ರಾಗಿ ಬೆಳೆಗಾರರ ಆತಂಕ ನಿವಾರಿಸಿದ ಮಳೆ…!

ತುಮಕೂರು

    ಕಳೆದ 15-20 ದಿನಗಳಿಂದ ಮರೆಯಾಗಿದ್ದ ವರುಣ ಇತ್ತೀಚೆಗಷ್ಟೇ ಕಾಣಿಸಿಕೊಳ್ಳುತ್ತಿದ್ದು, ಬಾಡಿದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯ ಅಲ್ಲಲ್ಲಿ ಮಳೆ ಬೀಳುತ್ತಿದೆ. ಕೆಲವು ಕಡೆ ಉತ್ತಮ ಮಳೆಯಾಗಿದ್ದರೆ, ಇನ್ನು ಕೆಲವು ಕಡೆ ತುಂತುರು ಮಳೆ ಬಿದ್ದಿದೆ. ಇನ್ನೂ ಮಳೆಯಾಗುವ ಆಶಾಭಾವನೆ ವ್ಯಕ್ತವಾಗಿದೆ.

    ಜಿಲ್ಲೆಯ ಹಲವು ಭಾಗಗಳಲ್ಲಿ ರಾಗಿ ಬೆಳೆಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶೇಂಗಾ ಬೆಳೆ ಮೂರ್ನಾಲ್ಕು ತಾಲ್ಲೂಕುಗಳಿಗೆ ಸೀಮಿತವಾದರೆ, ರಾಗಿ ಬೆಳೆ ಬಹುತೇಕ ಎಲ್ಲ ಕಡೆಯೂ ಬೆಳೆಯಲಾಗುತ್ತದೆ. ಆದರೆ ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಇತ್ತೀಚಿನ ವರ್ಷಗಳಲ್ಲಿ ರಾಗಿ ಇಳುವರಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದಿದೆ. ಮುಂಗಾರು ಆರಂಭದಲ್ಲಿ ಚುರುಕಾಗುವ ಮಳೆ ಹಿಂಗಾರು ಸಂದರ್ಭದಲ್ಲಿ ಕೈ ಕೊಡುವುದು ಅಥವಾ ಮುಂಗಾರು ವಿಫಲವಾಗಿ ಹಿಂಗಾರು ವೇಳೆ ಮಳೆ ಬರುತ್ತಿರುವ ವೈಪರೀತ್ಯಗಳಿಂದಾಗಿ ರಾಗಿಯೂ ಸೇರಿದಂತೆ ಇತರೆ ಕೃಷಿ ಉತ್ಪನ್ನಗಳು ನಿರೀಕ್ಷಿತ ಮಟ್ಟದಲ್ಲಿ ಕೈ ಸೇರುತ್ತಿಲ್ಲ.

    ಕಳೆದ ಒಂದೆರಡು ವರ್ಷಗಳಿಂದ ಮಳೆಯಾಗುತ್ತಿರುವುದು ಸಂತಸದ ವಿಷಯ. ಈ ಬಾರಿಯೂ ಉತ್ತಮ ಮುಂಗಾರು ಆರಂಭವಾಯಿತು. ಕೋವಿಡ್ ಸಂಕಷ್ಟದಲ್ಲಿ ಹಳ್ಳಿಗೆ ಬಂದು ಸೇರಿಕೊಂಡ ಯುವ ಜನತೆ ಕೃಷಿಯತ್ತ ಗಮನ ಹರಿಸಿದರು. ಉತ್ತಮ ಮಳೆಯಾಗಿ ಹರ್ಷ ಮೂಡಿಸಿದ ಹಿನ್ನೆಲೆಯಲ್ಲಿ ಈ ಬಾರಿ ಭರ್ಜರಿ ಬೆಳೆ ತೆಗೆಯುವ ವಾತಾವರಣ ಎಲ್ಲ ಕಡೆಯೂ ಕಂಡು ಬಂದಿತು. ಆದರೆ ಕಳೆದ 15 ದಿನಗಳಿಂದ ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ರಾಗಿ ಬೆಳೆ ಬಾಡುತ್ತಾ ನೆಲಕ್ಕೆ ಬಾಗತೊಡಗಿತ್ತು. ಇದನ್ನು ಕಂಡ ರೈತರು, ಈ ವರ್ಷ ಕೃಷಿಯಲ್ಲಿ ತೊಡಗಿಕೊಂಡ ಯುವಕರು ಮಮ್ಮಲ ಮರುಗ ತೊಡಗಿದ್ದರು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಮುಂದೇನು ಎಂಬ ಆತಂಕದಲ್ಲಿದ್ದರು.

    ಆದರೆ ಇತ್ತೀಚೆಗೆ ಬೀಳುತ್ತಿರುವ ಮಳೆ ಸ್ವಲ್ಪ ಸಮಾಧಾನ ತಂದಿದೆ. ಇದೇ ರೀತಿ ಇನ್ನೂ ಒಂದು ಅಥವಾ ಎರಡು ಹದ ಮಳೆ ಬಂದರೆ ಸಾಕು ರೈತರಿಗೆ ಸಮಾಧಾನ ಸಿಗುತ್ತದೆ. ಉತ್ತಮ ಬೆಳೆಯೂ ಬರುತ್ತದೆ. ಸೆ.16 ರಿಂದ ಆರಂಭವಾದ ಅನುರಾಧ ಮಳೆಯು ಕೈ ಕೊಟ್ಟಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಕಾಳು ಕಟ್ಟುವ ಹಂತಕ್ಕೆ ಸರಿಯಾಗಿ ಮಳೆ ಕೈ ಕೊಟ್ಟಿದ್ದರಿಂದ ರಾಗಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದರು. ಬೋರ್‍ವೆಲ್ ವ್ಯವಸ್ಥೆ ಇರುವವರು ಹನಿ ನೀರಾವರಿ, ಸ್ಪ್ರಿಂಕ್ಲಿಂಗ್ ಮೂಲಕ ನೀರು ಹಾಯಿಸಿ ಬೆಳೆಯನ್ನು ಹಸಿರಾಗಿ ಇರಿಸಿದ್ದರು. ಹೇಗೋ ಕಷ್ಟಪಟ್ಟು ರಸಗೊಬ್ಬರ ತಂದು ಸುರಿದಿದ್ದಾಗ ಮಳೆ ಬಾರದೆ ಹೋದದ್ದು ಮತ್ತಷ್ಟು ಚಿಂತೆಗೆ ಈಡು ಮಾಡಿತ್ತು. ಅ.10ರವರೆಗೂ ಅನುರಾಧ ಮಳೆ ಇದ್ದು, ಮುಂದಿನ ಮಳೆಯಾದರೂ ಬರಬಹುದೆ ಎಂಬ ನಿರೀಕ್ಷೆ ರೈತರಲ್ಲಿತ್ತು.

   ಅನುರಾಧ ಮಳೆ ಮುಕ್ತಾಯದ ಸಂದರ್ಭ ಹಾಗೂ ಚಿತ್ತಾ ಮಳೆ ಆರಂಭದ ಸಂದರ್ಭದಲ್ಲಿ ಬಹುತೇಕ ಎಲ್ಲ ಕಡೆ ಸ್ವಲ್ಪ ಮಟ್ಟಿಗೆ ಮಳೆಯಾಗಿದ್ದು, ರಾಗಿ ಸೇರಿದಂತೆ ಹಿಂಗಾರು ಬೆಳೆ ಕೈ ಸೇರುವ ಆಶಾವಾದದಲ್ಲಿ ರೈತಾಪಿ ವರ್ಗ ಇದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap