ಹಿರಿಯೂರು :
ಭದ್ರಾಮೇಲ್ಡಂಡೆ ಯೋಜನೆಯಲ್ಲಿ, ವಾಣಿವಿಲಾಸ ಸಾಗರಕ್ಕೆ 2 ಟಿ.ಎಂ.ಸಿ ನೀರಿನ ಬದಲು ಕನಿಷ್ಠ 8 ಟಿ.ಎಂ.ಸಿ ನೀರು ತರಲು ತಾಲ್ಲೂಕು ನೀರಾವರಿ ಹೋರಾಟ ಸಮಿತಿ ರಚಿಸಿಕೊಂಡು ತೀವ್ರ ಹೋರಾಟ ನಡೆಸಬೇಕು ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಬೇಕು ಎಂಬುದಾಗಿ ರೈತ ಮುಖಂಡ ಕಸವನಹಳ್ಳಿ ರಮೇಶ್ ಹೇಳಿದರು.
ನಗರದ ಶ್ರೀತೇರುಮಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿ ರೈತ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಭಾಗದಲ್ಲಿ ಈಗಾಗಲೇ ಅಡಿಕೆ ತೆಂಗು ಅಲ್ಲದೇ ತೋಟಗಾರಿಕೆ ಬೆಳೆಗಳು ಒಣಗಿಹೋಗುತ್ತಿದ್ದು, ತೀರಾ ಶೋಚನೀಯ ಪರಿಸ್ಥಿತಿ ಉಂಟಾಗಿದೆ. ರೈತರು ಗುಳೆ ಹೋಗುವ ಪರಿಸ್ಥಿತಿ ತಲೆದೋರಿದ್ದು, ಸರ್ಕಾರ ತಕ್ಷಣ ಇತ್ತ ಗಮನ ಹರಿಸಬೇಕು ವಿವಿಸಾಗರಕ್ಕೆ ನೀರು ಹರಿಸುವ ಕಾರ್ಯ ಚುರುಕುಗೊಳಿಸಬೇಕು ಎಂಬುದಾಗಿ ಅವರು ಸರ್ಕಾರವನ್ನು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಈ ಬಗ್ಗೆ ಹೋರಾಟ ಮಾಡಲು ವಾಣಿವಿಲಾಸ ಸಾಗರ ಹೋರಾಟ ಸಮಿತಿ ರಚಿಸಲಾಗಿದ್ದು, ರೈತ ಮುಖಂಡರಾದ ಕಸವನಹಳ್ಳಿ ರಮೇಶ್‍ಕುಮಾರ್‍ರವರನ್ನು ಅಧ್ಯಕ್ಷರನ್ನಾಗಿ ಸಭೆಯಲ್ಲಿ ಒಮ್ಮತದ ಆಯ್ಕೆ ಮಾಡಲಾಯಿತು. ಇಂದಿನ ಸಭೆಯಲ್ಲಿ ರೈತ ಮುಖಂಡರಾದ ಕಸವನಹಳ್ಳಿ ರಮೇಶ್, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಹೆಚ್.ಆರ್.ತಿಮ್ಮಯ್ಯ, ವಿ.ವಿ.ಪುರ ಉಮೇಶ್, ವೀರಣ್ಣಗೌಡ, ಸುರೇಶ್, ಉಗ್ರಮೂರ್ತಿ, ಶಿವಣ್ಣ, ದಾಸಪ್ಪ, ಎಂ.ಡಿ.ರವಿ, ಶ್ರೀನಿವಾಸ್, ರಂಗಪ್ಪಯಾದವ್, ಮತ್ತಿತರರು ಪಾಲ್ಗೊಂಡಿದ್ದರು.