ಧರ್ಮಗಳು ಸಾಗುವ ದಾರಿ ಬೇರೆ, ತುಪುವ ಗುರಿ ಒಂದೇ

ದಾವಣಗೆರೆ:

     ಧರ್ಮಗಳು ಸಾಗುವ ದಾರಿ ಬೇರೆ, ಬೇರೆಯಾಗಿರಬಹುದು. ಆದರೆ, ಅವು ತಲುಪುವ ಗುರಿ ಒಂದೇ ಎಂದು ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಆತ್ಮಜ್ಞಾನಂದಜಿ ಮಹಾರಾಜ್ ಪ್ರತಿಪಾದಿಸಿದರು.

       ನಗರದ ಎಂ.ಸಿ.ಸಿ. ಎ ಬ್ಲಾಕ್‍ನಲ್ಲಿರುವ ರಾಮಕೃಷ್ಣ ಆಶ್ರಮದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸಗಳ 125ನೇ ವರ್ಷದ ಸಂಸ್ಮರಣೆಯ ಅಂಗವಾಗಿ ಏರ್ಪಡಿಸಿದ್ದ ಭಕ್ತ ಸಮಾವೇಶದಲ್ಲಿ ಭಾಗವಹಿಸಿ, ವಿವೇಕಾನಂದರು ಪರಿಚಯಿಸಿದ ಹಿಂದೂ ಧರ್ಮದ ಕುರಿತು ಉಪನ್ಯಾಸ ನೀಡಿದ ಅವರು, ವಿಶ್ವ ಧರ್ಮ ಎಂದರೆ, ಹಿಂದೂ ಧರ್ಮವೂ ಅಲ್ಲ, ಕ್ರಿಶ್ಚಿಯನ್, ಇಸ್ಲಾಂ ಅಥವಾ ಇನ್ಯಾವುದೇ ಧರ್ಮವಲ್ಲ.

      ಈ ಎಲ್ಲಾ ಧರ್ಮಗಳನ್ನು ಒಳಗೊಂಡಿರುವಂಥದ್ದಾಗಿದೆ. ಬೇರೆ, ಬೇರೆ ಧರ್ಮಗಳು ಅಂದರೆ, ಅವು ಬೇರೆ, ಬೇರೆ ಯಾತ್ರೆಗಳಾಗಿವೆ. ಅವುಗಳು ಸಾಗುವ ದಾರಿ ಬೇರೆ, ಬೇರೆ ಇರಬಹುದು. ಆದರೆ, ತಲುಪುವ ಗುರಿ ಒಂದೇ ಎಂಬುದನ್ನು ನಾವು ಅರಿಯಬೇಕಾಗಿದೆ ಎಂದು ಹೇಳಿದರು.

      ವಿಶ್ವ ಧರ್ಮವು ಯಾವುದನ್ನೂ ನಿಂದಿಸುವುದಿಲ್ಲ ಮತ್ತು ವಿಚಾರ ಒಪ್ಪದಿರುವವರನ್ನು ಹಿಂಸಿಸುವುದಿಲ್ಲ ಎಂಬುದು ಸ್ವಾಮಿ ವಿವೇಕಾನಂದರ ನಿಲುವಾಗಿತ್ತು. ಹೀಗಾಗಿ ವಿಶ್ವ ಧರ್ಮಕ್ಕೆ ಕಾಲ, ದೇಶಗಳ, ಮತ, ಪಂಥಗಳ ಮಿತಿ ಇಲ್ಲ. ಅಲ್ಲಿ ನಿಂದನೆ, ಅಸಹನೆಗೆ ಅವಕಾಶವೇ ಇಲ್ಲ.

        ನಮ್ಮ ನಂಬಿಕೆ, ಆಚರಣೆಗಳ ಆಚೆಗೂ ಸತ್ಯ ಇದೆ ಎಂಬ ತಿಳವಳಿಕೆ ನಮ್ಮದಾಗಬೇಕಾಗಿದೆ ಎಂದು ನುಡಿದರು.
ಕಲ್ಲು, ಮರ ಅಥವಾ ಇನ್ಯಾವುದೋ ಮೂರ್ತಿಗಳನ್ನು ಪೂಜಿಸುತ್ತಾರೆಂದರೆ, ಅದು ಕಲ್ಲು, ಮರ, ಮಣ್ಣಿನ ಪೂಜೆಯಲ್ಲ. ಅವುಗಳನ್ನು ಸಂಕೇತವನ್ನಾಗಿಟ್ಟುಕೊಂಡು, ಭಗವಂತನನ್ನು ಸಾಕ್ಷಾತ್ಕರಿಸುವುದಾಗಿದೆ. ಇದರಂತೆ, ಮಾತು-ಸದ್ದುಗಳು ಸಹ ಸಂಕೇತಗಳಾಗಿವೆ. ಇವೆಲ್ಲವೂಬೇಕು ಮತ್ತು ಇವುಗಳನ್ನು ಮೀರಬೇಕೆನ್ನುವುದು ವಿವೇಕಾನಂದರ ಚಿಂತನೆಯಾಗಿತ್ತು ಎಂದು ಸ್ಮರಿಸಿದರು.

        ನಿರಂತರ ವಿಕಾಸಗೊಳ್ಳುವುದೇ ಜೀವನವಾಗಿದೆ. ವಿಕಾಸಗೊಳ್ಳದೇ ಸ್ಥಗಿತಗೊಂಡರೆ, ಅದು ಬದುಕಾಗದು. ಎಲ್ಲಾ ಸ್ವಾರ್ಥವನ್ನು ಮೀರಿ ಎಲ್ಲವೂ ಭಗವಂತನಿಗೆ ಅರ್ಪಿಸುವ ಕಾಯಕ ಮಾಡಬೇಕಾಗಿದೆ. ಎಲ್ಲಾ ಸಣ್ಣತನಗಳನ್ನು ಮೀರಿ ದೊಡ್ಡ ವಿಶಾಲ ತತ್ವದಲ್ಲಿ ಬದುಕಬೇಕು. ಇದುವೇ ನಮ್ಮ ಧರ್ಮ. ಯಾವುದನ್ನು ತಿರಸ್ಕರಿಸದೇ, ಎಲ್ಲವನ್ನೂ ಸ್ವೀಕರಿಸುವುದೇ ಹಿಂದೂ ಧರ್ಮವಾಗಿದೆ ಎಂದು ಹೇಳಿದರು.

        ವಿವೇಕಾನಂದರ ವ್ಯಕ್ತಿ ಚಿತ್ರ ವಿಷಯ ಕುರಿತು ಶಾಸ್ತ್ರೀಹಳ್ಳಿಯ ಶ್ರೀಸತ್ಯಸಾಯಿ ವಿದ್ಯಾನಿಕೇತನ ಮುಖ್ಯೋಪಾಧ್ಯಾಯ ಜಗನ್ನಾಥ್ ನಾಡಿಗೇರ್ ಉಪನ್ಯಾಸ ನೀಡಿದರು.

         ಕಾರ್ಯಕ್ರಮದಲ್ಲಿ ಸ್ವಾಮಿ ಸತ್ಯಸ್ಥಾನಂದ ಮಹಾರಾಜ್, ಸ್ವಾಮಿ ತ್ಯಾಗೀಶ್ವರನಂದ ಮಹಾರಾಜ್, ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಮತ್ತಿತರರು ಉಪಸ್ಥಿತರಿದ್ದರು. 

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link