ಹೊಸದುರ್ಗ:
ಸಿರಿಧಾನ್ಯಕ್ಕೆ ಉತ್ತೇಜನ ನೀಡುವುದು ಹಾಗೂ ರೈತರಿಗೆ ಆರ್ಥಿಕ ನೆರವು ನೀಡುವ ರೈತಸಿರಿ ಯೋಜನೆಯನ್ನು ಸೆಪ್ಟೆಂಬರ್ 15ರ ವರೆಗೆ ವಿಸ್ತರಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ವೆಂಕಟೇಶ್ ತಿಳಿಸಿದರು.ಪಟ್ಟಣದ ತಾ.ಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಪ್ರೇಮಾ ರವೀಂದ್ರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಇಲಾಖೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿದರು.
ಸಿರಿಧಾನ್ಯ ಭಿತ್ತನೆ ಮಾಡಿರುವಂತಹ ರೈತರು ರೈತ ಸಿರಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15ರವರೆಗೂ ಅವಕಾಶ ಕಲ್ಪಿಸಲಾಗಿದೆ. ಆತ್ಮಹತ್ಯಗೆ ಒಳಗಾದ ರೈತರಿಗೆ ಗರಿಷ್ಟ 5 ಲಕ್ಷ ರೂ, ಆಕಸ್ಮಿಕ ಮರಣ ಹೊಂದಿದವರಿಗೆ 2 ಲಕ್ಷ ರೂವರೆಗೂ ಪರಿಹಾರ ಹಣ ನೀಡಲಾಗುತ್ತದೆ ಎಂದು ತಾಪಂ ಅಧ್ಯಕ್ಷೆ ಪ್ರೇಮಾ ರವೀಂದ್ರ ಕೇಳಿದ ಪ್ರೆಶ್ನೆಗೆ ಉತ್ತರಿಸಿದರು.
ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ: ಚುನಾಯಿತ ಜನಪ್ರತಿನಿಗಳು ಹೇಳಿದರಷ್ಟೇ ಕೊಳವೆಬಾವಿ ಕೊರೆಯುವುದು ಸಮಂಜಸವಲ್ಲ. ಸಮಸ್ಯೆ ಇರುವ ಕಡೆ ಖುದ್ದಾಗಿ ಹೋಗಿ ಬಗೆಹರಿಸಬೇಕು. ಜನಪ್ರತಿನಿಗಳು ಹೇಳುವ ಮೊದಲೇ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ತಾಪಂ ಅಧ್ಯಕ್ಷೆ ಪ್ರೇಮಾ ರವೀಂದ್ರ ಇಲಾಖೆಯ ಎಇಇ ಕೃಷ್ಣಮೂರ್ತಿಗೆ ತಿಳಿಸಿದರು.
ಅಕ್ಕಿತಿಮ್ಮಯ್ಯನಹಟ್ಟಿ ಗ್ರಾಮಕ್ಕೆ ಸರಬರಾಜು ಮಾಡುವ ಕುಡಿಯುವ ನೀರಿನ ಪೈಪ್ ಲೈನ್ ಅನ್ನು ಗ್ರಾಪಂ ಸದಸ್ಯರೊಬ್ಬರು ತಮ್ಮ ಸ್ವಂತ ಜಮೀನಿಗೆ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ ಎನ್ನುವ ದೂರು ಬಂದಿದೆ. ಜತೆಗೆ ಹೆಬ್ಬಳ್ಳಿ, ಅಗಸರಹಳ್ಳಿ, ದೊಡ್ಡಬ್ಯಾಲದಕೆರೆ ಮುಂತಾದ ಕಡೆ ಶುದ್ದ ನೀರಿನ ಘಟಕಗಳು ನಿರ್ವಹಣೆಯಿಲ್ಲದೇ ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿ ಇದೆ. ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಉದಾಸೀನ ತೋರಿದರೇ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗುವುದು ಎಂದು ಇಲಾಖೆ ಎಇಇಗೆ ಎಚ್ಚರಿಕೆ ನೀಡಿದರು.
ಪಶು ಸಂಗೋಪನಾ ಇಲಾಖೆ: ದೇಶಿ ಹಸುಗಳ ಹಾಲು ಉತ್ಪಾದನೆಯನ್ನು ಹೆಚ್ಚಳ ಮಾಡುವ ಸಲುವಾಗಿ ಸರಕಾರ ಕೃಷಿ ಕಲ್ಯಾಣ ಅಭಿಯಾನವನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿ 17 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದ್ದು, ಚಿತ್ರದುರ್ಗ ಜಿಲ್ಲೆಯೂ ಸೇರ್ಪಡೆಯಾಗಿದೆ.ತಾಲೂಕಿನಲ್ಲಿ 19 ಗ್ರಾಮಗಳಲ್ಲಿ ಆಯ್ಕೆ ಮಾಡಿಕೊಂಡು, ಪ್ರತಿ ಗ್ರಾಮ ಅಥವಾ ಸಮೂಹದಲ್ಲಿ ಅರ್ನಿಷ್ಟಾವ ( ಯಾವುದೇ ಗುಣ ಲಕ್ಷಣಗಳಿಲ್ಲದ ತಳಿಗಳು) 200 ತಳಿಗಳನ್ನು ಆಯ್ಕೆ ಮಾಡಿಕೊಂಡು ಕೃತಕ ಗರ್ಭಾದರಣೆ ಮಾಡಲಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಈ ಮೊದಲು ಧನ, ಎಮ್ಮೆ, ಹಂದಿಗಳಿಗೆ ಮಾತ್ರ ಸಿಮೀತವಾಗಿದ್ದ ಕಾಲು ಬಾಯಿ ಜ್ವರ ಲಸಿಕೆಯನ್ನು ಕುರಿ ಮೇಕೆಗಳಿಗೂ ನೀಡಲಾಗುತ್ತದೆ. ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಲಸಿಕಾ ಕಾರ್ಯಕ್ರಮ ಪ್ರಾರಂಭಿಸಲಾಗುವುದು ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಾ ಮಂಜುನಾಥ್, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ