ರಾಜಕೀಯ ದೊಂಬರಾಟದಲ್ಲಿ ಬಡವಾದ ಜನತೆ

ದಾವಣಗೆರೆ

    ರಾಜ್ಯದಲ್ಲಿ ಈ ಬಾರಿಯೂ ಬರದ ಛಾಯೆ ಮುಂದುವರೆದಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿ, ನಾಡಿನ ಜನತೆ ಸಂಕಷ್ಟ ಅನುಭವಿಸುತ್ತಿದ್ದರೆ, ಜನರಿಂದ ಚುನಾಯಿತರಾಗಿರುವ ಶಾಸಕರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ರಾಜಕೀಯ ದೊಂಬರಾಟ ನಡೆಸುತ್ತಿರುವುದರಿಂದ ಜನರ ಸಮಸ್ಯೆಯೇ ಕೇಳುವವರಿಲ್ಲವಾಗಿದೆ.

    ಹೌದು… ‘ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ’ ಎಂಬ ಮಾತು ಅಕ್ಷರಸಹ ಪ್ರಸ್ತುತ ಕರ್ನಾಟಕದ ಜನರಿಗೆ ಹಾಗೂ ಶಾಸಕರಿಗೆ ಅನ್ವಯವಾಗಲಿದೆ. ಕುಡಿಯಲು ನೀರಿಲ್ಲದೇ, ಬಿತ್ತಲು ಮಳೆ ಇಲ್ಲದೇ, ಜಾನುವಾರುಗಳಿಗೆ ಮೇವು ಇಲ್ಲದೇ, ದುಡಿಯುವ ಕೈಗಳಿಗೆ ಉದ್ಯೋಗ ಇಲ್ಲದೇ… ಹೀಗೆ ವಿವಿಧ ಕಾರಣಗಳಿಂದ ನಾಡಿನ ಜನತೆ ಇಲಿಯಂತೆ ಸಂಕಟ ಪಡುತ್ತಿದ್ದರೇ, ಯಾರ ಸಂಕಟ ತಗೊಂಡ್ ನಾವೇನು ಮಾಡೋಣ, ನಮಗೆ ಅಧಿಕಾರ, ಹಣ ಸಿಕ್ಕರೇ ಸಾಕು ಎಂಬಂತೆ ಶಾಸಕರುಗಳು, ಬೆಕ್ಕು ಇಲಿಯ ಬೇಟೆಗೆ ಬೆನ್ನು ಹತ್ತುವಂತೆ ಅಧಿಕಾರಕ್ಕಾಗಿ ಬೆನ್ನು ಬಿದ್ದಿದ್ದಾರೆ.

     ಇದು ಬರೀ ಈಗ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಿಗಷ್ಟೇ ಅನ್ವಯಿಸಲ್ಲ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ಬಹುತೇಕ ಶಾಸಕರಿಗೆ ಅನ್ವಯವಾಗಲಿದೆ. ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೊ, ಆಪರೇಷನ್ ಕಮಲಕ್ಕೊ ಒಳಗಾಗಿ ಕಾಂಗ್ರೆಸ್-ಜೆಡಿಎಸ್‍ನ ಮೊದಲು 13 ಹಾಗೂ ಎರಡನೇ ಬಾರಿಗೆ 3 ಜನ ಶಾಸಕರು ರಾಜೀನಾಮೆ ನೀಡಿರುವ ಕಾರಣದಿಂದ ರಾಜ್ಯದಲ್ಲಿ ರಾಜಕೀಯ ದೊಂಬರಾಟ ಆರಂಭವಾಗಿದ್ದು,

      ಅತೃಪ್ತ ಶಾಸಕರ ಅತೃಪ್ತಿಯನ್ನು ಶಮನ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ, ಸನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯರ ಆದಿಯಾಗಿ ಎರಡೂ ಪಕ್ಷಗಳ ಶಾಸಕರು ಪ್ರಯತ್ನಿಸುತ್ತಿದ್ದರೆ, ಇನ್ನೂ ತುಪ್ಪ ಜಾರಿ ತಟ್ಟೆಗೆ ಬಿದ್ದಾಗ ನಾವೇಕೆ ಸುಮ್ಮನೀರಬೇಕು ಎಂಬಂತೆ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಂದ ಹಿಡಿದು ಬಿಜೆಪಿಯ ಹಲವು ಶಾಸಕರು ಅತೃಪ್ತ ಶಾಸಕರ ಪರವಾಗಿ ನಿಂತು, ಮೈತ್ರಿ ಸರ್ಕಾರವನ್ನು ಕೆಡವಿ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು ತಾಲೀಮು ನಡೆಸಿದ್ದಾರೆ.

      ಹೀಗೆ ಮೂರು ಪಕ್ಷಗಳ ಬಹುತೇಕ ಶಾಸಕರು ತಮ್ಮ ವೈಯಕ್ತಿಕ ಹಾಗೂ ಪಕ್ಷದ ಹಿತಾಸಕ್ತಿಗಾಗಿ ಕಳೆದ ಒಂದು ವಾರದಿಂದ ಬ್ಯೂಸಿಯಾಗಿದ್ದಾರೆ. ಹೀಗಾಗಿ ರಾಜ್ಯದ ಜನರ ಸಮಸ್ಯೆ ಆಲಿಸಲು ಯಾವ ಶಾಸಕರೂ ಇಲ್ಲದ ಶೂನ್ಯ ವಾತಾವರಣ ರಾಜ್ಯದಲ್ಲಿ ಮನೆ ಮಾಡಿದಂತಾಗಿದ್ದು, ರಾಜ್ಯಾದ್ಯಂತ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ, ಜಾನುವಾರುಗಳ ಮೇವಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

      ಕರ್ನಾಟಕದ ಕರಾವಳಿ ಹಾಗೂ ಮಲೇನಡು ಭಾಗಗಳನ್ನು ಹೊರತು ಪಡಿಸಿ, ಸುಮಾರು 26 ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ. ಈ ಮಳೆಯ ಕೊರತೆಯಿಂದ ನಾಡಿನ ಜನತೆಯನ್ನು ಪಾರು ಮಾಡಲು ಮುಖ್ಯಮಂತ್ರಿಗಳು ಜುಲೈ 2ನೇ ವಾರದಲ್ಲಿ ಮೋಡ ಬಿತ್ತನೆ ಆರಂಭಿಸುವುದಾಗಿ ಹೇಳಿದ್ದರು. ಆದರೆ, ಈಗ ರಾಜ್ಯದಲ್ಲಿ ರಾಜಕೀಯ ಪ್ರಕ್ಷೋಭೆ ಎದುರಾಗಿ, ಅವರ ಕುರ್ಚಿಗೆ ಕಂಟಕ ಬಂದಿದೆ. ಹೀಗಾಗಿ ಅವರ ಸ್ಥಾನ ಭದ್ರ ಮಾಡಿಕೊಳ್ಳಲೇ ಮುಖ್ಯಮಂತ್ರಿ ಹೆಣಗಾಡುತ್ತಿದ್ದಾರೆ. ಹೊರತು, ರೈತರ ಸಂಕಷ್ಟಕ್ಕೆ ಸಿಎಂ ಸೇರಿದಂತೆ ಯಾವೊಬ್ಬ ಶಾಸಕರು ಸ್ಪಂದಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

     ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ರೈತ ನಾಯಕರಾದ ಕೆ.ಪಿ.ನಂಜುಂಡ ಸ್ವಾಮಿ, ಪಟ್ಟಣ್ಣಯ್ಯನಂತಹ ಧೀಮಂತ ರಾಜಕಾರಣಿಗಳು ಹುಟ್ಟಿ, ಬೆಳೆದು ನಾಡಿನ ಹಿತಾಸಕ್ತಿಗಾಗಿ ದುಡಿದ ಈ ನೆಲದಲ್ಲಿ ಇಂತಹ ಕೆಟ್ಟ ಕಲುಷಿತ ರಾಜಕೀಯ ವಾತಾವಣರ ಮನೆ ಮಾಡಲು ಗಣಿ ದಣಿಗಳು, ರಿಯಲ್ ಎಸ್ಟೇಟ್ ಕುಳಗಳು, ಉದ್ಯಮಿಗಳು, ನಿವೃತ್ತ ಅಧಿಕಾರಿಗಳು ರಾಜಕೀಯ ಆರಂಭಿಸಿರುವುದೇ ಕಾರಣವಾಗಿದೆ. ಏಕೆಂದರೆ, ಇವರೆಲ್ಲರೂ ಅಕ್ರಮಗಳ ಮೂಲಕ ಗಳಿಸಿರುವ ಸಂಪತ್ತು ರಕ್ಷಣೆಗಾಗಿ ಅಧಿಕಾರದ ಬೆನ್ನು ಹತ್ತುತ್ತಾರೆಯೇ ಹೊರತು, ಇವರ್ಯಾರಿಗೂ ರೈತರ, ಜನರ ಸಮಸ್ಯೆಗಳೂ ಮುಖ್ಯ ಆಗುವುದೇ ಇಲ್ಲ ಎಂದು ವಿಶ್ಲೇಷಿಸುತ್ತಾರೆ ಹುಚ್ಚವ್ವನಹಳ್ಳಿ ಮಂಜುನಾಥ್.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link