ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ರಾಜನಹಳ್ಳಿಯಿಂದ ರಾಜಧಾನಿಗೆ ಪಾದಯಾತ್ರೆ

ತುಮಕೂರು

   ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಮಹರ್ಷಿ ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜನಹಳ್ಳಿಯಿಂದ ರಾಜಧಾನಿಗೆ ಹೊರಟಿರುವ ಪಾದಯಾತ್ರೆ ತುಮಕೂರಿಗೆ ಆಗಮಿಸಿದಾಗ ಹಲವು ಗಣ್ಯರು ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.

    ಶಿರಾ ಕಡೆಯಿಂದ ಬಂದ ಪಾದಯಾತ್ರೆಯ ತಂಡ ಮಾರ್ಗಮಧ್ಯೆ ರಾತ್ರಿ ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿ, ಬೆಳಿಗ್ಗೆ ಮುಂದುವರೆಸಿತು. ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಾಸಕ ಜಿ ಬಿ ಜ್ಯೋತಿಗಣೇಶ್ ಮೊದಲಾದವರು ಪಾದಯಾತ್ರೆ ನೇತೃತ್ವ ವಹಿಸಿರುವ ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳನ್ನು ಭೇಟಿ ಮಾಡಿ ಹೋರಾಟಕ್ಕೆ ಬಂಬಲ ಕೋರಿದರು.

     ಬೆಳಿಗ್ಗೆ ಬಾವಿಕಟ್ಟೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಕೆ. ಎನ್. ರಾಜಣ್ಣನವರು, ವಾಲ್ಮೀಕಿ ಸಮುದಾಯಕ್ಕೆ ಸಂವಿಧಾನಬದ್ಧವಾಗಿ ದೊರೆಯಬೇಕಾಗಿರುವ ಮೀಸಲಾತಿಯನ್ನು ಶೇ. 3 ರಿಂದ ಶೇ. 7.5ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

       ಪರಿಶಿಷ್ಟ ವರ್ಗದ 49 ಜಾತಿಗಳಿಗೆ ಮೀಸಲಾತಿ ಹಂಚಿತೆಯಲ್ಲಿ ಅನ್ಯಾಯವಾಗಿದೆ. ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಶೇ. 7.5ಕ್ಕೆ ಹೆಚ್ಚಿಸಬೇಕು. ಈಗಾಗಲೇ ಕೇಂದ್ರ ಸರ್ಕಾರ ಮೀಸಲಾತಿಯನ್ನು ಹೆಚ್ಚಿಸಿದೆ. ರಾಜ್ಯ ಸರ್ಕಾರ ಸಹ ಕಾನೂನಾತ್ಮಕವಾಗಿ ಇರುವ ಅಡಚಣೆಗಳನ್ನು ನಿವಾರಣೆ ಮಾಡಿ ಮೀಸಲಾತಿ ಪ್ರಮಾಣ ಹೆಚ್ಚುಮಾಡಲೇಬೇಕು. ಪರಿಶಿಷ್ಟ ಪಂಗಡವೆಂದರೆ ಕೇವಲ ನಾಯಕ ಜನಾಂಗವಷ್ಟೇ ಈ ವ್ಯಾಪ್ತಿಗೆ ಒಳಪಡುವುದಿಲ್ಲ. ಮೇದರ ಸಮಾಜವೂ ಸೇರಿದಂತೆ ಸುಮಾರು 46 ಕ್ಕೂ ಹೆಚ್ಚು ಸಮಾಜಗಳು ಸೇರ್ಪಡೆಗೊಳ್ಳುತ್ತವೆ. 

      ಇಂತಹ ಸಮುದಾಯಗಳನ್ನು ಸಮಾಜಮುಖಿಗೊಳಿಸುವ ಹಾಗೂ ಉದ್ಯೋಗಾವಕಾಶಗಳನ್ನು ಪಡೆಯಲು ಸರ್ಕಾರ ಮೀಸಲಾತಿಯನ್ನು ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.ಈ ಹೋರಾಟ ಯಾವುದೇ ಒಂದು ಜಾತಿಗಾಗಿ ಅಲ್ಲ. ಮೀಸಲಾತಿಯಿಂದ ಅನ್ಯಾಯಕ್ಕೆ ಒಳಗಾಗಿರುವ ಎಲ್ಲ ಜಾತಿಗಳಿಗೆ ನ್ಯಾಯ ದೊರಕಿಸಿಕೊಡುವ ಹೋರಾಟವಾಗಿದೆ. ನಮ್ಮ ಹೋರಾಟದಿಂದ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ರಸ್ತೆತಡೆ, ಪ್ರತಿಭಟನೆ ಮಾಡುತ್ತಿಲ್ಲ. ಬದಲಿಗೆ ಶಾಂತಿಯುತವಾಗಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.

      ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಮಹಾತ್ಮಗಾಂಧೀಜಿಯವರು ಅಹಿಂಸಾ ತತ್ವವನ್ನು ಅನುಸರಿಸಿ ಸತ್ಯಾಗ್ರಹ ನಡೆಸುವ ಮೂಲಕ ಹೋರಾಟ ನಡೆಸಿದರು. ಅವರು ಹಾಕಿಕೊಟ್ಟ ದಾರಿಯಲ್ಲೇ ನಾವುಗಳ ಸಹ ಮುಂದುವರೆಯುತ್ತಿದ್ದೇವೆ ಎಂದು ಅವರು ಹೇಳಿದರು.
ಹೋರಾಟ ಬೆಂಬಲಿಸಿ ಶಾಸಕ ಜ್ಯೋತಿಗಣೇಶ್ ಮಾತನಾಡಿ, ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ನಡೆಸುತ್ತಿರುವ ಈ ಹೋರಾಟಕ್ಕೆ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಸಹಕಾರ ಇದ್ದೇ ಇರುತ್ತದೆ ಎಂದರು.

       ವಿಧಾನಸೌಧದಲ್ಲೂ ಸಹ ಸಮಾಜದ ಪರವಾಗಿ ತಾವು ಧ್ವನಿಯಾಗಿ ನಿಲ್ಲುವುದಾಗಿ ಭರವಸೆ ನೀಡಿದ ಅವರು, ಹೋರಾಟ ಯಶಸ್ವಿಯಾಗಲಿ ಎಂದು ಹಾರೈಸಿದರು.

        ನಂತರ ಪಾದಯಾತ್ರೆ ಕೋಡಿ ಬಸವೇಶ್ವರ ವೃತ್ತ, ಟೌನ್ ಹಾಲ್ ವೃತ್ತ, ಬಿ ಹೆಚ್ ರಸ್ತೆ ಮೂಲಕ ದಾಬಸ್‍ಪೇಟೆ ಕಡೆ ತೆರಳಿತು. ವಾಲ್ಮೀಕಿ ಮಹರ್ಷಿಗಳ ಮೂರ್ತಿಯ ಮೆರವಣಿಗೆಯೊಂದಿಗೆ ನಡೆದ ಅದ್ದೂರಿ ಪಾದಯಾತ್ರೆ ಸಾಗಿತು. ಬೆಂಬಲಿಸಿ ವಾಲ್ಮೀಕಿ ಸಮುದಾಯದ ವರಲ್ಲದೆ, ವಿವಿಧ ಸಮುದಾಯದ ಮುಖಂಡರು ಪಾಲ್ಗೊಂಡು ನಡಿಗೆ ನಡೆದರು. ಮೀಸಲಾತಿ ಭಿಕ್ಷೆಯಲ್ಲ, ನಮ್ಮ ಸಂವಿದಾನದ ಹಕ್ಕು ಎಂದು ಸಾರುವ ಭಿತ್ತಿ ಫಲಕಗಳನ್ನು ಪ್ರದರ್ಶಿಸುತ್ತಾ ಹಲವಾರು ಜನ ಪಾದಯಾತ್ರೆಯಲ್ಲಿ ಸಾಗಿದರು.

     ಪಾದಯಾತ್ರೆಯಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯದ ಶ್ರೀ ಪ್ರಸನಾನ್ನಂದ ಸ್ವಾಮೀಜಿ, ಶಿಡ್ಲೆಕೋಣ ಶ್ರೀ ಸಂಜಯಕುಮಾರ ಸ್ವಾಮೀಜಿ, ಕೇದಾರ ಮಠದ ಶ್ರೀ ಬಸವ ಕೇದಾರನಂದ ಸ್ವಾಮೀಜಿ, ಮಾಜಿ ಶಾಸಕ ಕೆ ಎನ್ ರಾಜಣ್ಣ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್. ರಾಜೇಂದ್ರ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶಾಂತಲಾ ರಾಜಣ್ಣ, ರಾಮಾಂಜಿಪ್ಪ, ಜಿ ಜೆ ರಾಜಣ್ಣ, ಚೌಡಪ್ಪ, ಮುಖಂಡರಾದ ಜಿ ಎನ್ ಬೆಟ್ಟಸ್ವಾಮಿ, ಸಿಂಗದಹಳ್ಳಿ ರಾಜಕುಮಾರ್, ಲಕ್ಷ್ಮೀನಾರಾಯಣ್, ತು.ಬಿ. ಮಲ್ಲೇಶ್, ಪ್ರತಾಪ್, ರಂಗಪ್ಪನಾಯಕ್, ಭೀಮಣ್ಣ, ನಾಗರಾಜು, ದಿಲೀಪ್‍ಕುಮಾರ್, ಶಿವರಾಮ್, ಸೋಲಾರ್ ಕೃಷ್ಣಮೂರ್ತಿ, ಕುಬೇಂದ್ರ ನಾಯಕ್ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap