ಉಪ ಚುನಾವಣೆ : ರಾಜೇಶ್ ಗೌಡರಿಗೆ ಬಿಜೆಪಿ ಟಿಕೆಟ್..!

ತುಮಕೂರು

   ಶಿರಾ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನಗಳ ಬಾಕಿ ಇದ್ದು, ಮಂಗಳವಾರ ಸಂಜೆಯ ವೇಳೆಗೆ ರಾಜೇಶ್‍ಗೌಡ ಅವರ ಹೆಸರನ್ನು ಬಿಜೆಪಿ ಅಧಿಕೃತವಾಗಿ ಪ್ರಕಟಿಸಿದೆ. ಇದರೊಂದಿಗೆ ಕಳೆದ ಒಂದು ವಾರದಿಂದ ಇದ್ದ ಅನಿಶ್ಚಿತತೆ ನಿವಾರಣೆಯಾಗಿದೆ.

   ಜೆಡಿಎಸ್ ಹಾಗೂ ಕಾಂಗ್ರೆಸ್‍ನಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಸುಳಿವರಿತ ಮಾಜಿ ಸಂಸದ ಮೂಡಲಗಿರಿಯಪ್ಪ ಅವರ ಪುತ್ರ ರಾಜೇಶ್‍ಗೌಡ ಅವರು ಬಿಜೆಪಿಯತ್ತ ವಾಲಿದ್ದರು. ಬಿಜೆಪಿ ಬಾವುಟ ಹಿಡಿದು ಬಿಟ್ಟರು. ಆದರೆ ಟಿಕೆಟ್ ಮಾತ್ರ ಘೋಷಣೆಯಾಗಿರಲಿಲ್ಲ. ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ ಹಾಗೂ ರಾಜೇಶ್ ಗೌಡ ಈ ಮೂವರ ಹೆಸರುಗಳನ್ನು ಕಳುಹಿಸಿಕೊಡಲಾಗಿತ್ತಾದರೂ ರಾಜೇಶ್ ಗೌಡ ಅವರ ಹೆಸರೇ ಅಂತಿಮ ಎಂದು ಹೇಳಲಾಗಿತ್ತು. ಈ ನಡುವೆ ರಾಜೇಶ್‍ಗೌಡ ಬಿಜೆಪಿ ಸೇರ್ಪಡೆಯಾಗುತ್ತಲೇ ಸ್ಥಳೀಯವಾಗಿ ಸ್ವಲ್ಪ ಅಸಮಾಧಾನದ ಅಲೆ ಎದ್ದಿತ್ತು.

   ಶಿರಾ ಕ್ಷೇತ್ರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಹಾಗೂ ಇತರೆ ಸಂದರ್ಭಗಳಲ್ಲಿಯೂ ಅಪಸ್ವರಗಳು ಬಹಿರಂಗವಾಗಿಯೇ ಸ್ಫೋಟಗೊಂಡಿದ್ದು, ಇದನ್ನು ಶಮನ ಮಾಡಲು ಬಿಜೆಪಿ ಉಸ್ತುವಾರಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಬಿ.ಸುರೇಶ್‍ಗೌಡ ಮತ್ತಿತರರು ಸಭೆ ನಡೆಸಿದ್ದರು. ಇದೇ ಕ್ಷೇತ್ರದಿಂದ ಡಿ.ಟಿ.ಶ್ರೀನಿವಾಸ್ ಸೇರಿದಂತೆ ಇನ್ನೂ ಹಲವು ಮಂದಿ ಟಿಕೆಟ್ ಬಯಸಿದ್ದರಾದರೂ ಇವರ್ಯಾರಿಗೂ ಟಿಕೆಟ್ ನೀಡುವ ಸುಳಿವುಗಳು ಸಿಗಲಿಲ್ಲ. ಈ ಕಾರಣಕ್ಕಾಗಿಯೆ ಡಿ.ಟಿ.ಶ್ರೀನಿವಾಸ್ ಆಗ್ನೇಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದರು. ಅಲ್ಲಿಯೂ ಟಿಕೆಟ್ ಸಿಗದಿದ್ದಾಗ ಬಂಡಾಯವಾಗಿ ಸ್ಪರ್ಧಿಸಿದ್ದಾರೆ.

    ರಾಜೇಶ್‍ಗೌಡ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಈಗ ಶಿರಾ ಕ್ಷೇತ್ರದಲ್ಲಿ ಇನ್ನೇನಿದ್ದರೂ ಪ್ರಚಾರದ ಆರ್ಭಟ ಶುರುವಾಗಲಿದೆ. ಎಲ್ಲ ಪಕ್ಷಗಳಿಂದಲೂ ಅಧಿಕೃತವಾಗಿ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಇನ್ನು ಪ್ರಚಾರ, ಸಭೆಗಳು ಚುರುಕುಗೊಳ್ಳಲಿವೆ. ಈ ನಡುವೆ ಯಾವ ಪಕ್ಷದಿಂದ ಯಾರು ಎತ್ತ ಸುಳಿಯುವರೊ? ಹೀಗೆ ಅತ್ತಿಂದಿತ್ತ ಓಡಾಡುವವರನ್ನು ಹೇಗೆ ಹಿಡಿದಿಟ್ಟುಕೊಳ್ಳುವುದು ಎಂಬುದೇ ಪಕ್ಷದ ಮುಖಂಡರುಗಳಿಗೆ ತಲೆನೋವಿನ ವಿಷಯ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link