ನಾಳೆ ಬೆಂಗಳೂರಿಗೆ ರಮೇಶ್ ಜಾರಕಿಹೊಳಿ ಆಗಮನ

ಬೆಂಗಳೂರು

          ಸಚಿವ ಸ್ಥಾನದಿಂದ ಪದಚ್ಯುತಗೊಂಡಿರುವ ರಮೇಶ್ ಜಾರಕಿಹೊಳಿ, ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದಾರೆ. ಅವರು ತಮ್ಮ ಶಾಸಕ ಸ್ಥಾನಕ್ಕೂ ಅವರು ರಾಜೀನಾಮೆ ನೀಡುವುದಾಗಿ ವದಂತಿ ಹಬ್ಬಿದೆ.

         ರಮೇಶ್ ಜಾರಕಿಹೊಳಿ ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದು, ಎರಡು ದಿನಗಳ ಕಾಲ ತಮ್ಮ ಬೆಂಬಲಿಗರ ಜತೆ ಚರ್ಚೆ ನಡೆಸಿದ ನಂತರ ತಮ್ಮ ಮುಂದಿನ ಹೆಜ್ಜೆ ಬಗ್ಗೆ ಅವರು, ನಿರ್ಧರಿಸಲಿದ್ದಾರೆ.

          ಬಿಜೆಪಿಯ ಕೆಲ ನಾಯಕರ ಜತೆ ಬಹಿರಂಗವಾಗಿ ಗುರುತಿಸಿಕೊಂಡಿರುವ ರಮೇಶ್ ಜಾರಕಿಹೊಳಿ ಅವರ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಕಳವಳವಿದೆ. ಸಚಿವ ಸ್ಥಾನ ವಂಚಿತರಾದ ನಂತರ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ತಮ್ಮ ಆಪ್ತರಲ್ಲಿ ಹೇಳಿಕೊಂಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

         ಶನಿವಾರ ರಾತ್ರಿ ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಅವರ ಜತೆ ರಮೇಶ್ ಜಾರಕಿಹೊಳಿ ಮಾತುಕತೆ ನಡೆಸಿದ್ದರು. ರಮೇಶ್ ಜಾರಕಿಹೊಳಿ ಅವರ ಜತೆಗೆ ಸಚಿವ ಸ್ಥಾನ ವಂಚಿತರು ಸೇರಿದರೆ ಭಿನ್ನಮತ, ಬಂಡಾಯದ ಸ್ಪರೂಪ ಪಡೆಯಬಹುದು ಎನ್ನುವ ಆತಂಕ ಕಾಂಗ್ರೆಸ್ ವಲಯದಲ್ಲಿದೆ.

          ಜೆಡಿಎಸ್ – ಕಾಂಗ್ರೆಸ್ ಪಕ್ಷದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಈಗಾಗಲೇ ನಮ್ಮ ಪಕ್ಷದರು ಯಾರೂ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

          ಇಂದು ಬೆಳಗಾವಿಯ ಸಾಂಬ್ರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದಿದ್ದಾಗ ಅಸಮಾಧಾನ ಸಹಜ. ರಮೇಶ್ ಜಾರಕಿಹೊಳಿ ಅವರ ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ಹೇಳಿದರು.

          ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಹಿರೆಕೆರೂರು ಶಾಸಕ ಬಿ.ಸಿ. ಪಾಟೀಲ್ ಅವರ ಜತೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಆದರೆ ರಮೇಶ್ ಜಾರಕಿಹೊಳಿ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ. ಪಕ್ಷದ ಮುಖಂಡರು ಅವರ ಅಸಮಾಧಾನವನ್ನು ಬಗೆಹರಿಸಲಿದ್ದಾರೆ ಎಂದರು.

         ಆದರೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಯಿಸಿ, ಶಾಸಕ ರಮೇಶ ಜಾರಕಿಹೊಳಿ ರಾಜೀನಾಮೆ ನೀಡುವ ವಿಚಾರ ತಮಗೆ ತಿಳಿದಿಲ್ಲ. ಈ ಬಗ್ಗೆ ಕಾಂಗ್ರೆಸ್ ಪಕ್ಷವೇ ತೀರ್ಮಾನ ಮಾಡಬೇಕು ಎಂದು ಕೈ ತೊಳೆದುಕೊಂಡಿದ್ದಾರೆ.

           ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಈ ಬಗ್ಗೆ ಪ್ರತಿಕ್ರಯಿಸಿ, ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬರುವ ಬಗ್ಗೆ ತಮ್ಮಲ್ಲಿ ಮಾಹಿತಿ ಇಲ್ಲ. ಕಾಂಗ್ರೆಸ್ ನವರು ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಅವರ ಜವಾಬ್ದಾರಿಯಾಗಿದೆ. ಬಿಜೆಪಿ ಸಮುದ್ರದಂತೆ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಯಾರು ಬೇಕಾದರೂ ಪಕ್ಷ ಸೇರಬಹುದು. ಆದರೆ ಅದಕ್ಕೂ ಮುನ್ನ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನಂತರವಷ್ಟೇ ಪಕ್ಷ ಸೇರ್ಪಡೆ ವಿಚಾರ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap