ಬೆಂಗಳೂರು
ಲೋಕಸಭಾ ಚುನಾವಣೆಯಲ್ಲಿನ ದಯನೀಯ ಸೋಲಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಲು ಮುಂದಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ತಡೆದಿದ್ದಾರೆ.
ಅಷ್ಟೇ ಅಲ್ಲದೆ ಇಂತಹ ಕಠಿಣ ಸ್ಥಿತಿಯಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ನೀವಲ್ಲದೆ ಬೇರೆ ಯಾರೂ ಸಮರ್ಥವಾಗಿ ನಿರ್ವಹಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.ಹಾಗೆಯೇ,ಮುಂದಿನ ದಿನಗಳಲ್ಲಿ ಮೈತ್ರಿಕೂಟದ ಅಂಗಪಕ್ಷವಾಗಿ ಕಾಂಗ್ರೆಸ್ ಪಕ್ಷ ನಿಮ್ಮ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.ಹಾಗೆಯೇ ಎಲ್ಲ ಬಗೆಯ ಸಹಕಾರ ನೀಡುತ್ತದೆ.ಹೀಗಾಗಿ ಯಾವ ಕಾರಣಕ್ಕೂ ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಡಿ ಎಂದು ರಾಹುಲ್‍ಗಾಂಧಿ ಹೇಳಿದ್ದು,ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಉನ್ನತ ಮೂಲಗಳ ಪ್ರಕಾರ,ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಒಗ್ಗೂಡಿ ಮುಂದುವರಿದರೂ ಕೇವಲ ಎರಡು ಸ್ಥಾನಗಳನ್ನಷ್ಟೇ ಗಳಿಸುವ ಹೀನಾಯ ಸ್ಥಿತಿ ಬಂತು.ಇದಕ್ಕೆ ಮೈತ್ರಿ ಪಕ್ಷಗಳಲ್ಲಿ ಸೌಹಾರ್ದತೆ ಇಲ್ಲದಿರುವುದೇ ಮುಖ್ಯ ಕಾರಣ.ಹೀಗಾಗಿ ಸಿಎಂ ಹುದ್ದೆಯಲ್ಲಿ ನಾನು ಮುಂದುವರೆಯುವುದಿಲ್ಲ.
ಆದ್ದರಿಂದ ನಾನು ರಾಜೀನಾಮೆ ನೀಡುತ್ತೇನೆ.ಮುಂದಿನ ದಿನಗಳಲ್ಲಿ ನಿಮ್ಮ ಪಕ್ಷದವರನ್ನೇ ಸಿಎಂ ಮಾಡಿ,ನಾವು ಬಾಹ್ಯ ಬೆಂಬಲ ನೀಡುತ್ತೇವೆ ಎಂದು ಕುಮಾರಸ್ವಾಮಿ ಗುರುವಾರ ರಾತ್ರಿ ದೂರವಾಣಿ ಸಂಭಾಷಣೆಯ ಸಮಯದಲ್ಲಿ ರಾಹುಲ್‍ಗಾಂಧಿ ಅವರಿಗೆ ವಿವರಿಸಿದರು.
ನನಗೆ ಸಿಎಂ ಪದವಿ ಬೇಕು ಎಂದು ನಾನೇನೂ ನಿಮ್ಮನ್ನು ಕೇಳಿರಲಿಲ್ಲ.ಹಾಗೆಯೇ ಕಾಂಗ್ರೆಸ್ ಜತೆ ಹೋಗುವ ವಿಷಯದಲ್ಲಿ ಜೆಡಿಎಸ್ ಪಕ್ಷದ ಶಾಸಕರಿಗೆ ಆಸಕ್ತಿಯೂ ಇರಲಿಲ್ಲ.ಆದರೂ ತಂದೆಯವರ(ದೇವೇಗೌಡರು)ಮಾತು ಕೇಳಿ ನಿಮ್ಮ ಜತೆ ಕೈ ಜೋಡಿಸಿದೆವು.
ಆದರೆ ಸರ್ಕಾರ ರಚನೆಯಾದ ಆರಂಭದಿಂದ ಇಲ್ಲಿಯವರೆಗೆ ರಾಜ್ಯ ಕಾಂಗ್ರೆಸ್ ನಾಯಕರು ನನ್ನ ಕೈ ಕಟ್ಟಿ ಹಾಕುವ ಕೆಲಸ ಮಾಡಿದ್ದಾರೆಯೇ ಹೊರತು ಬೇರೇನೂ ಇಲ್ಲ.ಇಂತಹ ಪರಿಸ್ಥಿತಿಯಿಂದಾಗಿ ನಾವು ಒಗ್ಗೂಡಿ ಕೆಲಸ ಮಾಡಲು ಆಗಲಿಲ್ಲ.ಹೀಗಿರುವಾಗ ನಾನು ಸಿಎಂ ಹುದ್ದೆಯಲ್ಲಿ ಮುಂದುವರೆಯುವುದು ಸರಿಯೂ ಅಲ್ಲ.ಹೀಗಾಗಿ ನಾನು ರಾಜೀನಾಮೆ ಕೊಡುತ್ತೇನೆ.ನೀವು ನಿಮಗಿಚ್ಚೆ ಬಂದವರನ್ನು ಸಿಎಂ ಮಾಡಿ ಎಂದು ಕುಮಾರಸ್ವಾಮಿ ಅವರು ಹೇಳಿದಾಗ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ತಕ್ಷಣವೇ ಸಮಾಧಾನ ಮಾಡಿದ್ದಾರೆ.
ಫಲಿತಾಂಶ ಹೀಗಿರುತ್ತದೆ ಎಂದು ನಾವೂ ಬಾವಿಸಿರಲಿಲ್ಲ.ಅದಕ್ಕೇನು ಕಾರಣ?ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಿಕೊಳ್ಳೋಣ.ಆದರೆ ರಾಜ್ಯ ಸರ್ಕಾರ ಯಾವ ಕಾರಣಕ್ಕೂ ಅಭದ್ರವಾಗಕೂಡದು.ನೀವೇ ಸಿಎಂ ಆಗಿ ಮುಂದುವರೆಯಬೇಕು ಎಂದು ರಾಹುಲ್‍ಗಾಂಧಿ ಹೇಳಿದರು.
ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಮುಜುಗರವಾಗದಂತೆ ನೋಡಿಕೊಳ್ಳಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೆ.ಸಿ.ವೇಣುಗೋಪಾಲ್ ಅವರಿಗೆ ಸೂಚನೆ ನೀಡುವುದಾಗಿ ರಾಹುಲ್‍ಗಾಂಧಿ ಭರವಸೆ ನೀಡಿದ ಸ್ವಲ್ಪ ಹೊತ್ತಿನಲ್ಲೇ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾದವು.
ಉನ್ನತ ಮೂಲಗಳ ಪ್ರಕಾರ ಗುರುವಾರ ರಾತ್ರಿಯೇ ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಸಂಪರ್ಕಿಸಿದ ಕೆ.ಸಿ.ವೇಣುಗೋಪಾಲ್ ಅವರು,ಸರ್ಕಾರಕ್ಕೆ ತೊಂದರೆಯಿಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.
ಅವರ ಮಾತಿನ ಬೆನ್ನಲ್ಲೇ ಸಿದ್ಧರಾಮಯ್ಯ ಅವರೂ ತಮ್ಮ ಆಪ್ತರೊಂದಿಗೆ ಚರ್ಚಿಸಿದ್ದಲ್ಲದೆ ಸರ್ಕಾರಕ್ಕೆ ಯಾವ ಮುಜುಗರವಾಗದಂತೆ ನೋಡಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಲ್ಲದೆ ಇಂದು ಸಿಎಂ ಕುಮಾರಸ್ವಾಮಿ ಅವರ ಜತೆಗೂ ಮಾತನಾಡಿ,ಮುಂದಿನ ದಿನಗಳಲ್ಲಿ ನಿಮಗೆ ಯಾವ ಮುಜುಗರವೂ ಆಗುವುದಿಲ್ಲ ಎಂದು ಹೇಳಿದರು.
ನೀವು ಸಚಿವರು ಹಾಗೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.ಕಾಂಗ್ರೆಸ್ ಪಕ್ಷದ ವತಿಯಿಂದ ಒಬ್ಬೇ ಒಬ್ಬ ಶಾಸಕ ಬಿಜೆಪಿ ಕಡೆ ಹೋಗದಂತೆ ನೋಡಿಕೊಳ್ಳುತ್ತೇನೆ ಎಂದೂ ಸಿದ್ಧರಾಮಯ್ಯ ಅವರು ನೇರವಾಗಿ ಹೇಳಿದರು.
ಈ ಮಧ್ಯೆ ಇಂದು ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಸಚಿವರ ಸಭೆ ನಡೆಸಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ತದ ನಂತರ ಸುದ್ದಿಗಾರರ ಜತೆ ಮಾತನಾಡಿ,ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ.ಯಾವ ಕಾರಣಕ್ಕೂ ಅದಕ್ಕೆ ಧಕ್ಕೆಯಾಗುವುದಿಲ್ಲ ಎಂದರು.ಲೋಕಸಭಾ ಚುನಾವಣೆಯ ಫಲಿತಾಂಶ ಕೇಂದ್ರ ಸರ್ಕಾರದ ಸಾಧನೆಗೆ ಸಂಬಂಧಿಸಿದ್ದು.ಕರ್ನಾಟಕದಲ್ಲಿ ಮೈತ್ರಿಕೂಟದ ಪರವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನಾದೇಶ ದೊರೆತಿದೆ ಎಂದು ಅವರು ವಿವರಿಸಿದರು.ಸರ್ಕಾರವೂ ಬೀಳುವುದಿಲ್ಲ.ಮಧ್ಯಂತರ ಚುನಾವಣೆಯೂ ನಡೆಯುವುದಿಲ್ಲ .ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಮುಂದುವರೆಯುತ್ತದೆ.ಇದರಲ್ಲಿ ಯಾವ ಅನುಮಾನವೂ ಬೇಕಿಲ್ಲ ಎಂದವರು ವಿವರಿಸಿದರು.