ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ

ಹೊನ್ನಾಳಿ:

       ವೀರಶೈವ ಧರ್ಮ ವಿಶಾಲವಾದ ಆದರ್ಶ, ತತ್ವ-ಸಿದ್ಧಾಂತಗಳನ್ನು ಒಳಗೊಂಡಿದ್ದು, ಎಲ್ಲಾ ಧರ್ಮಗಳ ಸಾರದಂತಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

       ತಾಲೂಕಿನ ಮುಕ್ತೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ, ವೀರಭದ್ರೇಶ್ವರ ದೇವರ ಕೆಂಡದಾರ್ಚನೆ, ದುರ್ಗಾಂಬಿಕಾ ದೇವಿ ಶಿಲಾಮೂರ್ತಿ ಸ್ಥಾಪನೆ, ಶ್ರೀ ಮೈಲಾರಲಿಂಗೇಶ್ವರ ಕರಿಗಲ್ಲು ಸ್ಥಾಪನೆ ಹಾಗೂ ಜನಜಾಗೃತಿ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

       ಅನಾದಿ ಕಾಲದಿಂದಲೂ ಈ ನಾಡಿನ ಸಂಸ್ಕೃತಿ, ಧಾರ್ಮಿಕತೆಗೆ ವೀರಶೈವ ಧರ್ಮ ಭದ್ರ ಬುನಾದಿ ಒದಗಿಸಿದೆ. ನಮ್ಮ ಸನಾತನ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ನಾವೆಲ್ಲರೂ ಚಿಂತನೆ ನಡೆಸಬೇಕಾದ ಅಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಎಂದು ತಿಳಿಸಿದರು.
ಧರ್ಮ ಮತ್ತು ಸಂಸ್ಕೃತಿಗಳು ಅನಾದಿ ಕಾಲದಿಂದಲೂ ಮನುಕುಲದ ಏಳಿಗೆಗೆ ದಾರಿದೀಪವಾಗಿವೆ. ಇತ್ತೀಚಿನ ದಿನಗಳಲ್ಲಿ ಧರ್ಮ ಅಧರ್ಮದೆಡೆಗೆ ಸಾಗುತ್ತಿದ್ದು ಭಯೋತ್ಪಾದನೆ, ಉಗ್ರವಾದ ಮತ್ತಿತರ ದುಷ್ಕೃತ್ಯಗಳಿಂದ ಯುವಜನಾಂಗ ದಾರಿತಪ್ಪುತ್ತಿದೆ. ಈ ನಿಟ್ಟಿನಲ್ಲಿ ಸಮಾಜವನ್ನು ಸರಿದಾರಿಗೆ ತರಲು ನಾವೆಲ್ಲರೂ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು.

       ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಮನುಷ್ಯತ್ವ, ಮಾನವೀಯ ಮೌಲ್ಯಗಳೇ ನಾಡಿನ ಗುರುಪೀಠ ಪರಂಪರೆಯ ಪ್ರತೀಕವಾಗಿದ್ದು, ಸಂತರು, ಶರಣರು, ದಾರ್ಶನಿಕರು ಜನಿಸಿದ ಪುಣ್ಯಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಧನ್ಯರು. ಹುಟ್ಟಿನಿಂದ ಯಾವುದೇ ಬೇಧ-ಭಾವವಿಲ್ಲದೇ ಪರಸ್ಪರ ಸಹೋದರರಂತೆ ಬಾಳುವುದು ಆದ್ಯ ಕರ್ತವ್ಯವಾಗಿದೆ. ಮನುಷ್ಯ ಹೇಗಾದರೂ ಬುದುಕಬಹುದು. ಆದರೆ, ಅದನ್ನು ಬದುಕು ಎನ್ನಲಾಗದು.

       ಮಾನವಂತನಾಗಿ ಆದರ್ಶ, ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಬದುಕಬೇಕು ಎನ್ನುವುದು ಸರ್ವ ಧರ್ಮಗಳ ಸಿದ್ಧಾಂತವಾಗಿದೆ. ಈ ನಿಟ್ಟಿನಲ್ಲಿ ಅರಿವೇ ಗುರು, ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ವೀರಶೈವ ತತ್ವಾದರ್ಶಗಳನ್ನು ಪರಿಪಾಲಿಸುತ್ತಾ ಮನುಕುಲದಲ್ಲಿ ಧರ್ಮ ಜಾಗೃತಿ ಮೂಡಿಸಿ ಮನುಜರನ್ನು ಮಾನವೀಯತೆಯೆಡೆಗೆ ಕೊಂಡೊಯ್ಯುತ್ತಿರುವ ರೇಣುಕಾದಿ ಜಗದ್ಗುರುಗಳ ಸಾಧನೆ ನಾಡಿನ ಧಾರ್ಮಿಕ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದು ವಿವರಿಸಿದರು.

         ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗ್ರಾಮದ ಸದ್ಭಕ್ತರು, ಹಿರಿಯರು, ಮುಖಂಡರು, ಸುತ್ತಮುತ್ತಲಿನ ವಿವಿಧ ಗ್ರಾಮಸ್ಥರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link