ಚಳ್ಳಕೆರೆ
ಚಳ್ಳಕೆರೆ ನಗರವೂ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದೀರಲಿ ಎಂಬ ದೂರದೃಷ್ಠಿಯಿಂದ ಇಲ್ಲಿನ ಹಿರಿಯ ನಾಗರೀಕರು ಶ್ರೀಜಗಲ್ಯೂರಜ್ಜ ಸ್ವಾಮಿ ಕೆರೆಯಿಂದ ಚಳ್ಳಕೆರೆ ನಗರದ ವಿವಿಧ ಭಾಗಗಳ ಮೂಲಕ ರಾಜಕಾಲುವೆಯನ್ನು ನಿರ್ಮಿಸಿದ್ದು, ಪ್ರಸ್ತುತ ರಾಜಕಾಲುವೆ ಬಹುತೇಕ ಭಾಗ ಒತ್ತುವರಿಯಾಗಿ ಇರುವ ರಾಜಕಾಲುವೆಯೂ ಸಹ ಮಣ್ಣಿನಲ್ಲಿ ಹೂತು ಹೋಗಿ ಮಳೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ನೀರು ಮನೆಗಳಿಗೆ ನುಗ್ಗಿ ಜನರಿಗೆ ತೊಂದರೆ ಉಂಟು ಮಾಡುವ ದೃಷ್ಠಿಯಿಂದ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಮನವಿ ಮೇರೆಗೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಭಾನುವಾರ ಇಲ್ಲಿನ ರಾಜಕಾಲುವೆ ಹಾದುಹೋಗುವ ಪ್ರದೇಶದ ವೀಕ್ಷಣೆ ನಡೆಸಿದರು.
ನಗರದ ರಹೀಂನಗರ, ಚಿತ್ರಯ್ಯನಹಟ್ಟಿ, ಸೂಜಿಮಲ್ಲೇಶ್ವರನಗರ, ಹಳೇಟೌನ್, ಪಾದಗಟ್ಟೆ, ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಟಿ.ರಘುಮೂರ್ತಿಯವರಿಗೆ ಆಭಾಗದ ಜನರು ರಾಜಕಾಲುವೆ ಹೂತುಹೋದ ಹಿನ್ನೆಲೆಯಲ್ಲಿ ಮಳೆ ಹಾಗೂ ಚರಂಡಿ ನೀರು ಮನೆಗಳಿಗೆ ನುಗ್ಗಿ ಅವಾಂತರವನ್ನುಂಟು ಮಾಡುತ್ತಿದೆ. ಮಳೆ ಹೆಚ್ಚಾದ ಸಂದರ್ಭದಲ್ಲಿ ಗುಡಿಸಲು ಮನೆಯಲ್ಲಿರುವ ಬಹುತೇಕರು, ಹೆಣ್ಣು ಮಕ್ಕಳು, ಮಕ್ಕಳನ್ನು ಎತ್ತಿಕೊಂಡು ಪ್ರಾಣಭಯದಿಂದ ಮನೆತೊರೆದ ಪ್ರಸಂಗವೂ ಇವೆ. ಈ ಹಿನ್ನೆಲೆಯಲ್ಲಿ ರಾಜಕಾಲುವೆಯನ್ನು ಸಂಪೂರ್ಣವಾಗಿ ದುರಸ್ಥಿಗೊಳಿಸಬೇಕಲ್ಲದೆ, ಕಳೆದ ಹಲವಾರು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಗೆ ಪರಿಹಾರ ನೀಡುವಂತೆ ಮನವಿ ಮಾಡಿದರು.
ಪ್ರಾರಂಭದ ಹಂತದಲ್ಲಿ ಇಲ್ಲಿನ ಚಿತ್ರಯ್ಯನಹಟ್ಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮುಖಂಡರಾದ ಬಡಗಿಪಾಪಣ್ಣ, ಶ್ರೀನಿವಾಸ್, ನಗರಸಭಾ ಸದಸ್ಯ ವೈ.ಪ್ರಕಾಶ್, ಖಾದರ್‍ಸಾಬ್, ಪಾಲಯ್ಯ, ಮುಂತಾದವರು ರಾಜಕಾಲುವೆ ಮಾರ್ಗದ ಬಗ್ಗೆ ಮಾಹಿತಿ ನೀಡಿದರಲ್ಲದೆ ವಿಶೇಷವಾಗಿ ರಹೀಂನಗರದಲ್ಲಿ ರಾಜಕಾಲುವೆ ಸಂಪೂರ್ಣವಾಗಿ ಹೂತುಹೋಗಿದ್ದು ದುರಸ್ಥಿಯಾಗದ ಹಿನ್ನೆಲೆಯಲ್ಲಿ ಜನರು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಈ ಬಗ್ಗೆ ಹಲವಾರು ಬಾರಿ ನಗರಸಭೆಗೆ ಮಾಹಿತಿ ನೀಡಿದ್ದರೂ ಪ್ರಾಯೋಜನವಾಗಿಲ್ಲವೆಂದು ಆರೋಪಿಸಿದರು. ಶಾಸಕ ಟಿ.ರಘುಮೂರ್ತಿ ಪ್ರತಿಕ್ರಿಯಿಸಿ, ಕಳೆದ ಎರಡು ವರ್ಷಗಳ ಹಿಂದೆ ಅಂದಿನ ಪೌರಾಯುಕ್ತ ಜೆ.ಟಿ.ಹನುಮಂತರಾಜು ರಾಜಕಾಲುವೆ ದುರಸ್ಥಿತಿ ಸಂಬಂಧಪಟ್ಟಂತೆ ಸಣ್ಣ ನೀರಾವರಿ ಇಲಾಖೆಗೆ ಪತ್ರಬರೆದು ಯೋಜನೆಯನ್ನು ಸಹ ಸಿದ್ದಪಡಿಸಿದ್ದರು. ಈ ಬಗ್ಗೆ ನಾನು ಸಹ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ರಾಜಕಾಲುವೆಯ ಸಂಪೂರ್ಣ ಮಾಹಿತಿ ನೀಡುವಂತೆ ನಗರದ ಸರ್ವೆ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದ ಶಾಸಕರು, ರಾಜಕಾಲುವೆಯ ನಕ್ಷೆಯನ್ನು ಪಡೆದು ಅದು ಹಾದುಹೋಗುವ ಮಾರ್ಗವನ್ನು ಸ್ವಷ್ಟವಾಗಿ ಗುರುತಿಸಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದರು. ರಾಜಕಾಲುವೆ ಕಾಮಗಾರಿ ನಡೆಸಲು ಕೆಲವರು ಅಡ್ಡಿಪಡಿಸುತ್ತಾರೆಂಬ ಮಾಹಿತಿ ಸಹ ಇದ್ದು, ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೌರಾಯುಕ್ತ ಪಿ.ಪಾಲಯ್ಯ ಪ್ರತಿಕ್ರಿಯಿಸಿ, ಕಳೆದ ವರ್ಷವೇ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಬೇಕಿತ್ತು. 2018ರ ವಿಧಾನಸಭಾ ಚುನಾವಣೆ, 2019ರ ಲೋಕಸಭಾ ಚುನಾವಣೆ ಹಾಗೂ ಇತ್ತೀಚಿನ ದಿನಗಳಲ್ಲಿ ಕೊರೋನಾ ವೈರಾಣು ನಿಯಂತ್ರಣ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಸಂಪರ್ಕ ಮಾಡುವ ಕಾರ್ಯ ನಡೆದಿಲ್ಲ. ಈಗಾಗಲೇ ರಾಜಕಾಲುವೆ ದುರಸ್ಥಿಯ ಬಗ್ಗೆ ಸಣ್ಣ ನೀರಾವರಿ ಇಲಾಖೆಯಲ್ಲಿ ಯೋಜನೆ ಸಿದ್ದವಾಗಿದ್ದು, ಅದಕ್ಕೆ ಮಂಜೂರಾತಿ ಪಡೆದು ಶಾಸಕರ ಮಾರ್ಗದರ್ಶನದಲ್ಲಿ ರಾಜಕಾಲುವೆಯನ್ನು ಸಂಪೂರ್ಣವಾಗಿ ದುರಸ್ಥಿ ಗೊಳಿಸಲಾಗುವುದು. ಪ್ರಸ್ತುತ ರಾಜಕಾಲುವೆ ಹಾದುಹೋಗುವ ಮಾರ್ಗವನ್ನು ಈಗಾಗಲೇ ನಗರಸಭೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಕಂದಾಯ ಇಲಾಖೆ ಅಧಿಕಾರಿಗಳಿಗೂ ಸಹ ಮಾಹಿತಿ ನೀಡಿರುತ್ತಾರೆ. ನಗರಸಭೆ ಆಡಳಿತದಿಂದ ಯಾವುದೇ ವಿಳಂಬವಾಗಿಲ್ಲ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಈಗಾಗಲೇ ಎರಡು ಬಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
