ರೈತರ ಬಾಳಿಗೆ ತಣ್ಣೀರೆರಚಿದ ಮಳೆ

ದಾವಣಗೆರೆ

    ತಾಲ್ಲೂಕಿನಲ್ಲಿ ಸುರಿದ ಮಳೆ, ರೈತರ ಬದುಕನ್ನೇ ಮೂರಾಬಟ್ಟೆ ಮಾಡಿದೆ. ಸಾಲ ಮಾಡಿ ಬೆಳೆದ ಭತ್ತದ ಬೆಳೆ ಇನ್ನೇನು ಕೈ ಸೇರಿತು ಎನ್ನುವಷ್ಟರಲ್ಲಿ ಸುರಿದ ಧಾರಾಕಾರ ಮಳೆ ರೈತರ ಬಾಳಿಗೆ ತಣ್ಣೀರೆರಚಿದೆ.ಬೆಳೆ ಕಳೆದುಕೊಂಡ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದು, ಅಧಿಕಾರಿಗಳು ಇತ್ತ ಸುಳಿದಿಲ್ಲ. ಧಾರಾಕಾರ ಮಳೆಗೆ ನೆಲಕಚ್ಚಿದ ಫಸಲಿಗೆ ಬಂದ ಭತ್ತ ನೆಲಕ್ಕೆ ಬಿದ್ದಿದೆ. ಕಂದಾಯ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಪಿಕ್‍ನಿಕ್‍ಗೆ ಬಂದಂತೆ ಬಂದು ಹೋಗಿದ್ದಾರೆ.

    ದಾವಣಗೆರೆ ತಾಲ್ಲೂಕಿನ ಹಳೇ ಕುಂದುವಾಡ, ಬಾತಿ, ಲೋಕಿಕೆರೆ ಗ್ರಾಮಗಳಲ್ಲಿ ಜನರು ಇಷ್ಟು ದಿನ ಮಳೆ ಬಂದರೆ ಸಾಕು ಎಂದು ಆಕಾಶದ ಕಡೆ ಮುಖ ಮಾಡಿ ಕುಳಿತಿದ್ದರು. ಆದರೆ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಮಳೆ ರೈತರ ಬದುಕನ್ನೇ ಮೂರಾಬಟ್ಟೆಯನ್ನಾಗಿ ಮಾಡಿದೆ.

   ಗಾಳಿ, ಮಳೆಯ ರಭಸಕ್ಕೆ ಅಡಿಕೆ, ಬಾಳೆ, ಭತ್ತದ ಬೆಳೆ ಸಂಪೂರ್ಣವಾಗಿ ನೆಲಕಚ್ಚಿವೆ. ಸಾಲ ಮಾಡಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರ ಬದುಕಿನ ಜೊತೆ ವರುಣ ದೇವ ಚೆಲ್ಲಾಟವಾಡಿದ್ದಾನೆ. ಇದರಿಂದ ಪರಿತಪಿಸುವಂತಾಗಿದೆ.ಮಳೆಯಿಂದಾಗಿ ಫಸಲಿಗೆ ಬಂದ ಅಡಿಕೆ, ಬಾಳೆ, ಪಪ್ಪಾಯಿ ತೋಟಗಳು ನೆಲಕ್ಕುರುಳಿವೆ. ಅಷ್ಟೇ ಅಲ್ಲದೇ ಕಟಾವಿಗೆ ಬಂದ ಭತ್ತ ಸಂಪೂರ್ಣವಾಗಿ ಹಾಳಾಗಿದ್ದು, ರೈತರನ್ನು ಆತಂಕಕ್ಕೆ ದೂಡಿದೆ. ಮಳೆ ಯಾಕಾದರೂ ಬಂದಿದೆಯೋ ಏನೋ ಎಂದು ಹಿಡಿಶಾಪ ಹಾಕುತ್ತಿದ್ದಾರೆ.

   ಇನ್ನೇನು ಮುಂದಿನ ವಾರ ಭತ್ತದ ಕೊಯ್ಲು ಶುರು ಮಾಡಬೇಕು ಎಂದುಕೊಂಡಿದ್ದ ರೈತರಿಗೆ ಬರಸಿಡಿಲು ಬಡಿದಂತಾಗಿದೆ. ಭತ್ತ ನೆಲಕ್ಕುರುಳಿ, ಕೊಳೆತು ಹೋಗುತ್ತದೆ ಎಂದು ರೈತರು ಕಣ್ಣೀರಿಟ್ಟಿದ್ದಾರೆ.ಒಟ್ಟಿನಲ್ಲಿ ಅಕಾಲಿಕ ಮಳೆ ರೈತರ ಬದುಕನ್ನೇ ಕತ್ತಲೆಗೆ ದೂಡಿದೆ. ಎಕರೆಗೆ 25 ಸಾವಿರ ರೂ. ಖರ್ಚು ಮಾಡಿ ಕಷ್ಟಪಟ್ಟು ಬೆಳೆದ ಭತ್ತ, ನೀರಲ್ಲಿ ಮುಳುಗಿ ಹೋಗಿದೆ. ಇಷ್ಟಾದರೂ ಅಧಿಕಾರಿಗಳು ಇತ್ತ ಸುಳಿದಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತು, ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವ ಮೂಲಕ ರೈತರ ಕಣ್ಣೀರೊರೆಸಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link