ಹುಳಿಯಾರು
ಹುಳಿಯಾರು ಪಟ್ಟಣದಲ್ಲಿ ಬುಧವಾರ ರಾತ್ರಿ ಉತ್ತಮ ಮಳೆಯಾಗಿದ್ದು ಮಳೆಯ ನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ವಾಣಿಜ್ಯ ಮಳಿಗೆಗಳ ಒಳಗೆ ನೀರು ನುಗ್ಗಿ ಅಪಾರ ನಷ್ಟಕ್ಕೆ ಕಾರಣವಾಗಿದೆ. ಹುಳಿಯಾರಿನ ಪೇಟೆ ಬೀದಿಗೆ ಮೊದಲ ಹಂತದ ಸಿಸಿ ರಸ್ತೆಯನ್ನು ರಾಮ್ ಗೋಪಾಲ್ ಸರ್ಕಲ್‍ನಿಂದ ಈರುಳ್ಳಿ ಶಿವಣ್ಣ ಅಂಗಡಿ ವರೆವಿಗೂ ನಿರ್ಮಾಣ ಮಾಡಲಾಗಿತ್ತು.
ಸಿಸಿ ರಸ್ತೆ ನಿರ್ಮಿಸುವ ಮೊದಲು ಚರಂಡಿ ನಿರ್ಮಾಣ ಮಾಡಬೇಕಿತ್ತು. ಆದರೆ ಪಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಚರಂಡಿ ನಿರ್ಮಿಸದೆ ಸಿಸಿ ರಸ್ತೆ ನಿರ್ಮಿಸಿದ್ದಾರೆ.ಪರಿಣಾಮ ಸಿಸಿ ರಸ್ತೆಯಲ್ಲಿ ಹರಿದು ಬರುವ ಮಳೆಯ ನೀರು ಇಲ್ಲಿನ ಅಂಡರ್ ಗ್ರೌಂಡ್‍ನ ಹತ್ತಾರು ವಾಣಿಜ್ಯ ಮಳಿಗೆಗಳ ಒಳಗೆ ನುಗ್ಗಿದೆ. ಇದರಿಂದ ಅಂಗಡಿ ಒಳಗಿದ್ದ ಅನೇಕಾ ಪದಾರ್ಥಗಳು ನೆನೆದು ಅಪಾರ ನಷ್ಟ ಸಂಭವಿಸಿದೆ. ಮಳೆ ಬಂದಾಗಲೆಲ್ಲಾ ಈ ರೀತಿಯ ತೊಂದರೆಗಳು ಮರುಕಳಿಸುತ್ತಿದೆ ಆದರೂ ಸಮಸ್ಯೆ ಪರಿಹರಿಸಲು ಪಪಂ ಮುಂದಾಗಿಲ್ಲ ಎಂದು ಇಲ್ಲಿನ ಮಳಿಗೆಗಳ ಮಾಲೀಕರ ಆರೋಪವಾಗಿದೆ.
ಈಗ ಈ ರಸ್ತೆಗೆ ಎರಡನೇ ಹಂತದ ಸಿಸಿ ರಸ್ತೆ ಕಾಮಗಾರಿಗೆ ಟೆಂಡರ್ ಸಹ ಕರೆಯಲಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗುತ್ತದೆ. ಆದರೆ ಎರಡನೇ ಹಂತವನ್ನೂ ಚರಂಡಿ ನಿರ್ಮಿಸದೆ ಮಾಡಲು ಹೊರಟಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಮತ್ತೊಷ್ಟು ಮನೆ ಹಾಗೂ ವಾಣಿಜ್ಯ ಮಳಿಗೆಗಳಿಗೆ ಮಳೆ ನೀರು ನುಗ್ಗುವ ಸಮಸ್ಯೆ ವಿಸ್ತರಿಸುತ್ತದೆ.
ಹಾಗಾಗಿ ಮೊದಲು ಪೇಟೆ ಬೀದಿಗೆ ಚರಂಡಿ ನಿರ್ಮಿಸಿ ನಂತರದ ದಿನಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿದರೆ ಇಲ್ಲಿನ ನಿವಾಸಿಗಳು ನೆಮ್ಮದಿಯಿಂದ ಇರಬಹುದಾಗಿದೆ. ಇಲ್ಲವಾದಲ್ಲಿ ಎತ್ತರದ ಪ್ರದೇಶದಿಂದ ಹರಿದು ಬರುವ ನೀರೆಲ್ಲವೂ ಸರಾಗವಾಗಿ ಹರಿಯದೆ ಮನೆ ಹಾಗೂ ಮಳಿಗೆಗಳಿಗೆ ನುಗ್ಗಿ ಅಪಾರ ನಷ್ಟಕ್ಕೆ ಕಾರಣವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
