“ರೈತರ ಬೆಳಕು” ಯೋಜನೆಗೆ ಎಳ್ಳುನೀರು ಬಿಟ್ಟ ಕುಮಾರಣ್ಣ…!!!

ಬೆಂಗಳೂರು
   
        ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ “ರೈತ ಬೆಳಕು” ಯೋಜನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಎಳ್ಳು ನೀರು ಬಿಟ್ಟಿದ್ದಾರೆ. ಫೆಬ್ರವರಿ 16 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ 2018-19ನೇ ಸಾಲಿನ ಲೇಖಾನುದಾನದಲ್ಲಿ ಒಣಭೂಮಿ ರೈತರಿಗೆ ನೆರವು ನೀಡುವ ಉದ್ದೇಶದಿಂದ ರೈತ ಬೆಳಕು ಯೋಜನೆಯನ್ನು ಘೋಷಿಸಿದ್ದರು.
     
        ಚುನಾವಣೆ ಬಳಿಕ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಮುಖ್ಯಮಂತ್ರಿಯಾದ ಎಚ್.ಡಿ.ಕುಮಾರಸ್ವಾಮಿ 5 ಜುಲೈ 2018 ನೇ ಸಾಲಿನಲ್ಲಿ ಮಂಡಿಸಿದ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಎಲ್ಲಾ ಯೋಜನೆಗಳನ್ನು ಮುಂದುವರೆಸುವುದಾಗಿ ಪ್ರಕಟಿಸಿದ್ದರು.
      ಎಚ್.ಡಿ.ಕುಮಾರಸ್ವಾಮಿ ಮಹತ್ವಾಕಾಂಕ್ಷಿ ಸಾಲಮನ್ನಾ ಯೋಜನೆಗಾಗಿ ಸಿದ್ದರಾಮಯ್ಯ ಸರ್ಕಾರದ ‘ರೈತ ಬೆಳಕು’ ಯೋಜನೆಯನ್ನು ಕೈಬಿಟ್ಟಿದ್ದರು. ಸಿದ್ದರಾಮಯ್ಯ ಅವರು ಆಗ ಬಜೆಟ್ ನಲ್ಲಿ ‘ರೈತ ಬೆಳಕು’ ಯೋಜನೆಗೆ 1000 ಕೋಟಿ ರೂ ಅನುದಾನ ಒದಗಿಸಿದ್ದರು.ಯೋಜನೆ ಅನುಷ್ಟಾನಕ್ಕೆ 3500 ಕೋಟಿ ರೂ ಅನುದಾನ ಅಗತ್ಯವಿದ್ದು, ಸಾಲಮನ್ನಾ ಯೋಜನೆ ಜಾರಿಯಿಂದಾಗಿ ಅನುದಾನ ಕೊರತೆ ಎದುರಾಗಿತ್ತು. ಹೀಗಾಗಿ ರೈತ ಬೆಳಕು ಯೋಜನೆಯನ್ನು ಕೈಬಿಡಲು ಕುಮಾರಸ್ವಾಮಿ ತೀರ್ಮಾನಿಸಿದರು.
ಏನಿದು ರೈತ ಬೆಳಕು ಯೋಜನೆ : –
         ಮಳೆಯಾಶ್ರಿತ ಬೆಳೆ ಬೆಳೆಯುವ ಒಣಭೂಮಿ ಪ್ರದೇಶದ ರೈತರಿಗೆ 5 ಸಾವಿರ ರೂ ನಿಂದ 10 ಸಾವಿರ ರೂ ಹಣವನ್ನು ರೈತರ ಖಾತೆಗೆ ನೇರ ವರ್ಗಾವಣೆ ಮಾಡುವ ಯೋಜನೆ ‘ರೈತ ಬೆಳಕು’ ಕಾರ್ಯಕ್ರಮವಾಗಿದೆ.
         ಬರ ಮತ್ತು ಆರ್ಥಿಕ ಸಂಕಷ್ಟದಿಂದ ತೊಂದರೆಗೀಡಾದ ಸಣ್ಣ ರೈತರಿಗೆ ನಿರ್ದಿಷ್ಟ ಆದಾಯ ಒದಗಿಸುವ ‘ರೈತ ಬೆಳಕು’ ಯೋಜನೆಯನ್ನು ಕುಮಾರಸ್ವಾಮಿ ಸರ್ಕಾರ ಕೈಬಿಟ್ಟಿದೆ.    
         ಈ ಯೋಜನೆಗೆ ಪ್ರತಿ ವರ್ಷ 3500 ಕೋಟಿ ರೂ ವೆಚ್ಚವಾಗಲಿದ್ದು ,70 ಲಕ್ಷ ರೈತರಿಗೆ ಯೋಜನೆಯ ಸೌಲಭ್ಯ ಸಿಗುತ್ತಿತ್ತು. ಕಳೆದ ವರ್ಷ ಬಜೆಟ್ ನಿಂದ ಯೋಜನೆ ಕೈಬಿಟ್ಟಿದ್ದ ಕುಮಾರಸ್ವಾಮಿ, 2019-20 ನೇ ಸಾಲಿನಲ್ಲಿ ಮುಂದುವರೆಸುವ ಭರವಸೆ ನೀಡಿದ್ದರು. ಆದರೆ ರಾಷ್ಟ್ರೀಯ ಬ್ಯಾಂಕ್ ಗಳ ಸಾಲಮನ್ನಾ ಯೋಜನೆ ಅನುಷ್ಠಾನಕ್ಕಾಗಿ ಮತ್ತೆ ‘ರೈತ ಬೆಳಕು’ ಯೋಜನೆಯನ್ನು ಕೈಬಿಟ್ಟಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
         ಕೃಷಿ ಸಚಿವ ಶಿವಶಂಕರ ರೆಡ್ಡಿ , ಕಳೆದ ಬಜೆಟ್ ನಲ್ಲಿ ಅನುದಾನದ ಕೊರತೆಯಿಂದ ಯೋಜನೆ ಕೈಬಿಡಲಾಗಿತ್ತು. ಈ ಬಾರಿ ಬಜೆಟ್ ನಲ್ಲಿ ರೈತ ಬೆಳಕು ಯೋಜನೆ ಪ್ರಕಟಿಸುವಂತೆ ಮುಖ್ಯಮಂತ್ರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಮುಂದುವರೆದ ಕಾಮಗಾರಿಗಳು ಹಾಗೂ ಸಾಲಮನ್ನಾ ಯೋಜನೆ ಜಾರಿ ಒತ್ತಡಕ್ಕೆ ಸಿಲುಕಿರುವ ಮುಖ್ಯಮಂತ್ರಿ ಹಿಂದಿನ ಸರ್ಕಾರದ ಇನ್ನಷ್ಟು ಜನಪ್ರಿಯ ಯೋಜನೆಗಳ ಅನುದಾನಕ್ಕೂ ಕತ್ತರಿ ಪ್ರಯೋಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ
ರೈತ ಬೆಳಕು ಯೋಜನೆ ನಕಲಿಸಿದ ಕೇಂದ್ರ ಸರ್ಕಾರ :- 
          ವಿಶೇಷವೆಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದ “ರೈತ ಬೆಳಕು” ಯೋಜನೆ ರಾಜ್ಯದಲ್ಲಿ ಜಾರಿಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಆದರೆ ಕೇಂದ್ರ ಸರ್ಕಾರದ ಇದೇ ಮಾದರಿಯ ಯೋಜನೆಯನ್ನು ಇಂದಿನ ಬಜೆಟ್ ನಲ್ಲಿ  ‘ಪ್ರಧಾನ ಮಂತ್ರಿ ಕೃಷಿಕ್ ಸಮ್ಮಾನ್’ ಹೆಸರಿನ ಯೋಜನೆಯನ್ನು ಘೋಷಿಸಿ ರೈತರ ಹಿತ  ಕಾಯುವುದಾಗಿ ಪ್ರಕಟಿಸಿದೆ.
         ಆದರೆ ಹಿಂದಿನ ಸರ್ಕಾರ ಒಣಭೂಮಿ ರೈತರ ಹಿತದೃಷ್ಟಿಯಿಂದ ಘೋಷಿಸಿದ್ದ ಯೋಜನೆ ಮಾದರಿ ಇದೀಗ ಇಡೀ ದೇಶಾದ್ಯಂತ ತಂದಿರುವ ಹಿನ್ನಲೆಯಲ್ಲಿ ರೈತ ಬೆಳಕು ಯೋಜನೆ ಬಗ್ಗೆ ಇದೀಗ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap