ತುಮಕೂರು:
ಜಾನಪದ ಕತೆಗಳು ಬಹಳ ಹಿಂದಿನಿಂದಲೂ ಮೌಖಿಕ ಸಂಸ್ಕೃತಿಯಲ್ಲಿ ಬೆಳೆದು ಬಂದಿವೆ. ರಾಮಾಯಣ ಮತ್ತು ಮಹಾಭಾರತ ಕಾವ್ಯಗಳ ಮೂಲವೇ ಜಾನಪದ. ಇವು ಮೊದಲು ಹುಟ್ಟಿದ್ದು ಸ್ವಲ್ಪವಾದರೂ ನಂತರ ಜನಪದರ ಬಾಯಲ್ಲಿ ಹಿಗ್ಗಿ ಬೃಹದಾಕಾರವಾಗಿ ಬೆಳೆದಿವೆ. ಹಿಂದೆ ವಿದ್ಯಾಭ್ಯಾಸ ಇಲ್ಲದ ಕಾಲದಲ್ಲಿ ಬಾಯಿಂದ ಬಾಯಿಗೆ ತಮ್ಮ ಭಾವನೆಗಳ ಮೂಲಕ ಹಾಡನ್ನು ಕಟ್ಟುತ್ತಾ ಹೋಗುತ್ತಾನೆ.
ಸನ್ನಿವೇಶಕ್ಕೆ ತಕ್ಕಂತೆ ಕತೆ, ಹಾಡುಗಳನ್ನು ಕಟ್ಟುತ್ತಾ ಹೋಗುವುದೇ ಜಾನಪದ. ಎಲ್ಲಾ ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಜಾನಪದ ಜೀವಂತವಾಗಿರುವುದನ್ನು ಕಾಣುತ್ತೇವೆ. ಗಾದೆ, ಒಗಟು, ಲಾವಣಿ, ನಂದಿ ಧ್ವಜ ಕುಣಿತ, ಕೋಲಾಟ, ಬಯಲಾಟ ಇವುಗಳೆಲ್ಲವೂ ಜಾನಪದ ಕಲೆಗಳಾಗಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷರಾದ ಪ್ರೊ. ಡಿ. ಚಂದ್ರಪ್ಪನವರು ತಿಳಿಸಿದರು.
ಅವರು ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಆದರ್ಶ ನಗರ ಶಾಖೆಯು ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಟೂಡಾ ಆಫೀಸ್ ಹತ್ತಿರ, ಬೆಳಗುಂಬ ರಸ್ತೆ ಇಲ್ಲಿ ಏರ್ಪಡಿಸಿದ್ದ 138 ನೇ ಸಾಪ್ತಾಹಿಕ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಜಾನಪದ ಸಾಹಿತ್ಯದಲ್ಲಿ ಹೆಣ್ಣು’ ಎಂಬ ವಿಷಯ ಕುರಿತು ಮಾತನಾಡುತ್ತಾ “ಜನಪದರು ಮೂಲಭೂತವಾಗಿ ಮೊದಲು ಹಾಡುತ್ತಿದ್ದರು.
ಮಣ್ಣಿನ ಮಕ್ಕಳು ಶತಶತಮಾನಗಳ ಹಿಂದೆ ಬೆಳಗೆದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯುವ ಭೂತಾಯಿ ನೆನೆಯಲಿ ಎಂದು ಹಾಡುತ್ತಿದ್ದರು. ದಿನ ಬೆಳಿಗ್ಗೆ ತಿನ್ನುವ ಪ್ರಸಾದ ಯಾವುದೇ ವ್ಯಕ್ತಿಯ ಬೆವರಿನ ಅನ್ನವನ್ನು ತಿನ್ನದೆ ತಾನೇ ದುಡಿದು ತಿನ್ನಬೇಕು.
ಬೇರೆಯವರ ಅನ್ನಕ್ಕೆ ಕೈಚಾಚಬಾರದು ಎಂಬುದು ಜನಪದರ ಗುರಿಯಾಗಿತ್ತು. ಕುರಿ, ದನ ಕಾಯುವಾಗ, ತೋಟದಲ್ಲಿ, ಹೊಲದಲ್ಲಿ ದುಡಿಯುವಾಗ ತಮ್ಮ ಭಾವನೆಗಳನ್ನು ಕಟ್ಟಿ ಹಾಡುವ ಶಕ್ತಿಯೇ ಜಾನಪದವಾಗಿತ್ತು” ಎಂದು ಹೇಳಿದರು. “ಕಿಟಲ್ ಕನ್ನಡವನ್ನು ಕಲಿತು ಕನ್ನಡ ಪದಗಳಿಗೆ ಅರ್ಥ, ಗಾದೆ, ಒಗಟುಗಳನ್ನು ಜನಪದರ ಸಹಾಯದಿಂದ ರಚಿಸಿ ಸಾಧನೆ ಮಾಡಿದರು.
ಜನಪದರನ್ನು ಅನಕ್ಷರಸ್ಥರೆಂದು ಅವಹೇಳನವಾಗಿ ಮಾತನಾಡುವ ಜನರಿಗೆ ಉತ್ತರ ಕೊಟ್ಟವರು ಬಿ.ಎಂ.ಶ್ರೀಕಂಠಯ್ಯನವರು. ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳು ಜಾನಪದ ಅಧ್ಯಯನ ಕೇಂದ್ರಗಳನ್ನು ತೆರೆದಿವೆ. ಪರಮಶಿವಯ್ಯ, ಡಾ. ಹಾ.ಮಾ.ನಾಯಕರವರು ಜಾನಪದದ ಬಗ್ಗೆ ಅದ್ಭುತ ಸಮೀಕ್ಷೆ ನಡೆಸಿ ಒಂದು ನಿರ್ದಿಷ್ಟ ನೆಲೆಯನ್ನು ಕೊಟ್ಟವರು” ಎಂದು ತಿಳಿಸಿದರು.
“ ‘ಹಾಲುಂಡ ತವರಿಗೆ ಏನೆಂದು ಹಾಡಲಿ, ಹೊಳೆ ದಂಡೆಯ ಗರಿಕೆ ಹಬ್ಬಿದಂತೆ ರಸಬಳ್ಳಿ ಹಬ್ಬಲಿ’ ಎಂದು ಹಾಡುವುದು ಜಾನಪದ. ಮಳೆ ಬರದಿದ್ದಾಗ ‘ಬಾರೋ ಬಾರೋ ಮಳೆರಾಯ, ಬಾಳೆಯ ತೋಟಕ್ಕೆ ನೀರಿಲ್ಲ’ ಎಂದು ಹಾಡುವುದು, ಆಕಳಿಕೆ, ತೂಕಡಿಕೆ ಹೆಚ್ಚಾದಾಗ ಅದಕ್ಕೊಂದು ಜಾನಪದ ಹಾಡು ಕಟ್ಟುವ ಜನರನ್ನು ಕಾಣುತ್ತೇವೆ. ದೈಹಿಕವಾಗಿ, ಮಾನಸಿಕವಾಗಿ ಅವರೇ ಕೃತಿಗಳನ್ನು ರಚಿಸಿ, ಹಾಡುವುದು, ಪಾಲಿಸುವುದು ಅವರ ಸಹಜ ಜೀವನವಾಗಿದೆ. ಹೆಣ್ಣಾಗಿ ಹುಟ್ಟುವುದಕ್ಕಿಂತ ಮಣ್ಣಾಗಿ ಹುಟ್ಟಿ, ಮಣ್ಣಿನ ಮೇಲೊಂದು ಮರವಾಗಿ ಬೆಳೆದರೆ, ನೆರಳಾಗುವೆ ಎಂಬ ಭಾವನೆಯು ಸಹ ಜನಪದವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಆದರ್ಶ ನಗರ ಶಾಖೆಯ ಅಧ್ಯಕ್ಷರಾದ ಶ್ರೀ ಕೆ. ಭಕ್ತಪ್ರಸಾದ್‍ರವರು ಮಾತನಾಡುತ್ತಾ “ಜಾನಪದ ಸಾಹಿತ್ಯ ಎನ್ನುವುದು ಎಲ್ಲಾ ಸಾಹಿತ್ಯಗಳ ಬೇರು. ಮಣ್ಣಿನ ಸಾಹಿತ್ಯ ಅಲ್ಲಿಯ ಸೊಗಡನ್ನು ಹೀರಿಕೊಂಡು ಬೆಳೆದುಬಂದ ಸಾಹಿತ್ಯ. ಡಾ. ಹಾ.ಮಾ.ನಾಯಕ ಜಾನಪದವನ್ನು ಬೆಳಕಿಗೆ ತಂದವರಲ್ಲಿ ಒಬ್ಬರು.
ಜನಸಮೂಹದ ಜ್ಞಾನ ಜಾನಪದದಲ್ಲಿದೆ. ಎಲ್ಲಾ ಶಿಷ್ಠ ಸಾಹಿತ್ಯಕ್ಕೆ ಮೂಲ ಜಾನಪದ. ಎಲ್ಲವೂ ಜಾನಪದ ಸಾಹಿತ್ಯದಲ್ಲಿ ಅಡಕವಾಗಿದೆ ಎಂದು ಜವರೇಗೌಡ ತಿಳಿಸಿದ್ದಾರೆ. ತುಳುನಾಡಿನ ಜಾನಪದ ಮಾತೃ ಪ್ರಧಾನವಾದ ಪ್ರಾಮುಖ್ಯತೆಯನ್ನು ಪಡೆದು ರೂಪಿತವಾಗಿದೆ. ಕವಿವಾಣಿ-ಹೂ, ಜಾನಪದ-ಬೇರು. ಸಮಾಜದಲ್ಲಿನ ಲೋಪ ದೋಷಗಳನ್ನು ಹೋಗಲಾಡಿಸಲು ಜಾನಪದ ಸಾಹಿತ್ಯದಿಂದ ಮಾತ್ರ ಸಾಧ್ಯ” ಎಂದರು. ಶ್ರೀಮತಿ ಇಂದಿರಮ್ಮ ಪ್ರಾರ್ಥಿಸಿದರು.
ಕಾರ್ಯದರ್ಶಿ ಸಿದ್ಧರಾಮಯ್ಯ ಸ್ವಾಗತ ಕೋರಿದರು. ವಿ.ಪಿ.ಕೃಷ್ಣಮೂರ್ತಿ ನಿರೂಪಿಸಿ ವಂದಿಸಿದರು. ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಸಂಸ್ಥಾಪಕರಾದ ಶಾಂತಿಲಾಲ್ ಪಿ., ಮಾಜಿ ಅಧ್ಯಕ್ಷರಾದ ನಿರಂಜನ್‍ದಾಸ್ ರಾಜ್ಬಾನ್, ವ್ಯವಸ್ಥಾ ಪ್ರಮುಖರಾದ ಅಬ್ಬಿನಹೊಳೆ ಸುರೇಶ್, ಶಿವಕುಮಾರ, ಲಕ್ಷ್ಮಿನಾರಾಯಣರವರು ಉಪಸ್ಥಿತರಿದ್ದರು.