ಸತತ ಬರಗಾಲಕ್ಕೆ ತುತ್ತಾದ ತಾಲ್ಲೂಕಿನ ರೈತರ ಕಷ್ಟ ಕೇಳೋರು ಯಾರು..!!

ಪಾವಗಡ

      ನಂಜುಂಡಪ್ಪ ವರದಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಪಾವಗಡ ತಾಲ್ಲೂಕು ಅತಿ ಹಿಂದುಳಿದ ತಾಲ್ಲೂಕಾಗಿದೆ. ಜಿಲ್ಲೆಯಲ್ಲಿ ಮಳೆಯಾದರೂ ತಾಲ್ಲೂಕಿನಲ್ಲಿ ಅತಿ ಕಡಿಮೆ ಮಳೆ ಬಿದ್ದಿದ್ದು, ಮಳೆ ಅಭಾವದಿಂದ ರೈತರು ಇದುವರೆಗೂ ಹೊಲದ ಕಡೆ ಮುಖ ಮಾಡಿಲ್ಲ. 25 ವರ್ಷಗಳಿಂದ ರೈತರು ಸಾಲ ಸೋಲ ಮಾಡಿ ಶೇಂಗಾ ಬಿತ್ತನೆ ಮಾಡುತ್ತಾ ಬಂದಿದ್ದು, ಒಂದು ನಯಾ ಪೈಸೆ ಕೂಡ ವಾಪಸ್ ಆಗದೆ ರೈತರು ಸಾಲಗಾರರಾಗಿದ್ದಾರೆ.

      ರೈತರು ಬ್ಯಾಂಕ್‍ನಲ್ಲಿ ಒತ್ತೆ ಇಡಲು ಮನೆಯಲ್ಲಿ ಏನೂ ಉಳಿದಿಲ್ಲ. ಇಲ್ಲಿಯವರೆಗೂ ಎರಡು ಹದ ಮಳೆ ಬಂದಿದ್ದು, ಬಿತ್ತನೆ ಸಮಯದಲ್ಲಿ ಒಂದು ಹದ ಮಳೆ ಸಹ ಆಗಿಲ್ಲ. ತಮ್ಮ ಹೊಲಗಳನ್ನು ಬೀಳು ಬಿಟ್ಟಿದ್ದು, ಬೆರಳು ಎಣಿಕೆಯಷ್ಟು ರೈತರು ವ್ಯವಸಾಯ ಮಾಡಿದ್ದು, ಶೇಕಡ 5 ರಷ್ಟು ರೈತರು ಬಿತ್ತನೆ ಮಾಡಿದ್ದಾದರೂ, ಮಳೆ ಇಲ್ಲದೆ ಮೊಳಕೆ ಒಣಗಿ ಹೋಗಿದೆ. ಇನ್ನೂ ಕೆಲ ರೈತರು ಬಿತ್ತನೆಗಾಗಿ ಆಕಾಶ ನೋಡುವಂತಹ ಪರಿಸ್ಥಿತಿ ಎದುರಾಗಿದೆ.

       ಪಾವಗಡ ತಾಲ್ಲೂಕು ಭೌಗೋಳಿಕ ವಿಸ್ತೀರ್ಣ 1,35,849 ಹೆಕ್ಟೇರ್ ಇದ್ದು, ನಿವ್ವಳ ಸಾಗುವಳಿ ಪ್ರದೇಶ 76,698 ಹೆಕ್ಟೇರ್ ಇದೆ. ನೀರಾವರಿ ಪ್ರದೇಶ 20,494 ಹೆಕ್ಟೇರ್ ಇದ್ದು, ಖುಷ್ಕಿ ಜಮೀನು 60,627 ಹೆಕ್ಟೇರ್ ಇದೆ. ಬಾಗಾಯ್ತು ಪ್ರದೇಶ 4,962 ಹೆಕ್ಟೇರ್ ಇದ್ದು, ಸಾಗುವಳಿಗೆ ಯೋಗ್ಯವಾಗದ ಪ್ರದೇಶ 13, 406 ಹೆಕ್ಟೇರ್ ಇದೆ. ಪಾವಗಡ ತಾಲ್ಲೂಕಿನ ಇಲ್ಲಾ ರೈತರು ಮಳೆ ಆಶ್ರಿತ ಭೂಮಿಯನ್ನು ನಂಬಿ ವ್ಯವಸಾಯ ಮಾಡುತ್ತಿದ್ದು, ಈ ಭಾಗದ ರೈತರು ಶೇಂಗಾ ಮತ್ತು ತೊಗರಿ ಬೆಳೆಯನ್ನು ಬೆಳೆಯುವ ರೂಢಿಸಿಕೊಂಡಿದ್ದಾರೆ. ಇದರ ಜೊತೆಗೆ ಪರ್ಯಾಯ ಬೆಳೆ ಬೆಳೆಯಲು ಸರ್ಕಾರದ ಜೊತೆ ಕೃಷಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅನುವು ಮಾಡಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಸರ್ಕಾರ ನೀಡುತ್ತಿರುವ ಸಹಾಯ ಧನ ಯಾರ ಪಾಲು?

      ತಾಲ್ಲೂಕಿನಲ್ಲಿ ಸುಮಾರು 15 ವರ್ಷಗಳಿಂದ ಮಳೆ ಬೆಳೆ ಆಗದೆ ಬಿತ್ತನೆ ಮಾಡಲು ರೈತರ ಮನೆಯಲ್ಲಿ ಬಿತ್ತನೆ ಬೀಜ ಸಹ ಇಲ್ಲದೆ ಸರ್ಕಾರ ನೀಡುವ ಬಿತ್ತನೆ ಬೀಜಕ್ಕೆ ಕಾದು ಕುಳಿತ್ತಿದ್ದಾರೆ. ಮಾರುಕಟ್ಟೆ ಬೆಲೆಗಿಂತ ಸರ್ಕಾರದ ರಿಯಾಯಿತಿ ದರ ದುಬಾರಿಯಾಗಿದ್ದು, ಮಾರುಕಟ್ಟೆಯಲ್ಲಿ 4500 ರಿಂದ 5000 ರೂ.ಗಳಿಗೆ ಶೇಂಗಾ ಕಾಯಿ ಸಿಗುತ್ತಿದೆ. ಆದರೆ ಸರ್ಕಾರ ರೈತರಿಗೆ ನೀಡುತ್ತಿರುವ ಸಹಾಯ ಧನ ಬಿಟ್ಟು ಸಾಮಾನ್ಯ ರೈತರಿಗೆ 5300, ಪರಿಶಿಷ್ಟ ಜಾತಿ ಮತ್ತು ಪ.ಪಂಗಡ ರೈತರಿಗೆ 4400 ರೂ.ಗಳಿಗೆ ಕ್ವಿಂಟಾಲ್ ಶೇಂಗಾ ವಿತ್ತರಣೆ ಮಾಡುತ್ತಿದೆ. ವಿತರಣೆ ಮಾಡುತ್ತಿರುವ ಶೇಂಗಾ ಕಾಯಿ ದರ ದುಬಾರಿಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.

       ಸರ್ಕಾರ ನೀಡುವ ರಿಯಾಯಿತಿ ದರ ಸಾಮಾನ್ಯ ರೈತರಿಗೆ ಕ್ವಿಂಟಾಲ್‍ಗೆ 1800 ರೂಗಳು, ಎಸ್.ಸಿ, ಎಸ್.ಟಿ ರೈತರಿಗೆ 2700ರೂ.ಗಳು. ಸರ್ಕಾರ ನೀಡುವ ರಿಯಾಯಿತಿ ಸೇರಿ ಸಾಮಾನ್ಯರಿಗೆ ಕ್ವಿಂಟಾಲ್‍ಗೆ 7100 ರೂ.ಗಳಾದರೆ ಮಾರುಕಟ್ಟೆ ಬೆಲೆಗಿಂತ 2100 ರಿಂದ 2600ರೂ.ಗಳು ದುಬಾರಿಯಾಗಿದೆ. ಸರ್ಕಾರದ ರಿಯಾಯಿತಿಗಿಂತಲೂ ಶೇಂಗಾ ಬೀಜ ಓಪನ್ ಮಾರುಕಟ್ಟೆಯಲ್ಲಿಯೆ ಕಡಿಮೆ ಬೆಲೆಗೆ ಸಿಗುತ್ತಿದೆ. ಸರ್ಕಾರ ರೈತರಿಗೆ ನೀಡುವ ರಿಯಾಯಿತಿ ಹಣದ ಪ್ರತಿ ಫಲ ಯಾರ ಪಾಲಾಗುತ್ತಿದೆ ಎಂದು ರೈತರ ಧ್ವನಿಯಾಗಿದೆ.

     ಸರ್ಕಾರ ನೀಡುವ ರಿಯಾಯಿತಿ ದರ ನೆಪ ಮಾತ್ರಕ್ಕೆ ರೈತರಿಗೆ ಸಹಾಯ ಧನ ನೀಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ರೈತರಿಗೆ ಮಾತ್ರ ಯಾವುದೇ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ದೊರೆಯುತ್ತಿಲ್ಲ ಎಂಬ ಮಾಹಿತಿ ಇದೆ. ಸರ್ಕಾರ ನೀಡುವ ರಿಯಾಯಿತಿ ದರ, ಕೆ.ಓ.ಎಫ್ ಮತ್ತು ಎನ್‍ಎಸ್‍ಸಿ ಹಾಗೂ ಕೆಎಸ್‍ಎಸ್‍ಸಿ ಲಿ., ಮಾರಾಟ ಎಜೆನ್ಸ್ಸಿಯವರ ಮತ್ತು ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ರೈತ ಸಂಘದ ಮುಖಂಡರು ಆರೋಪಿಸಿದ್ದಾರೆ.

       ಪಾವಗಡ ತಾಲ್ಲೂಕಿನಲ್ಲಿ ಇದುವರೆಗೂ ಸತತ ಮಳೆಯ ಅಭಾವುಂಟಾಗಿದ್ದು, ಪ್ರತಿ ವರ್ಷ ಇದೇ ರೀತಿ ಮಳೆ ಬರದೇ ಇದ್ದರೆ ಇಲ್ಲಿನ ರೈತರ ಜೀವನ ಯಾವ ರೀತಿ ಸುಧಾರಿಸುತ್ತದೆ ಎಂಬುದನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳು ಗಮನಿಸ ಬೇಕಾಗಿದೆ.ಮೇ ತಿಂಗಳಿನಲ್ಲಿ ಎರಡು ಹದ ಮಳೆ ಬಿದ್ದಿದ್ದು ಬಿಟ್ಟರೆ ಇದುವರೆಗೂ ಯಾವುದೇ ಹಳ್ಳಕ್ಕೆ ನೀರು ಹರಿದಿಲ್ಲ. ಕುಡಿಯಲು ಜನತೆಗೆ ಮತ್ತು ಜಾನುವಾರುಗಳಿಗೆ ಸಹ ನೀರು ಸಿಗುತ್ತಿಲ್ಲ. ಜಾನುವಾರುಗಳಿಗೆ ಮೇವು ಮತ್ತು ರೈತರ ಕುಟುಂಬಗಳನ್ನು ಪಾಲನೆ ಮಾಡಬೇಕಾದರೆ ಎಷ್ಟು ಕಷ್ಟ ಇದೆ. ಇಂತಹ ತಾಲ್ಲೂಕುಗಳಿಗೆ ರಾಜ್ಯ ಸರ್ಕಾರ ವಿಶೇಷ ಯೋಜನೆಯನ್ನು ಜಾರಿಗೆ ತಂದು ರೈತರ ಋಣ ತೀರಿಸಲು ಪ್ರಯತ್ನ ಮಾಡಬೇಕಾದ ಅನಿವಾರ್ಯವಿದೆ ಎಂದು ರೈತ ಸಂಘಗಳು ಒತ್ತಾಯಿಸಿವೆ.

ಬಿತ್ತನೆ ಶೇಂಗಾ ರೈತರಿಗೆ ಸಿಗದೆ ಮಧ್ಯವರ್ತಿಗಳ ಪಾಲಾಗುತ್ತಿದೆ

        ಏಜೆನ್ಸಿಗಳ ಮೂಲಕ ಕೃಷಿ ಇಲಾಖೆಯು ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡುತ್ತಿದೆ. ದಲ್ಲಾಳಿಗಳು ಎಸ್.ಸಿ, ಎಸ್.ಟಿ ರೈತರಿಂದ ಪಹಣಿ, ಆಧಾರ್, ಬ್ಯಾಂಕ್ ಪಾಸ್ ಬುಕ್ ದಾಖಲಾತಿಗಳನ್ನು ಪಡೆದು, ಏಜೆನ್ಸಿಗಳ ಹತ್ತಿರ ಪರ್ಮಿಟ್ ಹಾಕಿಸಿ, ರಿಯಾಯಿತಿ ದರದಲ್ಲಿ ದೊರೆಯುವ ಬಿತ್ತನೆ ಶೇಂಗಾವನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ತಿಳಿದು ಬಂದಿದೆ.

      ಕೆಲ ಅಧಿಕಾರಿಗಳು ಮತ್ತು ದಲ್ಲಾಳಿಗಳು ದಂಧೇಯಲ್ಲಿ ಪಾಲ್ಗೊಂಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.ಕೆಲ ರೈತರು ಬಿತ್ತನೆ ಮಾಡದಿದ್ದರೂ ಹಣದ ಆಸೆಗೆ ಪರ್ಮಿಟ್‍ಗಳನ್ನು ದಲ್ಲಾಳಿಗಳಿಗೆ ಮಾರಾಟ ಮಾಡಿ, ಸರ್ಕಾರಕ್ಕೆ ಮತ್ತು ನಿಜವಾದ ರೈತರಿಗೆ ಬಿತ್ತನೆ ಬೀಜ ದೊರೆಯದಂತೆ ಕಾಳಸಂತೆಯಲ್ಲಿ ರಿಯಾಯಿತಿ ದರಕ್ಕಿಂತ ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ. ಕೃಷಿ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತನೆ ಮಾಡುತ್ತಿದ್ದು, ರೈತ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

      ಕೃಷಿ ಇಲಾಖೆಯಿಂದ ಆಯ್ಕೆ ಮಾಡಿಕೊಂಡಿರುವ ಅನುವುಗಾರರಿಂದ ಇತ್ತೀಚೆಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ರೈತರಿಂದ ಪಡೆದ ದಾಖಲಾತಿಗಳನ್ನು ಶೇಂಗಾ ವಿತರಣೆಗೆ ಎಸ್.ಟಿ, ಎಸ್.ಸಿ ರೈತರ ದಾಖಲಾತಿಗಳನ್ನು ಕೆಲ ಅನುವುಗಾರರು ರೈತರಿಗೆ ಗೊತ್ತಿಲ್ಲದೆ ಹಣಕ್ಕೆ ಮಾರಾಟ ಮಾಡಿದ್ದಾರೆ ಎಂಬ ಆರೋಪಗಳು ತಿಳಿದು ಬಂದಿದೆ. ಎಸ್.ಸಿ, ಎಸ್.ಟಿ ರೈತರು ಬಿತ್ತನೆ ಶೇಂಗಾ ಪಡೆಯಲು ಬಂದರೆ, ಈಗಾಗಲೆ ಬೇರೆ ರೈತರು ಪರ್ಮಿಟ್ ತೆಗೆದು ಕೊಂಡಿದ್ದಾರೆ ಎಂದು ಸಬೂಬು ನೀಡುತ್ತಿದ್ದಾರೆ. ಹೀಗಾಗಿ ಪ್ರತಿ ದಿನ ರೈತರು ಮತ್ತು ಅಧಿಕಾರಿಗಳ ಮಧ್ಯೆ ಗುದ್ದಾಟ ನಡೆಯುತ್ತಿದ್ದು, ಈ ಅವ್ಯವಹಾರವನ್ನು ಕಂಡುಹಿಡಿಯಲು ಯಾರಿಂದಲೂ ಸಾಧ್ಯವಾಗದೇ ಕೃಷಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

      ಎಸ್.ಸಿ, ಎಸ್.ಟಿ ರೈತರಿಗೆ ಬಿತ್ತನೆ ಬೀಜ ಸಿಗುತ್ತಿಲ್ಲ, ಸರ್ಕಾರ ನೀಡುತ್ತಿರುವ ಬಿತ್ತನೆ ಶೇಂಗಾ ಮಾತ್ರ ಮಾರಾಟವಾಗಿದೆ. ರೈತರಿಗೆ ಮೋಸವಾಗುತ್ತಿದೆ, ರೈತರ ಕೈಗೆ ಸೌಲಭ್ಯ ಸಿಗದೆ ಮಧ್ಯವರ್ತಿಗಳ ಪಾಲಾಗುತ್ತಿದ್ದು, ನೇರವಾಗಿ ರೈತರಿಗೆ ಸೇರಬೇಕಾದ ವ್ಯವಸ್ಥೆ ಕಲ್ಪಿಸಲು ಸರ್ಕಾರ ಯೋಜನೆ ರೂಪಿಸ ಬೇಕಾಗಿದೆ. ರೈತರ ಕೈಗೆ ಸಿಗದಿದ್ದರೆ ಸರ್ಕಾರ ನೀಡಿದ ಯೋಜನೆಗೆ ಅರ್ಥಬರುವುದು ಹೇಗೆ ಎಂದು ರೈತರ ಪ್ರಶ್ನೆಯಾಗಿದೆ.

     ಕೃಷಿ ಅಧಿಕಾರಿ ಪ್ರವೀಣ್‍ಕುಮಾರ್, 9,519 ಕ್ವಿಂಟಾಲ್ ಶೇಂಗಾದಲ್ಲಿ 8717 ಕ್ವಿಂಟಾಲ್ ಸೇಲ್ ಆಗಿದ್ದು, ಮಳೆಯಿಲ್ಲದ ಕಾರಣ ಶೇಂಗಾ ವಿತರಣೆ ನಿಲ್ಲಸಬಹುದೆಂದು ತಿಳಿಸಿದ್ದಾರೆ.

    ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜ ಸಿಗದೆ, ದಲ್ಲಾಳಿಗಳ ಕೈ ಸೇರುತ್ತಿರುವ ಬಿತ್ತನೆ ಶೇಂಗಾ ದಂಧೆಗೆ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು ಕಡಿವಾಣ ಹಾಕಿ, ರೈತರಿಗೆ ಬೇಕಾದ ಬಿತ್ತನೆ ಬೀಜ ಕೊಡಿಸಲು ಮುಂದಾಗುತ್ತಾರೋ ಇಲ್ಲವೋ ಕಾದು ನೋಡಬೇಕಾಗಿದೆ.
ರೈತರು ಸರ್ಕಾರದ ಸೌಲಭ್ಯಗಳನ್ನು ದುರುಪಯೋಗ ಮಾಡದೆ ಸದುಪಯೋಗ ಮಾಡಿಕೊಳ್ಳಬೇಕಾಗಿದೆ.

    ಸರ್ಕಾರದಿಂದ ಸೌಲಭ್ಯ ಪಡೆಯುವ ರೈತನು ಸಹ ಯೋಜನೆಗಳನ್ನು ದುರುಪಯೋಗ ಮಾಡದೇ ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ, ಸರ್ಕಾರದ ಸೌಲಭ್ಯಗಳನ್ನು ಪಡೆಯ ಬೇಕು. ಸರ್ಕಾರದಿಂದ ಸಹಾಯ ಧನದಲ್ಲಿ ಪಾವಗಡ ತಾಲ್ಲೂಕಿನ ರೈತರಿಗೆ ಬೇಕಾದ ವಿವಿಧ ಬಿತ್ತನೆ ಬೀಜ ರಿಯಾಯಿತಿ ದರದಲ್ಲಿ ನೀಡುತ್ತಿರುವ ಸೌಲಭ್ಯವನ್ನು ರೈತರೆ ಉಪಯೋಗ ಮಾಡಿಕೊಳ್ಳಬೇಕು. ಕೆಲ ರೈತರು ರೆರ್ಕಾಡ್ ದಲ್ಲಾಳಿಗಳಿಗೆ ನೀಡಿ ಇಂತಿಷ್ಟು ಹಣ ಪಡೆದು ಶೇಂಗಾ ಮಾರಾಟ ಮಾಡುತ್ತಿರುವ ಮಾಹಿತಿ ತಿಳಿದು ಬಂದಿದೆ.

    ಸರ್ಕಾರ ನೀಡುತ್ತಿರುವ ಸಹಾಯ ಧನದ ಶೇಂಗಾ ಬೀಜ ಮಾರುಕಟ್ಟೆಗಿಂತ ದುಬಾರಿಯಾಗಿದ್ದು, ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಚರ್ಚೆ ನಡೆಸಿ ರೈತರಿಗೆ ಬಿತ್ತನೆ ಬೀಜ ಕಲ್ಪಿಸಲು ಸರ್ಕಾರ ಮುಂದಾಗ ಬೇಕಾಗಿದೆ. ರೈತರ ಕಷ್ಟಗಳನ್ನು ಅರಿತಿರುವ ಕಾರ್ಮಿಕ ಸಚಿವ ವೆಂಕಟರವಣಪ್ಪ ತಾಲ್ಲೂಕಿನ ರೈತರಿಗೆ ಮಾನವೀಯತೆ ದೃಷ್ಟಿಯಲ್ಲಿ ನ್ಯಾಯ ದೊರಕಿಸಬೇಕು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap