. ಅಲ್ಲದೆ ಮಳೆ ದಿನ ಬಿಟ್ಟು ದಿನ ಬರುತ್ತಿದ್ದು ಉಳಿದ ರಾಗಿ, ಸಾಮೆ ನೆಲಕ್ಕುರುಳುವ ಆತಂಕ ರೈತರನ್ನು ಆವರಿಸಿದೆ.
ಈ ಬಾರಿ ಬಿತ್ತನೆ ತಡವಾದರೂ, ಹದವಾಗಿ ಮಳೆಯಾದ ಪರಿಣಾಮವಾಗಿ ರಾಗಿ ಮತ್ತು ಸಾಮೆ ಬೆಳೆ ಹುಲುಸಾಗಿ ಬೆಳೆದಿತ್ತು. ಕೆಲವು ತೆನೆ ಬಂದು ಕಾಳು ಕಟ್ಟಿ ಬಲಿಯುವ ಹಂತಕ್ಕೆ ಬಂದಿದೆ. ಆದರೆ ಮಳೆಗೆ ರಾಗಿ ದಂಟು ಚಾಪೆಯಂತೆ ಮಲಗಿದೆ. ಬಿದ್ದ ದಂಟಿನಿಂದ ಸರಿಯಾಗಿ ತೆನೆಯೂ ಬರುವುದಿಲ್ಲ, ಕಾಳೂ ಕಟ್ಟುವುದಿಲ್ಲ. ಕಾಳು ಕಟ್ಟಿದರೂ ಇಲಿಗಳಿಗೆ ಆಹಾರವಾಗುತ್ತದೆ, ಅಥವಾ ಮಣ್ಣಿಗೆ ಬೆರತು ಅಲ್ಲೇ ಮೊಳಕೆ ಹೊಡೆಯುತ್ತವೆ ವಿನಃ ರೈತನಿಗೆ ದಕ್ಕುವುದಿಲ್ಲ, ಅಲ್ಲದೆ ಬೇಸಿಗೆಯ ಒಣ ಮೇವನ್ನು ಒದಗಿಸುವ ರಾಗಿ ಹುಲ್ಲು ಕೂಡ ಮಳೆಯಿಂದಾಗಿ ಕೊಳೆಯುವ ಸ್ಥತಿ ತಲುಪುತ್ತದೆ ಎಂಬುದು ರೈತರ ಅಳಲಾಗಿದೆ.
ಕಳೆದ ವರ್ಷ ಮಳೆ ಕೈಕೊಟ್ಟ ಪರಿಣಾಮವಾಗಿ ಮಳೆ ಆಶ್ರಿತ ಪ್ರದೇಶದಲ್ಲಿ ರಾಗಿ ಬೆಳೆ ಒಣಗಿ ಹಾಳಾಗಿತ್ತು. ಒಂದು ಸೊಲಿಗೆ ರಾಗಿ ಮನೆಗೆ ಬಂದಿರಲಿಲ್ಲ. ಒಣಗಿದ ಪೈರನ್ನು ಕೊಯ್ದು ದನಗಳಿಗೆ ಹಾಕಲಾಗಿತ್ತು. ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ರಾಗಿ ಖರೀದಿಸಬೇಕಾದ ಅನಿವಾರ್ಯ ಎದುರಾಗಿತ್ತು. ಈ ವರ್ಷ ಎಲ್ಲ ಕಡೆ ರಾಗಿ ಬೆಳೆ ಚೆನ್ನಾಗಿದೆ. ಆದರೆ ನಿತ್ಯ ಸುರಿಯುತ್ತಿರುವ ಮಳೆ ರಾಗಿಗೆ ಮುಳುವಾಗಲು ಆರಂಭವಾಗಿದೆ. ದುಬಾರಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇತರೆ ಖರ್ಚುಗಳಿಂದಾಗಿ ಸಂಕಷ್ಟದಲ್ಲಿರುವ ಅನ್ನದಾತರ ಈ ಸಲ ಒಳ್ಳೆಯ ಫಸಲು ಕೈ ಸೇರುತ್ತದೆ ಎನ್ನುವ ಕಾಲಕ್ಕೆ ಮಳೆ ಅವಾಂತರ ಸೃಷ್ಟಿಸುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ