ಮಾಧುಸ್ವಾಮಿ ರಾಜಿನಾಮೆಗೆ ರೈತಸಂಘ ಒತ್ತಾಯ

ಹುಳಿಯಾರು

    ಸಮಸ್ಯೆ ಕೇಳಲು ಬಂದ ರೈತ ಮಹಿಳೆಯನ್ನು ಸಾರ್ವಜನಿಕವಾಗಿ ನಿಂದಿಸಿ ಅಪಮಾನ ಮಾಡಿರುವ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿಯ ದುರ್ವತನೆ ಪದೇಪದೇ ಪುನರಾವರ್ತನೆಯಾಗುತ್ತಿದ್ದು, ಅವರನ್ನು ಸಚಿವ ಸಂಪುಟದಿಂದ ಹೊರಗಿಡುವಂತೆ ರಾಜ್ಯ ರೈತ ಸಂಘದ (ಚಂದ್ರಪ್ಪ ಬಣ) ರಾಜ್ಯಾಧ್ಯಕ್ಷ ಹೊಸಳ್ಳಿ ಚಂದ್ರಪ್ಪ ಒತ್ತಾಯಿಸಿದ್ದಾರೆ.

      ಸಚಿವ ಮಾಧುಸ್ವಾಮಿ ಅವರ ರಾಜೀನಾಮೆಗೆ ಒತ್ತಾಯಿಸಿ ಹುಳಿಯಾರಿನ ನಾಡಕಚೇರಿ ಮುಂದೆ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಕೋಲಾರ ತಾಲ್ಲೂಕಿನ ಅಗ್ರಹಾರ ಎಂಬಲ್ಲಿ ಕೆರೆ ವೀಕ್ಷಿಸಲು ಸಚಿವರು ಆಗಮಿಸಿದ್ದ ಸಮಯದಲ್ಲಿ ಕೆರೆ ಒತ್ತುವರಿ ಸಂಬಂಧ ಮನವಿ ಸಲ್ಲಿಸಲು ಬಂದಿದ್ದ ರೈತ ಸಂಘಟನೆಯ ಜಿಲ್ಲಾಧ್ಯಕ್ಷೆ ನಳಿನಿಗೌಡರು ಅಲ್ಲಿಯ ಸಮಸ್ಯೆಯನ್ನು ಸಚಿವರ ಗಮನಕ್ಕೆ ತರುವ ಸಂದರ್ಭದಲ್ಲಿ ಮಹಿಳೆಗೆ ರ್ಯಾಸ್ಕಲ್ ಎಂಬ ಪದ ಬಳಸಿದ್ದಲ್ಲದೆ ಪೊಲೀಸರಿಗೆ ಹೇಳಿ ಅವರನ್ನು ಹೊರಗಟ್ಟುವಂತೆ ಮಾಡಿ ಮಹಿಳೆಯನ್ನು ಸಚಿವರು ಅವಮಾನ ಮಾಡಿದ್ದಾರೆ.

     ಈ ಸಂಬಂಧ ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರ ವಹಿಸಿಕೊಂಡಿರುವ ಮುಖ್ಯಮಂತ್ರಿಗಳು ಗಮನಹರಿಸಿ ಅಹಂಕಾರದ ಪರಮಾವಧಿ ಮೆರೆದಿರುವ ಜೆ.ಸಿ.ಮಧುಸ್ವಾಮಿ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಇಲ್ಲದಿದ್ದಲ್ಲಿ ರೈತ ಸಂಘಟನೆಗಳ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

      ಸಚಿವರ ವರ್ತನೆಗೆ ಛೀಮಾರಿ ಹಾಕಿ ಮಾತನಾಡಿದ ಅವರು, ಸಚಿವರು ಪ್ರಶ್ನೆ ಮಾಡಿದ ಮಹಿಳೆಯನ್ನು ಅವಾಚ್ಯ ಶಬ್ದದಿಂದ ನಿಂದಿಸಿ, ಮಹಿಳೆಯ ಮೇಲೆ ದರ್ಪ ತೋರಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಸಹ ಅತಿರೇಕದಿಂದ ವರ್ತಿಸಿದ್ದು, ಆ ಪೊಲೀಸರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

     ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಹೆಚ್.ಆರ್ ಭೋಜರಾಜ್, ತಾಲ್ಲೂಕು ಕಾರ್ಯಾಧ್ಯಕ್ಷ ಕರಿಯಪ್ಪ, ಹುಳಿಯಾರು ಹೋಬಳಿ ಅಧ್ಯಕ್ಷ ಎಸ್.ಸಿ.ಬೀರಲಿಂಗಯ್ಯ, ಎಂಜಿನಿಯರ್ ಲಿಂಗರಾಜು, ನೀರಾ ಈರಣ್ಣ, ಸೋಮಜ್ಜನ ಪಾಳ್ಯದ ಪುಟ್ಟಯ್ಯ, ಬಸವರಾಜು, ಕರಿಯಪ್ಪ, ಮೊಹ್ಮದ್ ಸಜ್ಜಾದ್ ಮೊದಲಾದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link