ದಾವಣಗೆರೆ
ಚಿಕ್ಕಜಾಜೂರು-ಹುಬ್ಬಳ್ಳಿ ಡಬ್ಲಿಂಗ್ ಯೋಜನೆಯಡಿ 11 ಕೋಟಿ ರೂ. ವೆಚ್ಚದಲ್ಲಿ ನಗರದ ರೈಲ್ವೆ ನಿಲ್ದಾಣದ ಹೊಸ ಕಟ್ಟಡ ನಿರ್ಮಿಸಲು ರೈಲ್ವೆ ಇಲಾಖೆಯಿಂದ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ.
ನಗರದ ರೈಲು ನಿಲ್ದಾಣದಲ್ಲಿ ಭಾನುವಾರ ನೈರುತ್ಯ ರೈಲ್ವೆ ವತಿಯಿಂದ 114 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಿರುವ 18.95 ಕಿ.ಮೀ ಉದ್ದದ ತೋಳಹುಣಸೆ-ಮಾಯಕೊಂಡ ನಡುವಿನ ದ್ವಿಪಥ ರೈಲು ಮಾರ್ಗವನ್ನು ಲೋಕಾರ್ಪಣೆ ಮಾಡಿದ ಅವರು, ಚಿಕ್ಕಜಾಜೂರು-ಹುಬ್ಬಳ್ಳಿ ಡಬ್ಲಿಂಗ್ ಯೋಜನೆಯಡಿ 11 ಕೋಟಿ ರೂ. ವೆಚ್ಚದಲ್ಲಿ ನಗರದ ರೈಲ್ವೆ ನಿಲ್ದಾಣದ ಹೊಸ ಕಟ್ಟಡ ನಿರ್ಮಿಸಲು ರೈಲ್ವೆ ಇಲಾಖೆಯಿಂದ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದರಂತೆ 2019ರ ಜನವರಿ 22 ರಂದು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಜನರ ಬಹುದಿನದ ನಿರೀಕ್ಷೆಯಾಗಿದ್ದ ರೈಲುಮಾರ್ಗ ಇಂದು ಲೋಕಾರ್ಪಣೆಗೊಂಡಿದೆ. ಹಳೇ ದಾವಣಗೆರೆ ಭಾಗದಿಂದ ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಕರು ಬರಲು ಎರಡನೇ ಪ್ರವೇಶ ದ್ವಾರವನ್ನು ಅಭಿವೃದ್ದಿ ಪಡಿಸಿ ಎರಡನೇ ಪ್ಲಾಟಫಾರ್ಮ್ ಬಳಿ ಪ್ರಯಾಣಿಕರಿಗೆ ಶೆಲ್ಟರ್ ನಿರ್ಮಾಣ ಮಾಡಿಕೊಡಲು ಇಲಾಖೆ ನಿರ್ಧರಿಸಿದ್ದು, ಅಂದಾಜು 4.52 ಕೋಟಿ ಅನುದಾನದಡಿ ನಿರ್ಮಿಸಿ ಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆಂದು ಮಾಹಿತಿ ನೀಡಿದರು.
ಡಿ.ಸಿ.ಎಂ ಟಾನ್‍ಶಿಪ ಬಳಿ ಡಬ್ಲಿಂಗ್ ಯೋಜನೆಯಡಿ ಒಂದು ಹಳಿಗೆ ಮಾತ್ರ 61 ಮೀ ಸೇತುವೆ ಮಾಡಲಾಗುತ್ತಿದ್ದು ಎರಡೂ ಹಳಿಗಳಿಗೆ 61 ಮೀ ಸೇತುವೆ ನಿರ್ಮಾಣ ಮಾಡಿಕೊಡಲು ಹಾಗೂ ಮೊದಲಿನ ಸೇತುವೆಯನ್ನು ಪುನರ್ ನಿರ್ಮಾಣ ಮಾಡಿಕೊಡಲು ಸೂಚಿಸಲಾಗಿದೆ. 10 ಕೋಟಿ ರೂ ವೆಚ್ಚದಲ್ಲಿ ಕೆಳಗಿನ ಸೇತುವೆ ಪುನರ್ ನಿರ್ಮಾಣ ಹಾಗೂ ರಸ್ತೆಯನ್ನು ನೇರ ಮಾಡಿಕೊಡಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಜೂನ್ 2019 ಕ್ಕೆ ಕಾಮಗಾರಿ ಪೂರ್ಣಗೊಳಿಸಿ ಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಹರಿಹರ-ಶಿವಮೊಗ್ಗ ರೈಲು ಮಾರ್ಗದ ಸರ್ವೆಗೆ ಆದೇಶಿಸಲಾಗಿದೆ. 79 ಕಿ.ಮೀ ಉದ್ದದ 832 ಕೋಟಿ ವೆಚ್ಚದ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ಇದಕ್ಕಾಗಿ 1069 ಎಕರೆ ಭೂಮಿ ಅವಶ್ಯವಿದ್ದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಹರಿಹರ-ಕೊಟ್ಟೂರು ರೈಲನ್ನು ಮಾರ್ಚ್ 2019 ರೊಳಗೆ ಹೊಸಪೇಟೆಯವರೆಗೆ ವಿಸ್ತರಣೆ ಮಾಡಲು ಇಲಾಖೆ ಒಪ್ಪಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲ ಹಾಗೂ ಇಲಾಖೆಗೆ ಆದಾಯ ಬರಲಿದೆ ಎಂದ ಅವರು, ಹರಿಹರದ ಅಮರಾವತಿ ಮೇಲ್ಸೇತುವೆ( ಎಲ್.ಸಿ.ನಂ208) ಎರಡು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು 2019 ಜೂನ್ ವೇಳೆಗೆ ಕಾಮಗಾರಿ ಮುಗಿಸಿಕೊಡುವುದಾಗಿ ಅಧಿಕರಿಗಳು ಒಪ್ಪಿಕೊಂಡಿದ್ದಾರೆ ಎಂದರು.
ಶಾಸಕ ಎಸ್.ಎ ರವೀಂದ್ರನಾಥ್ ಮಾತನಾಡಿ, ದ್ವಿಪಥ ರೈಲು ಮಾರ್ಗದ ಬಗೆಗೆ ಜನರಿಗೆ ಬಹಳ ನಿರೀಕ್ಷೆ ಇ್ದತ್ತು. ಇಂದು ಅದು ಸಾಕಾರಗೊಂಡಿದೆ ಉಳಿದ ಭಾಗಗಳ ಕಾಮಗಾರಿಗಳು ಬೇಗ ಮುಗಿದು ಜನರಿಗೆ ಅನುಕೂಲವಾಗಲಿ ಎಂದು ಅವರು ಆಶಿಸಿದರು. ಹಾಗೂ ಕೆಳಸೇತುವೆ ಮತ್ತು ಮೇಲ್ಸೇತುವೆ ಕಾಮಗಾರಿಗಳು ಬೇಗ ಮುಗಿಯಲಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಜಯಕುಮಾರ್‍ಸಿಂಗ್, ಉಪ ರೈಲ್ವೆ ವ್ಯವಸ್ಥಾಪಕರಾದ ಅಪರ್ಣಾ ಗರ್ಗ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾದವ್, ರಾಘವೇಂದ್ರ, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








