ದಾವಣಗೆರೆ:
ನಗರದ ಅಶೋಕ ರೈಲ್ವೆ ಗೇಟ್‍ಗೆ ಸಂಬಂಧಿಸಿದಂತೆ ಅಧಿಕಾರಿಗಳು ಈಗಾಗಲೇ 3 ರೀತಿಯಲ್ಲಿ ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣದ ಬಗ್ಗೆ ಕ್ರಿಯಾ ಯೋಜನೆ ರೂಪಿಸಿದ್ದು, ಈ ಮೂರರಲ್ಲಿ ಕಾರ್ಯಸಾಧುವಾದ ಯೋಜನೆಯನ್ನು ಅಂತಿಮಗೊಳಿಸಿ ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭರವಸೆ ನೀಡಿದರು.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನಗರದ ಅಶೋಕ ರೈಲ್ವೆ ಗೇಟ್ ಸಮಸ್ಯೆಗೆ ಮುಕ್ತಿ ಕಾಣಿಸಲು ಗಂಭೀರ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಧಿಕಾರಿಗಳು, ಮಂಗಳವಾರ ರೈಲ್ವೆ ಗೇಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಾರ್ವಜನಿಕರಿಗೂ ಹೆಚ್ಚಿನ ತೊಂದರೆಯಾಗದಂತೆ ಹಾಗೂ ಸರ್ಕಾರಕ್ಕೂ ಹೊರೆಯಾಗದಂತೆ ಎಲ್ಲರಿಗೂ ಅನುಕೂಲವಾಗುವ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಇಲ್ಲಿ ಮೇಲ್ಸೇತುವೆ ನಿರ್ಮಿಸಬೇಕೋ ಅಥವಾ ಕೆಳ ಸೇತುವೆ ನಿರ್ಮಿಸಬೇಕೆಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ರೈಲ್ವೆ ಗೇಟ್ ಸಮಸ್ಯೆ ಪರಿಹಾರಕ್ಕೆ ಎಲ್ಲರ ಸಹಕಾರ ಅವಶ್ಯವಿದೆ. ಎಲ್ಲಾ ರಾಜಕೀಯ ಮುಖಂಡರ ಮನವೊಲಿಸಿ ಆದಷ್ಟು ಬೇಗ ಕಾಮಗಾರಿ ಆರಂಭಿಸುವ ವಿಶ್ವಾಸವಿದೆ. ಮಾಧ್ಯಮದವರ ಮತ್ತು ಅಧಿಕಾರಿಗಳ ಸಹಕಾರದಿಂದ ಒಂದು ತಂಡವಾಗಿ ಕಾರ್ಯ ನಿರ್ವಹಿಸಲಾಗುವುದು. ಜನರು ಇಪ್ಪತ್ತು ವರ್ಷ ಕಾದಿದ್ದಾರೆ, ಇನ್ನು ಸ್ವಲ್ಪ ದಿನ ಕಾಯಬೇಕು. ಈ ಕಾರ್ಯದಲ್ಲಿ ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸವಿದೆ ಎಂದು ಹೇಳಿದರು.
ಹಿಂದಿನ ಘಟನೆಗಳೆಲ್ಲಾ ಈಗ ಇತಿಹಾಸ. ನಕಾರಾತ್ಮಕ ಭಾವನೆ ಬೇಡ. ಒಳ್ಳೆಯ ಆಲೋಚನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ. ಎಲ್ಲರೂ ಒಗ್ಗಟ್ಟಿನಿಂದ ಜನರ ಒಳಿತಿಗೆ ಶ್ರಮಿಸೋಣ. ಇದು ಯಾರೊಬ್ಬರ ಹಿತಾಸಕ್ತಿಯೂ ಅಲ್ಲ, ಊರಿನ ಹಿತಾಸಕ್ತಿ. ಎಲ್ಲರೂ ಮನಸ್ಸು ಮಾಡಿ ಕೈ ಜೋಡಿಸಿದರೆ ಈ ಕಾರ್ಯದಲ್ಲಿ ಯಶಸ್ಸು ಸಿಗಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಆಶಾ ಭಾವನೆ ಮೂಡಿಸಿದ ಕ್ರಮ:
ಹಳೇ ದಾವಣಗೆರೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾದ ಅಶೋಕ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳ ಓಡಾಟ ಇದ್ದೇ ಇರುತ್ತದೆ. ಆದರೆ ರೈಲುಗಳು ಬರುವಾಗ ದಿನಕ್ಕೆ 20ಕ್ಕೂ ಅಧಿಕ ಬಾರಿ ಗೇಟ್ ಹಾಕುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ತುರ್ತು ಕೆಲಸದ ನಿಮಿತ್ತ ಹೋಗುವವರು ದಿನಂಪ್ರತಿ ಅನಾನುಕೂಲ ಅನುಭವಿಸುವಂತಾಗಿದೆ.
ಅಶೋಕ ಚಿತ್ರಮಂದಿರದ ಬಳಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಫ್ಲೈ ಓವರ್ ನಿರ್ಮಿಸಬೇಕೆಂಬ ಬೇಡಿಕೆ ಇದ್ದರೂ ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಇದೀಗ ನೂತನ ಜಿಲ್ಲಾಧಿಕಾರಿಗಳು ಜನರಿಗಾಗುತ್ತಿರುವ ಸಮಸ್ಯೆ ಪರಿಹರಿಸಲು ಮುಂದಾಗಿರುವುದು ಜನರಲ್ಲಿ ಆಶಾಭಾವ ಮೂಡಿಸಿದಂತಾಗಿದೆ.
ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ತಹಶೀಲ್ದಾರ ಸಂತೋಷ್ ಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಪಿಡಬ್ಲ್ಯುಡಿ ಎಂಜಿನಿಯರ್‍ಗಳಾದ ರಮೇಶ್, ಮಲ್ಲಿಕಾರ್ಜುನ್, ಆರ್‍ಟಿಓ ಎನ್.ಜೆ.ಬಣಕಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ