ಸಂಚಾರ ಮಾಡುತ್ತಿದ್ದ ರಸ್ತೆ ಬಂದ್ ಮಾಡಿದ್ದ ರೈಲ್ವೇ ಎಂಜಿನಿಯರ್‍ಗಳು

ಸ್ಕೈವಾಕರ್ ನಿರ್ಮಾಣಕ್ಕೆ ಒತ್ತಾಯಿಸುತ್ತಿರುವ ಸ್ಥಳೀಯರು
ತುಮಕೂರು
ವಿಶೇಷ ವರದಿ: ರಾಕೇಶ್.ವಿ 
      ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿಯ ಚಿಕ್ಕಹಳ್ಳಿ ಗ್ರಾಮದಿಂದ 8 ಹಳ್ಳಿಯ ಗ್ರಾಮಸ್ಥರ ಓಡಾಟಕ್ಕೆ ತೊಂದರೆಯಾಗಿದ್ದು, ಮಿನಿ ಅಂಡರ್‍ಪಾಸ್ ಅಥವಾ ಸ್ಕೈವಾಕರ್ ಮಾಡಿಕೊಡುವಂತೆ ಸತತವಾಗಿ ಮನವಿಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನೆಯಾಗದೆ ರೋಸಿಹೋಗಿದ್ದಾರೆ.
 
     ಚಿಕ್ಕಹಳ್ಳಿಯಲ್ಲಿ ಸುಮಾರು 300 ಕುಟುಂಬಗಳು ವಾಸ ಮಾಡುತ್ತಿವೆ. ದಿನನಿತ್ಯದ ಕೆಲಸ ಕಾರ್ಯಗಳಿಗೆ ತುಮಕೂರಿಗೆ ಬರುತ್ತಾರೆ. ಈ ಗ್ರಾಮಕ್ಕೆ ಇದ್ದದ್ದು ಒಂದೇ ರಸ್ತೆ. ಅನಾದಿಕಾಲದಿಂದಲೂ ಇವರು ಈ ರಸ್ತೆಯ ಮೂಲಕವೇ ಓಡಾಡುತ್ತಿದ್ದರು. ಕಳೆದ  ಒಂದು ವರ್ಷದ ಹಿಂದೆ ರೈಲ್ವೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದ್ದಕ್ಕಿದ್ದ ಹಾಗೆ ರಸ್ತೆಯನ್ನು ಮುಚ್ಚಿದ್ದಾರೆ. ನೂತನವಾಗಿ ರೈಲ್ವೇ ಕೆಳಸೇತುವೆಯನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಇದು ಅವೈಜ್ಞಾನಿಕವಾಗಿದ್ದು, ಬಳಕೆಗೆ ಬರುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. 
      ಚಿಕ್ಕಹಳ್ಳಿಯ ಮಧ್ಯಭಾಗದಲ್ಲಿ ರೈಲ್ವೇ ಹಳಿಗಳು ಹಾದು ಹೋಗಿವೆ. ಪಕ್ಕದಲ್ಲಿಯೇ ರಾಷ್ಟ್ರೀಯ ಹೆದ್ದಾರಿಯೂ ಇದೆ. ಇದರಿಂದ ಹಳ್ಳಿ ಇಬ್ಬಾಗವಾಗಿದೆ. ಇವರಿಗೆ ಓಡಾಡಲು ಎಲ್‍ಸಿ 30 ಕೆಎಂ 57/100-200ರ ಗೇಟ್‍ಗೆ ಹೊಂದಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಬಸ್ ನಿಲ್ದಾಣವಿದೆ. ಇಲ್ಲಿಗೆ ಬರಲು ಇದ್ದ ರಸ್ತೆಗೆ ರೈಲ್ವೇ ಗೇಟ್ ಅನ್ನು ಅಡ್ಡ ಹಾಕಿದ್ದಾರೆ. ಈ ರಸ್ತೆಯಲ್ಲಿ ಯಾರೂ ಸಂಚರಿಸದಂತೆ ಮಾಡಿದ್ದಾರೆ. 
     ಈ ರಸ್ತೆಗೆ ಬದಲಾಗಿ ಊರ ಆಚೆಗೆ ಅರ್ಧ ಕಿ.ಮೀ ದೂರದಲ್ಲಿ ರೈಲ್ವೇ ಅಂಡರ್‍ಪಾಸ್ ನಿರ್ಮಾಣ ಮಾಡಲಾಗಿದೆ. ಈ ಮುಂಚೆ ಅಂಡರ್‍ಪಾಸ್ ಪಕ್ಕದಲ್ಲಿಯೇ ಮಳೆ ನೀರು ಹರಿಯಲೆಂದು ಕಿರಿದಾದ ಸೇತುವೆಯನ್ನು ನಿರ್ಮಿಸಲಾಗಿತ್ತು. ಇದೀಗ ಅದರ ಪಕ್ಕದಲ್ಲಿಯೇ ಜನರು ಸಂಚರಿಸಲು ಸೇತುವೆಯನ್ನು ನಿರ್ಮಾಣ ಮಾಡಿದ್ದಾರೆ. ಮಳೆ ಬಂದರೆ ಈ ಸೇತುವೆ ಮೇಲೆಯಿಂದ ನೀರು ತುಟ್ಟಿಕ್ಕುತ್ತವೆ. ಜೊತೆಗೆ ಹರಿದು ಬರುವ ಮಳೆ ನೀರಿನ ಜೊತೆಗೆ ಮಣ್ಣು ಬಂದು ಕೆಳಸೇತುವೆಯಲ್ಲಿ ಕೂಡಿಕೊಳ್ಳುತ್ತದೆ. ಇದರಿಂದ ಓಡಾಡುವುದು ಸಮಸ್ಯೆಯಾಗಿದೆ.
ಐದಾರು ಹಳ್ಳಿಯ ಜನರಿಗೆ ಇರುವುದೊಂದೇ ರಸ್ತೆ
ಚಿಕ್ಕಹಳ್ಳಿಯಿಂದ ಮೇಲ್ಬಾಗದಲ್ಲಿ ಬರುವ ಸುಮಾರು ಐದಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಲಿಂಕ್ ರಸ್ತೆ ಇದಾಗಿದ್ದು, ಡಾಣಾಪುರ, ಸಿದ್ದೇಗೌಡನಪಾಳ್ಯ, ಪೆಮ್ಮನಹಳ್ಳಿ ಕೆಳಭಾಗದಿಂದ ದೇವರಹೊಸಹಳ್ಳಿ, ಲಕ್ಷ್ಮೀಪುರ ಗ್ರಾಮಸ್ಥರು  ಈ ರಸ್ತೆಯ ಮೂಲಕವೇ ಓಡಾಡಬೇಕು. ಕೆಳಭಾಗದಿಂದ ಮೇಲ್ಭಾಗದಲ್ಲಿರುವ ಜಮೀನುಗಳಿಗೆ ಹೋಗಲು ಇದೇ ರಸ್ತೆ ಮೂಲ. ದನಕರುಗಳನ್ನು ಹೊಲದ ಬಳಿ ಒಡೆದುಕೊಂಡು ಹೋಗಲು ಇರುವುದು ಇದೊಂದೆ ರಸ್ತೆ. ಶಾಲಾ, ಕಾಲೇಜು ಮಕ್ಕಳು ಈ ರಸ್ತೆ ಮೂಲಕವೇ ಓಡಾಡಬೇಕು. ಆದರೆ ಈ ರಸ್ತೆಯನ್ನು ಬಂದ್ ಮಾಡಿದಾಗಿನಿಂದಲೂ ಓಡಾಡಲು ತುಂಬಾ ಕಷ್ಟಕರವಾಗಿದೆ. 
ವಿದ್ಯುತ್ ಸೌಕರ್ಯ ಇಲ್ಲ
    ಚಿಕ್ಕಹಳ್ಳಿ ಗ್ರಾಮಕ್ಕೆ ತೆರಳಲು ಇರುವ ರೈಲ್ವೇ ಕೆಳಸೇತುವೆಯಲ್ಲಿ ಸಂಜೆಯಾಗುತ್ತಿದ್ದಂತೆ ಕತ್ತಲೆ ಆವರಿಸಿಕೊಳ್ಳುತ್ತಿದೆ. ಇಲ್ಲಿ ಯಾವುದೇ ರೀತಿಯ ವಿದ್ಯುತ್ ಸೌಲಭ್ಯವಿಲ್ಲದ ಕಾರಣ ಕತ್ತಲೆಯಲ್ಲಿಯೆ ಓಡಾಡಬೇಕು. ರಾತ್ರಿ ವೇಳೆಯಲ್ಲಿ ಕಳ್ಳಕಾಕರ ಕಾಟ ಹೆಚ್ಚಾಗಿದ್ದು, ಸಂಜೆ ಮೇಲೆ ಇಲ್ಲಿ ಓಡಾಡಲು ಆಗುವುದಿಲ್ಲ. ರೈಲ್ವೇ ಕೆಳಸೇತುವೆಯಿಂದ ಗ್ರಾಮದೊಳಗೆ ಹೋಗಲು ರಸ್ತೆ ಇಲ್ಲದಾಗಿತ್ತು. ಆದರೆ ಕೆಲ ತಿಂಗಳ ಹಿಂದೆಯಷ್ಟೇ ಸಿಸಿ ರಸ್ತೆ ಹಾಕಿಸಲಾಯಿತಾದರೂ ವಿದ್ಯುತ್ ಕಂಬಗಳನ್ನು ಇಟ್ಟು, ವಿದ್ಯುತ್ ಸೌಕರ್ಯ ಕಲ್ಪಿಸದೇ ಇರುವುದು ತೀವ್ರ ಸಮಸ್ಯೆಯಾಗಿದೆ.
ಸ್ಕೈವಾಕರ್ ಅಥವಾ ಸಣ್ಣ ಅಂಡರ್‍ಪಾಸ್ ಬೇಡಿಕೆ
     ಸದ್ಯ ಬಂದ್ ಮಾಡಲಾದ ರಸ್ತೆಯ ಬಳಿ ಕಿರಿದಾದ ಅಂಡರ್‍ಪಾಸ್ ನಿರ್ಮಾಣ ಮಾಡಿಕೊಡಬೇಕು. ಇಲ್ಲವಾದಲ್ಲಿ ಸ್ಕೈವಾಕರನ್ನು ನಿರ್ಮಾಣ ಮಾಡಿಕೊಡಬೇಕು ಎಂಬುದು ಸ್ಥಳೀಯರ ಪ್ರಮುಖ ಬೇಡಿಕೆಯಾಗಿದೆ. ಈ ಸಂಬಂಧ ಪ್ರತಿಭಟನೆ ಮಾಡುವುದಕ್ಕೂ ಸಿದ್ದರಾಗಿದ್ದರು. ಅಷ್ಟರಲ್ಲಿ ಈ ಹಿಂದೆ ಸಂಸದರಾಗಿದ್ದ ಮುದ್ದಹನುಮೆಗೌಡರು ಸ್ಥಳಕ್ಕೆ ಭೇಟಿ ನೀಡಿ ಸ್ಕೈವಾಕರ್ ನಿರ್ಮಾಣ ಮಾಡಲು ಸೂಚಿಸಿದ್ದರು. ಆದರೂ ಇಲ್ಲಿಯವರೆಗೆ ಸ್ಕೈವಾಕರ್ ನಿರ್ಮಾಣ ಮಾಡುವ ಗೋಜಿಗೆ ಯಾರೂ ಹೋಗಿಲ್ಲ.
ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಸಂಸದ ಮುದ್ದಹನುಮೆಗೌಡರು
    ಜನವರಿ ತಿಂಗಳಿನಲ್ಲಿ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ನಂತರ ಸಮಸ್ಯೆ ಬಗ್ಗೆ ಅರಿತ ಸಂಸದ ಎಸ್.ಪಿ, ಮುದ್ದಹನುಮೆಗೌಡರು ಚಿಕ್ಕಹಳ್ಳಿ ಗ್ರಾಮಕ್ಕೆ ರೈಲ್ವೇ ಎಂಜಿನಿಯರ್‍ರನ್ನು ಜೊತೆಗೆ ಕರೆದುಕೊಂಡು ಹೋಗಿ ಅಲ್ಲಿನ ಸಮಸ್ಯೆಯನ್ನು ಸ್ಥಳೀಯರಿಂದ ಆಲಿಸಿದರು. ಜನರ ಸಮಸ್ಯೆಗಳನ್ನು ಅರಿತುಕೊಂಡು ಒಂದು ವಾರದೊಳಗೆ ರಸ್ತೆಯ ಅಭಿವೃದ್ಧಿ ಹಾಗೂ ವಿದ್ಯುತ್ ಸೌಲಭ್ಯ ಕಲ್ಪಿಸುವ ಬಗ್ಗೆ ಭರವಸೆ ನೀಡಿದ್ದರು.
     ಇನ್ನೂ ಬಂದ್ ಮಾಡಲಾದ ರಸ್ತೆಯ ಬಗ್ಗೆ ರೈಲ್ವೇ ಎಂಜಿನಿಯರ್‍ಗೆ ಪರಿಶೀಲನೆ ನಡೆಸಿ ಅಲ್ಲಿ ಅಂಡರ್‍ಪಾಸ್ ಮಾಡಲು ನೀಲಿ ನಕ್ಷೆ ತಯಾರಿಸಿಲು ಸೂಚನೆ ನೀಡಿದ್ದರು. ಒಂದು ವೇಳೆ ಬಂದ್ ಮಾಡಲಾದ ರಸ್ತೆ ಬಳಿ ಅಂಡರ್‍ಪಾಸ್ ನಿರ್ಮಾಣ ಮಾಡಲು ಸಾಧ್ಯವಿಲ್ಲವೆಂದಾದಲ್ಲಿ ಸ್ಕೈವಾಕರ್ ನಿರ್ಮಾಣ ಮಾಡಿಕೊಡಲಾಗುವುದು ಎಂದು ತಿಳಿಸಿದ್ದರು.
ಬೆಸ್ಕಾಂ ಎಂಜಿನಿಯರ್‍ಗಳು ನಾಪತ್ತೆ
    ಮುದ್ದಹನುಮೇಗೌಡರು ಸಂಸದರಾಗಿದ್ದಾಗ ಇಲ್ಲಿಗೆ ಭೇಟಿ ನೀಡಿ ಸಿಸಿರಸ್ತೆ ಹಾಕಿಸಿ ವಿದ್ಯುತ್ ಸೌಲಭ್ಯ ಕೊಡಿಸಲು ಸೂಚಿಸಿದ್ದರು. ಇದಾದ ನಂತರ ಹಿರೇಹಳ್ಳಿ ಮಂಡಲ ಪಂಚಾಯಿತಿ ಸದಸ್ಯರು ಬೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದ್ದು ಅದಕ್ಕೆ ಸಲ್ಲಿಸಬೇಕಾದ ನಿರ್ದಿಷ್ಠ ಶುಲ್ಕವನ್ನು ಜಮಾ ಮಾಡಿದ್ದಾರೆ. ಆದರೂ ಬೆಸ್ಕಾಂ ಎಂಜಿನಿಯರ್‍ಗಳು ಇಂದು ನಾಳೆ ಎಂಬ ಸಬೂಬುಗಳನ್ನೇ ಹೇಳುತ್ತಿದ್ದಾರೆ. ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುವುದಿಲ್ಲ. ಕಚೇರಿಗೆ ಹೋದರೆ ಅಲ್ಲಿಯೂ ಸಿಗುವುದಿಲ್ಲ. ಹೀಗಿದ್ದಾಗ ಯಾರನ್ನು ಸಂಪರ್ಕ ಮಾಡಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸುತ್ತಾರೆ. 
ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು
     ಸ್ಕೈವಾಕರ್ ಮತ್ತು ಕೆಳಸೇತುವೆ ಮಾಡಿಕೊಡುವುದೇ ಪ್ರಮುಖ ಬೇಡಿಕೆಯಾಗಿದ್ದು, ಅದನ್ನು ಈಡೇರಸದಿದ್ದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿಕೊಂಡು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಹಲವು ಬಾರಿ ರೈಲ್ವೇ ಇಲಾಖೆಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ ನಂತರವೂ ಯಾವುದೇ ಪ್ರಯೋಜನವಾಗಿಲ್ಲವಾದ್ದರಿಂದ ರೈಲು ತಡೆ ಮಾಡಿ ಉಗ್ರಹೋರಾಟ ಮಾಡಲು ಕೂಡ ಸಜ್ಜಾಗಿದ್ದಾರೆ. ಹಲವು ದಿನಗಳಿಂದ ಅಧಿಕಾರಿಗಳಿಗೆ ಮನವಿ ಮಾಡಿ ಮಾಡಿ ಬೇಸರಗೊಂಡಿದ್ದು, ಕೊನೆಯದಾಗಿ ಪ್ರತಿಭಟನೆ ಮಾಡಿಯಾದರೂ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲು  ಇಲ್ಲಿನ ನಿವಾಸಿಗಳು ಸಿದ್ದರಾಗಿದ್ದಾರೆ.  
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap