ಮೀಸಲಾತಿ : ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ ವ್ಯಾಲ್ಮೀಕಿ ಬ್ರಹ್ಮಾನಂದಸ್ವಾಮೀಜಿ.

ಚಳ್ಳಕೆರೆ

       ರಾಜ್ಯದಲ್ಲಿ ಈಗಾಗಲೇ ನಾಯಕ ಜನಾಂಗ 80 ಲಕ್ಷ ಸಂಖ್ಯೆಯಲ್ಲಿದ್ದು, ಈ ಸಮುದಾಯದಲ್ಲೂ ಸಹ ಉದ್ಯೋಗಾವಕಾಶಕ್ಕಾಗಿ ಲಕ್ಷಾಂತರ ನಿರುದ್ಯೋಗಿ ಪದವೀಧರ ಯುವಕ, ಯುವತಿಯರು ಮೀಸಲಾತಿಯಿಂದ ವಂಚಿತರಾಗಿದ್ದು, ಶೇ.3ರಷ್ಟು ಮೀಸಲಾತಿ ಇರುವ ನಾಯಕ ಜನಾಂಗಕ್ಕೆ ರಾಜ್ಯ ಸರ್ಕಾರ ಕುರುಬ ಮತ್ತು ಬೋವಿ ಸಮುದಾಯವನ್ನು ಸಹ ಈ ಜನಾಂಗದ ವ್ಯಾಪ್ತಿಗೆ ತರುವ ಬಗ್ಗೆ ಪ್ರಕಟಣೆ ನೀಡಿದ್ದು, ಇದನ್ನು ವಾಲ್ಮೀಕಿ ಸಮುದಾಯ ಉಗ್ರವಾಗಿ ಪ್ರತಿಭಟಿಸುತ್ತದೆಯಲ್ಲದೆ ಸರ್ಕಾರದ ವಿರುದ್ದ ಶೀಘ್ರದಲ್ಲೇ ಪ್ರತಿಭಟನೆ ಹಮ್ಮಿಕೊಳ್ಳುವ ಇಂಗಿತವನ್ನು ಚಿಕ್ಕಬಳ್ಳಾಪುರದ ವಾಲ್ಮೀಕಿ ಗುರುಪೀಠದ ಶ್ರೀಬ್ರಹ್ಮಾನಂದಸ್ವಾಮೀಜಿ ತಿಳಿಸಿದರು.

       ಅವರು, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಳ್ಳಾರಿಗೆ ತೆರಳುವ ಮಾರ್ಗದಲ್ಲಿ ಇಲ್ಲಿನ ಭಕ್ತರ ಮನೆಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಇತ್ತೀಚೆಗೆ ರಾಜ್ಯ ಸರ್ಕಾರ ಮೈಸೂರಿನಲ್ಲಿ ಬುಡಕಟ್ಟು ಸಮುದಾಯಗಳ ಸಂಶೋಧನಾ ಕಾರ್ಯವನ್ನು ನಡೆಸಿ 6 ತಿಂಗಳಲ್ಲಿ ವರದಿ ನೀಡುವಂತೆ ಸೂಚನೆ ನೀಡಿದ್ದು, ಕುರುಬ ಸಮುದಾಯವನ್ನು ಸಹ ಎಸ್ಟಿ ಮೀಸಲಾತಿಯಡಿ ಸೇರ್ಪಡೆ ಮಾಡುವ ಕುರಿತು ಸಮೀಕ್ಷೆ ನಡೆಸುವಂತೆ ನಿರ್ದೇಶನ ನೀಡಿದೆ.

        ಪ್ರಸ್ತುತ ವಾಲ್ಮೀಕಿ ಸಮುದಾಯವೇ ಅನೇಕ ವಿಚಾರಗಳಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ನಿರೀಕ್ಷಿತ ಮಟ್ಟದಲ್ಲಿ ಈ ಜನಾಂಗದ ಅಭಿವೃದ್ಧಿ ಪರ ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರದ ವತಿಯಿಂದ ಈ ಸಮುದಾಯಕ್ಕೆ ಇನ್ನೂ ನ್ಯಾಯದೊರತ್ತಿಲ್ಲ. ಕಳೆದ 1991ರಲ್ಲಿ ರಾಜ್ಯದಲ್ಲಿ ನಾಯಕ ಜನಾಂಗದ ಜನಸಂಖ್ಯೆ 8 ಲಕ್ಷವಿದ್ದು ಅಂದು ಸಹ ನಮಗೆ ಶೇ. 3ರ ಮೀಸಲಾತಿ ಇತ್ತು. ಹಾಗ ಕೇವಲ 5 ಉಪಜಾತಿಗಳಿದ್ದವು.

       ಪ್ರಸ್ತುತ 2019ರಲ್ಲಿ ನಾಯಕ ಜನಾಂಗದ ಸಂಖ್ಯೆ 80 ಲಕ್ಷ ದಾಟಿದ್ದು ಇದರಲ್ಲಿ 52 ಉಪಜಾತಿಗಳಿವೆ. ಆದರೆ, ಮೀಸಲಾತಿ ಮಾತ್ರ ಕೇವಲ ಶೇ.3. ನಾವು ಸರ್ಕಾರವನ್ನು ಶೇ.7.5 ಮೀಸಲಾತಿ ನೀಡುವಂತೆ ಕಳೆದ 20 ವರ್ಷಗಳಿಂದ ಬೇಡಿಕೆ ಇಟ್ಟಿದ್ದರೂ ಸಹ ರಾಜ್ಯ ಸರ್ಕಾರ ಸ್ಪಂದಿಸಿಲ್ಲ.

      ಇತ್ತೀಚೆಗೆ ತಾನೇ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಈ ಬಗ್ಗೆ ಗಮನಹರಿಸಿ ನಾಯಕ ಜನಾಂಗದ ಮೀಸಲಾತಿಗೆ ಬೇರೆಯಾವುದೇ ಸಮುದಾಯವನ್ನು ಸೇರ್ಪಡೆ ಮಾಡದಂತೆ ಮನವಿ ಮಾಡಿಕೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಯಾವುದಾದರೂ ಜಾತಿಗಳನ್ನು ಎಸ್ಟಿ ಮೀಸಲಾತಿಗೆ ಸೇರ್ಪಡೆ ಮಾಡಬೇಕಿದ್ದಲ್ಲಿ ಆ ಜನಾಂಗದ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಿ ಎಸ್ಟಿಗೆ ಸೇರ್ಪಡೆಯಾದರೆ ನಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ.

         ಎಲ್ಲಾ ಹಿಂದುಳಿದ ವರ್ಗಗಳನ್ನು ಎಸ್ಟಿ ವ್ಯಾಪ್ತಿಗೆ ತರಬೇಕಾದಲ್ಲಿ ಕನಿಷ್ಟ ಪಕ್ಷ 30ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ನೀಡಲು ಸಿದ್ದವಾದಲ್ಲಿ ಮಾತ್ರ ನಮ್ಮ ಸಮುದಾಯಕ್ಕೆ ನ್ಯಾಯದೊರಕುತ್ತದೆ. ಈ ಹಿನ್ನೆಲೆಯಲ್ಲಿ ಜೂನ್-8ರಂದು ರಾಜ್ಯಮಟ್ಟದಲ್ಲಿ ಸಭೆ ನಡೆಸಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಾಗುವುದಲ್ಲದೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಪುರುಷೋತ್ತಮ ನಾಯಕ, ಆರ್.ನಾಗೇಶ್‍ನಾಯಕ, ರಾಘುವೇಂದ್ರನಾಯಕ, ಲಕ್ಷ್ಮಣ್‍ನಾಯಕ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap