ದಾವಣಗೆರೆ
ರೈತರ ವಿರುದ್ಧ ಸುಳ್ಳು ದೂರು ದಾಖಲಿಸಿ, ಭದ್ರಾ ನಾಲಾ ಇಂಜಿನಿಯರ್‍ಗಳು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ, ಕೊನೆ ಭಾಗದ ರೈತರು ನಗರದ ಹದಡಿ ರಸ್ತೆಯಲ್ಲಿರುವ ನೀರಾವರಿ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ನೀರಾವರಿ ಕಚೇರಿ ಎದುರು ಜಮಾಯಿಸಿದ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರು, ಸುಳ್ಳು ದೂರು ದಾಖಲಿಸಿರುವ ಭದ್ರಾ ನಾಲಾ ಉಪ ವಿಭಾಗದ ಎಇಇ ಗಂಗಪ್ಪ ಮತ್ತಿತರರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ದೂರು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಧನಂಜಯ ಕಡ್ಲೇಬಾಳು, ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಕೆಲ ಪ್ರದೇಶಗಳಿಗೆ ರೋಟೇಷನ್ ಪ್ರಕಾರ ನೀರು ಹರಿಸದೇ, ಹರಪನಹಳ್ಳಿ ಭಾಗದ ಕಡೆಯಲ್ಲಿ ನೀರು ಹೋಗುವಂತೆ ಗೇಟ್ ಎತ್ತಿರುವ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಲು ಕೊನೆ ಭಾಗದ ಕಡ್ಲೇಬಾಳು, ಅರಸಾಪುರ, ದೇವರಹಟ್ಟಿ, ಬಿ.ಕಲ್ಪನಹಳ್ಳಿ, ಚಿತ್ತಾನಹಳ್ಳಿ, ಕಕ್ಕರಗೊಳ್ಳ ಸೇರಿದಂತೆ ವಿವಿಧ ಗ್ರಾಮಗಳ ರೈತರು, ತಾಲೂಕಿನ ಕಾಡಜ್ಜಿ ಕೆರೆ ಬಳಿಯಲ್ಲಿರುವ ಆರ್-4 ಗೇಟ್ ಬಳಿ ಹೋಗಿದ್ದ ಸಂದರ್ಭದಲ್ಲಿ, ಎಇಇ ಗಂಗಪ್ಪ ಹಾಗೂ ಇತರೆ ಅಧಿಕಾರಿಗಳು ರೈತರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ.
ಹೀಗಾಗಿ ರೈತರು ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದನ್ನೆ ನೆಪವನ್ನಾಗಿಟ್ಟುಕೊಂಡ ಅಧಿಕಾರಿಗಳು ಇಬ್ಬರು ರೈತರ ವಿರುದ್ಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಸುಳ್ಳು ದೂರು ನೀಡಿ, ಅನ್ನದಾತರ ಮೇಲೆ ದೌರ್ಜನ್ಯ ನಡೆಸಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ವಿರುದ್ಧ ಯಾವುದೇ ಕಾರಣಕ್ಕೂ ದೂರು ನೀಡಬಾರದೆಂದು ಶಾಸಕ ಎಸ್.ಎ.ರವೀಂದ್ರನಾಥ್ ಸೂಚನೆ ನೀಡಿದ್ದರೂ ಸಹ, ಶಾಸಕರ ಮಾತಿಗೂ ಕಿಮ್ಮತ್ತು ನೀಡದೇ, ರೈತರ ವಿರುದ್ಧ ಸುಳ್ಳು ದೂರು ನೀಡಿದ್ದು, ತಕ್ಷಣವೇ ಈ ದೂರು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು.
ಭದ್ರಾ ನಾಲಾ ಅಧಿಕಾರಿಗಳು ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಜೊತೆ ಶಾಮೀಲಾಗಿ, ಅವರ ಊರಾದ ಲಕ್ಷ್ಮೀಪುರದ ಕಡೆ ನಿರಂತರವಾಗಿ ನೀರು ಹರಿಸುತ್ತಿದ್ದಾರೆ. ಹೀಗಾಗಿ ಕಡ್ಲೇಬಾಳು, ಅರಸಾಪುರ, ದೇವರಹಟ್ಟಿ, ಬಿ.ಕಲ್ಪನಹಳ್ಳಿ, ಚಿತ್ತಾನಹಳ್ಳಿ, ಕಕ್ಕರಗೊಳ್ಳ ಸೇರಿದಂತೆ ಹಲವು ಗ್ರಾಮಗಳಿಗೆ ನೀರು ತಲುಪದ ಕಾರಣ, ಈ ಭಾಗದ 20 ಸಾವಿರಕ್ಕೂ ಹೆಚ್ಚು ಪ್ರದೇಶದಲ್ಲಿ ರೈತರು ಬೆಳೆದಿರುವ ಬಾಳೆ, ತೆಂಗು, ಭತ್ತ ಸೇರಿದಂತೆ ವಿವಿಧ ತರಕಾರಿ ಬೆಳೆಗಳು ಒಣಗಲು ಆರಂಭಿಸಿವೆ. ಆದ್ದರಿಂದ ರೋಟೇಷನ್ ಪದ್ಧತಿಯಂತೆ ನೀರು ಹರಿಸುವ ಮೂಲಕ, ಸಂಕಷ್ಟದಲ್ಲಿರುವ ರೈತರಿಗೆ ನ್ಯಾಯ ಕಲ್ಪಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ರೈತರಾದ ಧನ್ಯಕುಮಾರ್, ಹಾಲೇಶಪ್ಪ, ಜಕಣಾಚಾರಿ, ಮಾನಿ ಚನ್ನಪ್ಪ, ರಘು, ಷಣ್ಮುಖಪ್ಪ, ನಿರಂಜನ್, ಕರೇಗೌಡ್ರ ವೀರಣ್ಣ, ಕಲ್ಪನಹಳ್ಳಿ ಮಾಂತೇಶ್, ಶ್ರೀನಿವಾಸ್, ಜಯಪ್ಪ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
