ಚಿತ್ರದುರ್ಗ:
ಸಾವು-ಬದುಕಿನ ನಡುವೆ ಹೋರಾಡುವವರಿಗೆ ರಕ್ತದಾನ ಮಾಡಿ ಅಮೂಲ್ಯವಾದ ಜೀವ ಉಳಿಸುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಬೇಕೆಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ರಂಗನಾಥ್ ಕರೆ ನೀಡಿದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ, ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದೊಂದಿಗೆ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಒಬ್ಬರು ರಕ್ತದಾನ ಮಾಡುವುದರಿಂದ ನಾಲ್ವರ ಪ್ರಾಣ ಉಳಿಸಬಹುದು. ಯಾರು ರಕ್ತದಾನ ಮಾಡುತ್ತಾರೋ ಅವರೆ ನಿಜವಾದ ಹೀರೋ-ಹೀರೋಹಿನ್‍ಗಳು. ಹದಿನೆಂಟರಿಂದ ಅರವತ್ತು ವರ್ಷ ವಯೋಮಾನದವರು ಯಾರು ಬೇಕಾದರು ರಕ್ತದಾನ ಮಾಡಬಹುದು. ರಕ್ತದಾನ ಮಾಡುವವರು 45 ಕೆ.ಜಿ.ಗಿಂತ ಹೆಚ್ಚಿನ ತೂಕವಿರಬೇಕು. ರಕ್ತದಲ್ಲಿ ಶೇ.12 ರಷ್ಟು ಹಿಮೋಗ್ಲೋಬಿನ್ ಇರಬೇಕು. ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ಹೇಳಿದರು.
ರಕ್ತವನ್ನು ಕೃತಕವಾಗಿ ತಯಾರು ಮಾಡಲು ಆಗುವುದಿಲ್ಲ. ರಕ್ತಕ್ಕೆ ಪರ್ಯಾಯ ಬೇರೆ ಇಲ್ಲ. ಒಬ್ಬರು ಮತ್ತೊಬ್ಬರಿಗೆ ರಕ್ತದಾನ ಮಾಡುವುದೊಂದೆ ಇರುವ ದಾರಿ. ಅದಕ್ಕಾಗಿ ಸ್ವಯಂಪ್ರೇರಿತರಾಗಿ ಎಲ್ಲರೂ ರಕ್ತದಾನ ಮಾಡಲು ಮುಂದೆ ಬರಬೇಕು. ಪ್ರತಿ ಕಾಲೇಜುಗಳಲ್ಲಿ ಯುವಕ-ಯುವತಿಯರು ವರ್ಷಕ್ಕೆ ಎರಡು ಬಾರಿ ರಕ್ತದಾನ ಮಾಡಬಹುದು. ಜಿಲ್ಲೆಯಲ್ಲಿರುವ ಜನಸಂಖ್ಯೆಗನುಗುಣವಾಗಿ ವರ್ಷಕ್ಕೆ ಶೇ.1 ರಷ್ಟು ರಕ್ತದ ಅವಶ್ಯಕತೆಯಿರುವುದರಿಂದ ರಕ್ತವನ್ನು ಪೂರೈಸಲು ಇಂತಹ ಶಿಬಿರಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು ಎಂದರು.
ಹೆರಿಗೆ ಮುಂಚೆ, ಹೆರಿಗೆಯ ನಂತರ ತೀವ್ರ ರಕ್ತಸ್ರಾವವಾಗುವ ಸಂದರ್ಭದಲ್ಲಿ ರಕ್ತ ತುರ್ತಾಗಿ ಬೇಕಾಗುತ್ತದೆ. ಚಿಕ್ಕಮಕ್ಕಳಿಗೆ ಹುಟ್ಟಿನಿಂದಲೇ ರಕ್ತಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡಾಗ ಜೀವನಪರ್ಯಂತ ರಕ್ತವನ್ನು ಬದಲಾಯಿಸಬೇಕಾಗುತ್ತದೆ. ಕ್ಯಾನ್ಸರ್ ರೋಗಿಗಳಿಗೆ ರಕ್ತದ ಅವಶ್ಯಕತೆಯಿದೆ. ಅಪಘಾತ, ಹೆರಿಗೆ ಸಮಯದಲ್ಲಿ ರಕ್ತದ ಕೊರತೆಯಿಂದ ಸಂಭವಿಸುವ ಸಾಕಷ್ಟು ಸಾವು-ನೋವುಗಳನ್ನು ತಡೆಯಬೇಕಾದರೆ ರಕ್ತ ಬೇಕೆ ಬೇಕು.
ರಕ್ತದಾನಿಗಳಿಗೆ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಮನೋಲ್ಲಾಸ, ಜ್ಞಾಪಕ ಶಕ್ತಿ ಹೆಚ್ಚಿ ಹೃದಯ ಸಂಬಂಧಿ ಕಾಯಿಲೆ ಜಾಸ್ತಿ ಕಾಡುವುದಿಲ್ಲ. ಎಲ್ಲಕ್ಕೂ ಮಿಗಿಲಾಗಿ ರಕ್ತದಾನದಿಂದ ಮತ್ತೊಬ್ಬರ ಪ್ರಾಣ ಉಳಿಸಿದ ತೃಪ್ತಿ ಸಿಗುತ್ತದೆ. ಹಾಗಾಗಿ ರಕ್ತದಾನಕ್ಕಿಂತ ಮಿಗಿಲಾದ ದಾನ ಬೇರೆ ಯಾವುದು ಇಲ್ಲ. ಅದೇ ರೀತಿ ಇತರೆ ಅಂಗಾಂಗಗಳನ್ನು ದಾನ ಮಾಡಬಹುದು ಎಂದು ತಿಳಿಸಿದರು.
ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ರಕ್ತದಾನ ಮಾಡಿ ಮತ್ತೊಬ್ಬರ ಪ್ರಾಣ ಉಳಿಸಿದರೆ ಅದಕ್ಕಿಂತಲೂ ಪವಿತ್ರವಾದ ಕೆಲಸ ಬೇರೆ ಯಾವುದು ಇಲ್ಲ. ಹಾಗಾಗಿ ಪ್ರತಿಯೊಬ್ಬರು ಸ್ವಯಂತಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗುವಂತೆ ವಿನಂತಿಸಿದರು.
ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಈ.ರುದ್ರಮುನಿ ಅಧ್ಯಕ್ಷತೆ ವಹಿಸಿದ್ದರು.ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಉಪಾಧ್ಯಕ್ಷ ಎಸ್.ವೀರೇಶ್, ಸಭಾಪತಿ ವೈ.ಬಿ.ಮಹೇಂದ್ರನಾಥ್, ನಿರ್ದೇಶಕ ಶ್ರೀನಿವಾಸ್ ಮಳಲಿ, ಕಾರ್ಯದರ್ಶಿ ಎನ್.ಮಜಹರ್‍ಉಲ್ಲಾ, ಡಾ.ಹರಿಣಿ, ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ಡಾ.ರೂಪ, ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಎಂ.ವಿ.ಗೋವಿಂದರಾಜ್ ವೇದಿಕೆಯಲ್ಲಿದ್ದರು.