ಗೋಲ್ ಮಾಲ್ ಸಂಸ್ಥೆಗೆ ಗುತ್ತಿಗೆ ನೀಡಲು ಸಲಹೆ ನೀಡಿದ ರಮೇಶ್ ಕುಮಾರ್

ಬೆಳಗಾವಿ

        ಹಾಸ್ಟೆಲ್‍ಗಳಿಗೆ ಆಹಾರ ಪೂರೈಕೆಗೆ ಸಂಬಂಧಿಸಿದಂತೆ 1 ರೂ.ಗೆ ಕಿ.ಲೋ. ರಾಗಿ,ದಪ್ಪ ಅಕ್ಕಿಗೆ 10 ರೂ.ನಂತೆ ಭಾರಿ ರಿಯಾಯಿತಿ ದರವನ್ನು ನಮೂದಿಸಿ ಟೆಂಡರ್ ಗಿಟ್ಟಿಸಿದ ಪ್ರಕರಣ ಸದನದಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. ಅಗ್ಗದ ದರದಲ್ಲಿ ಆಹಾರ ಪೂರೈಸುವುದಾಗಿ ಹೇಳಿ ದಾರಿತಪ್ಪಿಸುತ್ತಿರುವ “ಪುಣ್ಯಾತ್ಮ”ನನ್ನು ಕರೆಸಿ ಸನ್ಮಾನ ಮಾಡುವ ಇರಾದೆಯನ್ನು ಸಿಎಂ ಎಚ್.ಡಿ.ಕುಮಾರಸ್ವಾಮಿ ವ್ಯಕ್ತಪಡಿಸಿದರು.

          ಶೂನ್ಯವೇಳೆಯಲ್ಲಿ ಬಿಜೆಪಿಯ ಕುಮಾರ್ ಬಂಗಾರಪ್ಪ ವಿಷಯ ಪ್ರಸ್ತಾಪಿಸಿದರು. 1 ರೂ.ಗೆ ಕಿ.ಲೋ.ರಾಗಿ,10ರೂಗೆ ಅಕ್ಕಿ ಪೂರೈಸುವ ಟೆಂಡರ್ ಅಕ್ರಮದ ಬಗ್ಗೆ ಸದನವೇ ಚರ್ಚೆಯಲ್ಲಿ ಭಾಗಿಯಾಯಿತು. “ಈ ಗೋಲ್‍ಮಾಲ್ ಸಂಸ್ಥೆಗೇ ಗುತ್ತಿಗೆ ಕೊಟ್ಟು ಆಹಾರ ಪೂರೈಕೆ ಮಾಡಲು ತಾಕೀತು ಮಾಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಮೂಲಕ ನಿರ್ದೇಶನ ನೀಡುವಂತೆ” ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ಅವರು ಸರಕಾರಕ್ಕೆ ಸಲಹೆ ನೀಡಿದರು.

           ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಕುಮಾರ್ ಬಂಗಾರಪ್ಪ “ಹಾಸ್ಟೆಲ್‍ಗೆ ಆಹಾರ ಸರಬರಾಜು ಗುತ್ತಿಗೆ ಪಡೆಯಲು ವ್ಯಾಪಾರಿ ಸಂಸ್ಥೆಯೊಂದು ಭಾರೀ ಗೋಲ್‍ಮಾಲ್ ಮಾಡುತ್ತಿದೆ. 1 ರೂ.ಗೆ ಕಿ.ಲೋ. ರಾಗಿ, 10 ರೂ.ಗೆ ದಪ್ಪ ಅಕ್ಕಿ, 6 ರೂ.ಗೆ ಶುದ್ಧೀಕರಿಸಿದ ಗೋಧಿ ಹೀಗೆ.. ಅಗ್ಗದ ದರ ನಮೂದಿಸಿ ಗುತ್ತಿಗೆ ಪಡೆಯಲು ಪ್ರಯತ್ನ ನಡೆದಿದೆ. ಗುತ್ತಿಗೆದಾರ ಹಲವು ವರ್ಷಗಳಿಂದ ಈ ರೀತಿ ಆಹಾರ ಸರ¨ರಾಜು ಗುತ್ತಿಗೆ ಪಡೆದುಕೊಳ್ಳುತ್ತಿದ್ದು, ವ್ಯಾಪಕ ವಂಚನೆ ನಡೆಯುತ್ತಿದೆ” ಎಂದು ಸದನದ ಗಮನ ಸೆಳೆದರು.

          ಸದಸ್ಯರ ಈ ಪ್ರಸ್ತಾಪದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಬಿಜೆಪಿಯ ಮಾಧುಸ್ವಾಮಿ “ನಮ್ಮ ತುಮಕೂರು ಜಿಲ್ಲೆಗೂ ಆ ಗುತ್ತಿಗೆದಾರನನ್ನು ಕಳಿಸಿ. 1 ರೂ.ಗೆ ಕಿ.ಲೋ. ರಾಗಿ ಪೂರೈಸುವುದಾದರೆ ಇಡೀ ರಾಜ್ಯದ ಹಾಸ್ಟೆಲ್‍ಗಳಿಗೆ ಆಹಾರ ಪೂರೈಕೆ ಸರಬರಾಜು ಗುತ್ತಿಗೆಯನ್ನು ಆತನಿಗೇ ನೀಡಬಹುದು. ಸರಕಾರಕ್ಕೂ ಕೋಟ್ಯಾಂತರ ರೂಪಾಯಿ ಹಣ ಉಳಿಯುತ್ತದೆ. ಎಂದರು. “1 ರೂ.ಗೆ ರಾಗಿ ಪೂರೈಸುತ್ತೇನೆ ಎಂದರೆ ಆ ಗುತ್ತಿಗೆದಾರ ವಂಚಕನೇ ಇರಬೇಕು. ಅಧಿಕಾರಿಗಳು ರೇಟ್ ನೋಡುವುದಲ್ಲ, ವಾಸ್ತವವನ್ನೂ ಗಮನಿಸಬೇಕು. ಪಾರದರ್ಶಕ ಕಾಯಿದೆ (ಕೆಟಿಟಿಪಿ) ದುರುಪಯೋಗವಾಗುತ್ತಿರುವುದಕ್ಕೆ ಇದು ನಿದರ್ಶನ” ಎಂದು ಸ್ಪೀಕರ್ ಧ್ವನಿಗೂಡಿಸಿದರು.

         “ಹಲವು ವರ್ಷಗಳಿಂದ ಗುತ್ತಿಗೆ ಹಿಡಿದು ರುಚಿ ಕಂಡಿರುವ ಈ ಗುತ್ತಿಗೆದಾರ ಇಡೀ ರಾಜ್ಯಕ್ಕೆ ತನ್ನ ವಂಚನೆ ಜಾಲ ವಿಸ್ತರಿಸಲು ಮುಂದಾಗಿದ್ದಾನೆ” ಎಂದು ಬಿಜೆಪಿಯ ಕೆ.ಎಸ್.ಈಶ್ವರಪ್ಪ ಹೇಳಿದರೆ, “10 ವರ್ಷಗಳಿಂದ ಟೆಂಡರ್ ಇಲ್ಲದೇ ಶಿವಮೊಗ್ಗದಲ್ಲಿ ಹಾಸ್ಟೆಲ್‍ಗಳಿಗೆ ಆಹಾರ ಪೂರೈಕೆ ಅಡ್ಜಸ್ಟ್‍ಮೆಂಟ್ ನಡೀತಿದೆ” ಎಂದು ಅರಗ ಜ್ಞಾನೇಂದ್ರ ಸದನದ ಗಮನ ಸೆಳೆದರು.

        “ಕಡಿದಾಳ್ ಮಂಜಪ್ಪ ಅವರಂತಹ ಹಲವು ಧೀಮಂತ ನಾಯಕರ ನಾಡು ಶಿವಮೊಗ್ಗದಲ್ಲಿ ಏನ್ರೀ ಇದು ಲಂಚಾವತಾರ…” ಎಂದು ಸ್ಪೀಕರ್ ನೋವು ವ್ಯಕ್ತಪಡಿಸಿದರು. ಸರಕಾರದ ಪರವಾಗಿ ಉತ್ತರ ನೀಡಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ “ಇಲಾಖೆ ಖರೀದಿಯಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟ ಖಾತರಿಗಾಗಿ ಹೊಸ ವ್ಯವಸ್ಥೆ ಮಾಡಲಾಗುತ್ತಿದೆ. ಈ ಸಂಬಂಧ ಎಲ್ಲ ಶಾಸಕರ ಸಲಹೆಯನ್ನೂ ಕೇಳಿದ್ದೆ. ಆದರೆ, 8 ಮಂದಿ ಮಾತ್ರ ಲಿಖಿತವಾಗಿ ಸಲಹೆ ನೀಡಿದ್ದಾರೆ. ಮುಂದಿನ ವರ್ಷದಿಂದ ಹೊಸ ಖರೀದಿ ವ್ಯವಸ್ಥೆ ಮಾಡುತ್ತೇವೆ” ಎಂದರು.

        “ಪ್ರತಿ ಕಿ.ಲೋ.ರಾಗಿ 22 ರೂ.ಗಿಂತ ಕಡಿಮೆಗೆ ಸಿಗಲ್ಲ. ಆದರೂ, 1 ರೂ.ಗೆ ಕಿ.ಲೋ. ರಾಗಿ ಪೂರೈಸುವ ಟೆಂಡರ್‍ನ್ನು ಜಿಲ್ಲಾಧಿಕಾರಿ ತಡೆಹಿಡಿದಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು” ಎಂದು ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.

ಪುಣ್ಯಾತ್ಮನಿಗೆ ಸನ್ಮಾನ!

        ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಿಎಂ ಎಚ್.ಡಿ.ಕುಮಾರಸ್ವಾಮಿ “1 ರೂ.ಗೆ ಕಿ.ಲೋ. ರಾಗಿ ಪೂರೈಸುವ ಆ ಪುಣ್ಯಾತ್ಮ ಯಾರು ಕರೆಸಿ ಸನ್ಮಾನ ಮಾಡೋಣ. ಕೆಟಿಟಿಪಿ ಕಾಯಿದೆಯ ಕೆಲವು ನೂನ್ಯತೆ ದುರುಪಯೋಗ ಮಾಡಿಕೊಂಡು ದಾರಿತಪ್ಪಿಸುವ ಇಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇವೆ. ಜತೆಗೆ, ಕೆಟಿಟಿಪಿ ಕಾಯಿದೆ ಲೋಪಗಳನ್ನು ಸರಿಪಡಿಸಲೂ ತಕ್ಷಣ ಗಮನ ಹರಿಸುವುದಾಗಿ” ಸದನಕ್ಕೆ ಭರವಸೆ ನೀಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ