ರಾಹುಲ್ ಗಾಂಧಿಗೆ ಮತ್ತೆ ಎಐಸಿಸಿ ಅಧ್ಯಕ್ಷ ಸ್ಥಾನ?

ಮಾರ್ಚ್‍ನಲ್ಲಿ ಪಟ್ಟಾಭಿಷೇಕ ಮಾಡುವ ಸಾಧ್ಯತೆ

ಬೆಂಗಳೂರು

    ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಂತರ ನೈತಿಕ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ರಾಹುಲ್ ಗಾಂಧಿಗೆ ಮತ್ತೆ ಅಧ್ಯಕ್ಷ ಸ್ಥಾನದ ಪಟ್ಟಾಭಿಷೇಕ ಮಾಡಲು ಕಾಂಗ್ರೆಸ್‍ನಲ್ಲಿ ಪ್ರಯತ್ನ ನಡೆಯುತ್ತಿದೆ. ರಾಹುಲ್ ಗಾಂಧಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ ನಂತರ ಅವರನ್ನೇ ಮುಂದುವರೆಸಲು ಪಕ್ಷದ ಎಲ್ಲ ಹಂತದ ನಾಯಕರು ನಿರಂತರ ಕಸರತ್ತು ನಡೆಸಿದ್ದರೂ, ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನೇ ಮಧ್ಯಂತರ ಅವಧಿಗೆ ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

ಜೈಪುರ ಅಧಿವೇಶನದಲ್ಲಿ ಘೋಷಣೆ ಸಾಧ್ಯತೆ:

    ರಾಜಸ್ತಾನದ ರಾಜಧಾನಿ ಜೈಪುರದಲ್ಲಿ ಮಾರ್ಚ್ ತಿಂಗಳಲ್ಲಿ ನಡೆಯುವ ಎಐಸಿಸಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಹುಲ್ ಗಾಂಧಿಯವರಿಗೆ ಎಐಸಿಸಿ ಪಟ್ಟ ಕಟ್ಟಲು ಕಾಂಗ್ರೆಸ್ ನಾಯಕರು ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

  ದೇಶದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಸರಿಸಾಟಿಯಾಗಿ ನಿಲ್ಲಲು ರಾಹುಲ್ ಗಾಂಧಿಯವರಿಗೆ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ಹಿರಿ ಕಿರಿಯ ನಾಯಕರು ಅವರ ನೇಮಕದ ಬಗ್ಗೆ ಒಲವು ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿಯೇ ಅವರಿಗೆ ಅಧಿಕಾರ ನೀಡಿದರೆ, ಮುಂದಿನ ಐದು ವರ್ಷದಲ್ಲಿ ದೇಶಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಅನುಕೂಲವಾಗುತ್ತದೆ ಎನ್ನುವುದು ಬಹುತೇಕ ನಾಯಕರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಲು ಎಲ್ಲ ನಾಯಕರು ಕಸರತ್ತು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

   ಈಗಾಗಲೇ ಈ ಕುರಿತು ಪಕ್ಷದ ಹಿರಿಯ ನಾಯಕರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಫೆಬ್ರವರಿಯಲ್ಲಿ ದೆಹಲಿ ಚುನಾವಣೆ ಮುಗಿದ ನಂತರ ಮಾರ್ಚ್‍ನಲ್ಲಿ ಜೈಪುರದಲ್ಲಿ ಅಧಿವೇಶನ ನಡೆಸಿ, ಅಲ್ಲಿಯೇ ಅಧಿಕೃತ ಘೋಷಣೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಬದಲಾದ ರಾಜಕೀಯ ವ್ಯವಸ್ಥೆ:

    ಲೋಕಸಭೆ ಚುನಾವಣೆಯ ನಂತರ ದೇಶದಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿದ್ದ ಜನರ ಒಲವು ಚುನಾವಣೆ ಮುಗಿದು ನೂರು ದಿನ ತುಂಬುವುದರಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 300 ಕ್ಕೂ ಹೆಚ್ಚು ಸ್ಥಾನ ಪಡೆದಿದ್ದ ಬಿಜೆಪಿ ಆ ನಂತರ ದೇಶದಲ್ಲಿ ನಡೆದ ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸೋಲು ಕಂಡಿದ್ದು, ಮಹಾರಾಷ್ಟ್ರ ಮತ್ತು ಜಾರ್ಖಂಡ್‍ನಲ್ಲಿ ಕಾಂಗ್ರೆಸ್ ಮೈತ್ರಿ ಕೂಟ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇದು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದಿರುವ ಬಿಜೆಪಿಯ ಓಟಕ್ಕೆ ಬ್ರೇಕ್ ಹಾಕಿದಂತಾಗಿದೆ.

     ಬಿಜೆಪಿ ನಿರ್ಧಾರಗಳ ಬಗ್ಗೆ ವಿರೋಧ:ಕೇಂದ್ರದಲ್ಲಿ ಬಿಜೆಪಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ವಿವಾದಾತ್ಮಕ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ನಡೆಯ ಬಗ್ಗೆ ದೇಶದಲ್ಲಿ ಸಾರ್ವಜನಿಕವಾಗಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

    ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿ ರದ್ದು ಪಡಿಸಿದಾಗ ದೇಶದ ಬಹುತೇಕ ಜನರು ಕೇಂದ್ರ ಸರ್ಕಾರದ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಕಾಂಗ್ರೆಸ್ ಮತ್ತು ಕೆಲವು ವಿರೋಧ ಪಕ್ಷಗಳು ಅದನ್ನು ವಿರೋಧಿಸಿದ್ದವು. ದೇಶದ ಬಹುಪಾಲು ಜನರ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶ್ಯಾದ್ಯಂತ ಎನ್‍ಆರ್ಸಿ ಹಾಗೂ ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವ ನಿರ್ಧಾರ ಕೈಗೊಂಡಿತು. ಪಕ್ಕದ ರಾಷ್ಟ್ರಗಳಿಂದ ನಿರಾಶ್ರಿತರಾಗಿ ವಲಸೆ ಬಂದಿರುವವರಿಗೆ ಭಾರತೀಯ ಪೌರತ್ವ ನೀಡುವ ವಿಷಯದಲ್ಲಿ ಧರ್ಮಗಳ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂದು ದೇಶದ ಸಾಮಾನ್ಯ ಜನರು ಬೀದಿಗಿಳಿದು ಹೋರಾಟ ಆರಂಭಿಸಿದರು.

    ಈ ವಿಷಯದಲ್ಲಿ ಕಾಂಗ್ರೆಸ್ ಆರಂಭದಲ್ಲಿ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿತು. ಆದರೆ, ಜನರೇ ನೇರವಾಗಿ ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿರುವಾಗ ಪ್ರಮುಖ ಪ್ರತಿಪಕ್ಷವಾಗಿ ಅವರಿಗೆ ಬೆಂಬಲವಾಗಿ ನಿಲ್ಲದೇ ಹೋದರೆ ಜನರ ವಿಶ್ವಾಸ ಗಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂಬ ಅಭಿಪ್ರಾಯ ಕಾಂಗ್ರೆಸ್‍ನಲ್ಲಿ ವ್ಯಕ್ತವಾಗಿದೆ. ಆದರೆ, ದೇಶ್ಯದ್ಯಂತ ಜನರ ಭಾವನೆಗಳಿಗೆ ಸ್ಪಂದಿಸಿ ಅವರೊಂದಿಗೆ ಬೀದಿಗಿಳಿದು ಹೋರಾಟ ಮಾಡಲು ನಾಯಕತ್ವದ ಅಗತ್ಯವಿರುವುದರಿಂದ ರಾಹುಲ್ ಗಾಂಧಿ ಮತ್ತೆ ಪಕ್ಷದ ನಾಯಕತ್ವ ವಹಿಸಿಕೊಂಡು ದೇಶಾದ್ಯಂತ ಬಿಜೆಪಿ ವಿರುದ್ಧ ಹೋರಾಟ ಹಮ್ಮಿಕೊಂಡರೆ ಪಕ್ಷಕ್ಕೆ ಶಕ್ತಿ ಬರುವುದಲ್ಲದೇ ಕೇಂದ್ರದ ಸರ್ಕಾರದ ವಿರುದ್ಧ ಜನಾಂದೋಲನ ಹುಟ್ಟು ಹಾಕಲು ಸಾಧ್ಯವಾಗುತ್ತದೆ ಎನ್ನುವ ಕಾರಣಕ್ಕೆ ಅವರನ್ನು ಮತ್ತೆ ಅಧ್ಯಕ್ಷ ಗಾದಿಯಲ್ಲಿ ಕೂಡಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.

     ಯುವ ನಾಯಕರ ಒತ್ತಡ: ಸೋನಿಯಾ ಗಾಂಧಿಯವರು ಮಧ್ಯಂತರ ಅವಧಿಗೆ ಅಧ್ಯಕ್ಷರಾಗಿದ್ದರೂ, ಬಹುತೇಕ ನಾಯಕರುಗಳು ಸೋನಿಯಾ ಗಾಂಧಿ ಅವರೊಂದಿಗೆ ಚರ್ಚಿಸುವುದರ ಜೊತೆಗೆ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ತಮ್ಮ ಬೇಡಿಕೆ ಸಲ್ಲಿಸುವ ಪರಿಪಾಠ ಮುಂದುವರೆಸಿಕೊಂಡು ಬಂದಿದ್ದಾರೆ.

    ಕೆಲವು ನಾಯಕರು ಸೋನಿಯಾ ಗಾಂಧಿಯವರ ಬಳಿ ತಮ್ಮ ಬೇಡಿಕೆಗೆ ಮಾನ್ಯತೆ ದೊರೆಯದಿದ್ದಾಗ ರಾಹುಲ್ ಗಾಂಧಿಯವರ ಮೂಲಕ ಸೋನಿಯಾ ಗಾಂಧಿಯವರ ಮನವೊಲಿಕೆ ಮಾಡುವ ಕಸರತ್ತು ನಡೆಸಿದ್ದಾರೆ. ಬಹುತೇಕ ಯುವ ನಾಯಕರು ಭವಿಷ್ಯದ ದೃಷ್ಠಿಯಿಂದ ರಾಹುಲ್ ಗಾಂಧಿಗೆ ಈಗಲೇ ಅಧಿಕಾರ ನೀಡಿದರೆ, ಮುಂದಿನ ಸಾರ್ವತ್ರಿಕ ಚುನಾವಣೆ ಹೊತ್ತಿಗೆ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ಹೊಂದಿದ್ದು, ಅವರಿಗೆ ಜವಾಬ್ದಾರಿ ನೀಡುವಂತೆ ಸೋನಿಯಾ ಗಾಂಧಿ ಮನವಿ ಮಾಡಿಕೊಳ್ಳುವುದರ ಜೊತೆಗೆ ಜವಾಬ್ದಾರಿ ವಹಿಸಿಕೊಳ್ಳುವಂತೆ ರಾಹುಲ್ ಗಾಂಧಿಗೂ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap