ಕಸದ ಗುಂಡಿಯಾದ ರಾಗಿಕಲ್ಲು ಗೋರಿಯ ಕಲ್ಯಾಣಿ..!

ನಗರಸಭೆಯ ನಿರ್ಲಕ್ಷ್ಯದಿಂದ ಕಲ್ಯಾಣಿಯೆ ಕಣ್ಮರೆ

ಶಿರಾ

    ಸಿರಾ ಎಂಬುದು ತಿನ್ನುವ ಕೇಸರಿಬಾತಿನ ಆಹಾರ ಪದಾರ್ಥದ ಸಿಹಿಯಷ್ಟೆ ಸವಿ ಅನ್ನಿಸಿದರೂ ಅದಕ್ಕಿಂತಲೂ ಮಿಗಿಲಾದ ಐತಿಹಾಸಿಕ ಪರಂಪರೆಯುಳ್ಳ ಪಳೆಯುಳಿಕೆಗಳು ಕೂಡ ಇಲ್ಲಿವೆ.ಶಿರಾ ನಗರದಲ್ಲಿನ ಇತಿಹಾಸವನ್ನು ಬಗೆದಷ್ಟೂ ಮೊಳಕೆಯೊಡೆ ಯುತ್ತಲೆ ಹೋಗುವುದು ಇಲ್ಲಿನ ಐತಿಹ್ಯವೂ ಹೌದು. ಹೀಗಾಗಿಯೇ ರಾಜ, ಮಹಾರಾಜರು, ಬ್ರಿಟೀಷರು ಆಳ್ವಿಕೆ ನಡೆಸಿದ ಸಂದರ್ಭದಲ್ಲಿ ಇದ್ದ ಅದೆಷ್ಟೋ ಕುರುಹುಗಳು ಈಗಲೂ ಜೀವಂತವಾಗಿವೆ. ಕಸ್ತೂರಿ ರಂಗಪ್ಪ ನಾಯಕನ ಕೋಟೆಯಿಂದ ಹಿಡಿದು ಐತಿಹಾಸಿಕ ದೇಗುಲಗಳು ತನ್ನದೇ ಆದ ಇತಿಹಾಸವನ್ನೊತ್ತು ಶಿರಾ ನಗರದ ಐತಿಹ್ಯ ಮೆರೆಸುತ್ತಿವೆ.

    ಇಂತಹ ಐತಿಹಾಸಿಕ ಪರಂಪರೆಯಲ್ಲಿ ರಾಗಿಕಲ್ಲು ಗೋರಿಯೂ ಒಂದಾಗಿದೆ. ರಾಗಿ ಕಲ್ಲುಗೋರಿಯು ಶಿರಾ ನಗರದ ಭವಾನಿ ನಗರದಲ್ಲಿದ್ದು, ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡ ಗೋರಿಯ ಕಟ್ಟಡವಿದೆ. ಕಟ್ಟಡದ ಸುತ್ತಲೂ ಗೋಡೆಯ ಮೇಲ್ಭಾಗದಲ್ಲಿ ರಾಗಿ ಕಲ್ಲಿನಂತಹ ಚಕ್ರಗಳನ್ನು ಅಳವಡಿಸಿರುವುದರಿಂದ

     ಇದನ್ನು ರಾಗಿ ಕಲ್ಲು ಗೋರಿ ಎನ್ನಲಾಗುತ್ತಿದೆ. ಇದರ ಒಳಗೆ ಯಾವುದೆ ಗೋರಿಗಳು ಕಾಣ ಬರುತ್ತಿಲ್ಲವಾದರೂ ಗೋರಿಗಳಿದ್ದ ಪಳೆಯುಳಿಕೆಗಳ ಕುರುಹುಗಳು ಮಾತ್ರ ಇವೆ.ಇದೇ ಗೋರಿಯ ಮುಂಭಾಗದಲ್ಲಿ ಕಳೆದ ಐದಾರು ವರ್ಷಗಳ ಹಿಂದೆ ಜನರ ಕಣ್ಣಿಗೆ ತುಂಬಾ ಚೆನ್ನಾಗಿಯೇ ಕಾಣುತ್ತಾ ಸಾರ್ವಜನಿಕರ ಕಣ್ಮನಗಳನ್ನು ತುಂಬುತ್ತಿದ್ದ ಕಲ್ಯಾಣಿಯೊಂದು ನಿಧಾನಗತಿಯಲ್ಲಿ ಕಣ್ಮರೆಯಾಗುತ್ತಿದೆ. ಸದರಿ ಕಲ್ಯಾಣಿಯನ್ನು ಸಂರಕ್ಷಿಸಬೇಕೆಂಬ ಸಾರ್ವಜನಿಕರ ಬೆಟ್ಟದಂತಹ ಆಸೆ ಈಗ ಕರಗಿ ಹೋಗಿದೆ.

     ಐದು ವರ್ಷಗಳ ಹಿಂದೆ ಒಂದಿಷ್ಟು ಜನರ ಕಣ್ಣಿಗೆ ಕಾಣುತ್ತಿದ್ದ ಕಲ್ಯಾಣಿ ಈಗ ಕಸದ ಗುಂಡಿಯಾಗಿ ಪರಿಣಮಿಸಿದೆ. ರಾಗಿ ಕಲ್ಲುಗೋರಿ ಬಳಿಯ ಸಾರ್ವಜನಿಕರ ಮನೆಗಳ ಮುಂದೆ ಕಸದ ತೊಟ್ಟಿಯೇ ಇಲ್ಲದ ಪರಿಣಾಮ ಸಾರ್ವಜನಿಕರು ಈ ಕಲ್ಯಾಣಿಯೊಳಗೆ ಕಸಕಡ್ಡಿ, ತ್ಯಾಜ್ಯ ವಸ್ತುಗಳನ್ನು ತಂದು ಹಾಕಿದ ಪರಿಣಾಮ ಕಲ್ಯಾಣಿ ಈಗ ಕಸದ ಗುಂಡಿಯಾಗಿದೆ. ಕಲ್ಯಾಣಿಯೊಳಗಿನ ಕಸದ ರಾಶಿಯಲ್ಲಿ ಹಂದಿಗಳು ರಾರಾಜಿಸುತ್ತಿದ್ದು ಕಸದ ಗಬ್ಬು ವಾಸನೆಯಿಂದ ರೋಗ ರುಜಿನಗಳಿಗೂ ಕಾರಣವಾಗಿದೆ.

      ಇದೆಲ್ಲಕ್ಕೂ ಮಿಗಿಲಾಗಿ ಹಳೆಯ ಮನೆಗಳ ಮಣ್ಣು ಸೇರಿದಂತೆ ರಾಶಿ ರಾಶಿ ಕಸಗಳನ್ನು ಕಲ್ಯಾಣಿಯಲ್ಲಿ ತಂದು ಹಾಕಿ ಕಲ್ಯಾಣಿಯನ್ನೇ ಮುಚ್ಚಿ ಹಾಕಿ ಇಲ್ಲೊಂದು ಕಲ್ಯಾಣಿ ಇತ್ತು ಎಂಬ ಕುರುಹನ್ನೇ ಇಲ್ಲದಂತೆ ಮಾಡಲು ವ್ಯವಸ್ಥಿತ ಸಂಚು ನಡೆದಿದೆ ಎನ್ನಲಾಗಿದೆ.ಇನ್ನಾದರೂ ನಗರಸಭೆಯಾಗಲಿ ಇಲ್ಲವೇ ಪ್ರಾಚ್ಯವಸ್ತು ಮತ್ತು ಸಂರಕ್ಷಣಾ ಇಲಾಖೆಯಾಗಲಿ ಈ ಕಲ್ಯಾಣಿಯನ್ನು ಸಂರಕ್ಷಣೆ ಮಾಡುವ ಅಗತ್ಯವಿದೆ.ಕಲ್ಯಾಣಿಯ ಹೂಳನ್ನು ತೆಗೆದು ಒಂದು ಸುಂದರವಾದ ಉದ್ಯಾನವನ್ನು ನಿರ್ಮಾಣ ಮಾಡಬಲ್ಲ ಸಾಕಷ್ಟು ಜಾಗವೂ ಇದ್ದು, ಈ ಬಗ್ಗೆ ಪ್ರಾಚ್ಯ ವಸ್ತು ಇಲಾಖೆ ಗಮನಹರಿಸಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link