ಚಾಲನೆ ಮೂಲಕ ಅಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿದ ಶಾಸಕ

ಚಳ್ಳಕೆರೆ

     ಗ್ರಾಮೀಣ ಭಾಗದ ಜನರಿಗೆ ಸದಾಕಾಲ ಉತ್ತಮ ಆರೋಗ್ಯ ಸೇವೆ ಲಭಿಸುವಂತೆ ಕಾರ್ಯನಿರ್ವಹಿಸುವಲ್ಲಿ ಆರೋಗ್ಯ ಇಲಾಖೆ ಸದಾ ಜಾಗೃತವಾಗಿರಬೇಕು. ಯಾವುದೇ ಹಂತದಲ್ಲೂ ಸಾವು ಸಂಭವಿಸದಂತೆ ಉತ್ತಮ ಚಿಕಿತ್ಸೆ ನೀಡಬೇಕು. ಸರ್ಕಾರ ಜನರ ಆರೋಗ್ಯ ಹಿತದೃಷ್ಠಿಯಿಂದ ಜಾರಿಗೆ ತರುವ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆಯುವಂತಾಗಬೇಕೆಂದು ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ತಿಳಿಸಿದರು.

     ಅವರು, ತಳಕು ಹೋಬಳಿಯ ಬೇಡರೆಡ್ಡಿಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನೂತನವಾಗಿ ನೀಡಿದ ಅಂಬ್ಯುಲೆನ್ಸ್ ವಾಹನವನ್ನು ಸೇವೆಗೆ ಸಮರ್ಪಿಸಿ ಮಾತನಾಡಿದರು. ಆಸ್ಪತ್ರೆಯಿಂದ ದೂರವಿರುವ ಗ್ರಾಮಗಳಲ್ಲಿ ಯಾವುದೇ ಕಾಯಿಲೆಯಾದರೂ ಸಹ ಜನ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗದ ಸ್ಥಿತಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಮಾಡಿ, ರಾಜ್ಯದೆಲ್ಲೆಡೆ 108ರ ತುರ್ತು ವಾಹನ ಸೇವೆಯನ್ನು ಜಾರಿಗೆ ತರಲಾಯಿತು.

      ಆ ಸಮಯದಲ್ಲಿ ನಾನು ಆರೋಗ್ಯ ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೇ. ಇದರ ಪ್ರತಿಫಲವಾಗಿ ಇಂದು ಗ್ರಾಮೀಣ ಭಾಗದ ಜನರು ಇಂದು ಯಾವುದೇ ಭಯಾನಕ ರೋಗಕ್ಕೆ ತುತ್ತಾದರೂ ಹೆದರದೆ 108ರ ತುರ್ತು ವಾಹನ ಸೇವೆಯನ್ನು ಪಡೆದು ತಮ್ಮ ಜೀವವನ್ನು ರಕ್ಷಿಸಿಕೊಳ್ಳುತ್ತಾರೆ. ರಾಜ್ಯದ ಲಕ್ಷಾಂತರ ಜನರು ಪ್ರತಿನಿತ್ಯ ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ನನಗೂ ಸಹ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಜಾರಿಗೆ ತಂದ ಈ ಯೋಜನೆ ತೃಪ್ತಿ ತಂದಿದೆ. ಬಡ ಜನರ ಜೀವವನ್ನು ಸಂರಕ್ಷಿಸುವಲ್ಲಿ ಯಶಸ್ಸು ಸಾಧಿಸಿದ್ದೇನೆಂಬ ತೃಪ್ತಿ ನನಗೆ ಇದೆ ಎಂದರು.

       ಪ್ರಸ್ತುತ ಆರೋಗ್ಯ ಇಲಾಖೆಯಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಎಲ್ಲಾ ವಿಧದ ಔಷಧವನ್ನು ದಾಸ್ತಾನು ಮಾಡಬೇಕು. ವೈದ್ಯರು ಮತ್ತು ಸಿಬ್ಬಂದಿ ವರ್ಗ ಆಸ್ಪತ್ರೆಗೆ ಬರುವ ರೋಗಿಗಳ ಬಗ್ಗೆ ಹೆಚ್ಚು ಜಾಗೃತೆ ವಹಿಸಬೇಕಿದೆ. ಸರ್ಕಾರ ಏನೇ ವ್ಯವಸ್ಥೆ ಮಾಡಿದರೂ ಸಿಬ್ಬಂದಿ ವರ್ಗ ಸಹಕಾರ ನೀಡದಿದ್ದಲ್ಲಿ ಬಡ ರೋಗಿಗಳು ತೊಂದರೆಗೀಡಾಗುತ್ತಾರೆ. ಈ ನಿಟ್ಟಿನಲ್ಲಿ ಉತ್ತಮ ಸೇವೆ ನೀಡಲು ಹೆಚ್ಚು ಗಮನ ನೀಡುವಂತೆ ಇಲಾಖೆ ಸಿಬ್ಬಂದಿಗೆ ಕಿವಿ ಮಾತು ಹೇಳಿದರು.

       ತಳಕು ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್ ಮಾತನಾಡಿ, ಬರಗಾಲ ಹಿನ್ನೆಲೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಸಾರ್ವಜನಿಕರು ಯಾವುದೇ ಕಾಯಿಲೆಗಳು ಬಂದರೂ ಚಿಂತೆಗೀಡಾಗುತ್ತಾರೆ. ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸುವಲ್ಲಿ ಹೆಚ್ಚು ಗಮನಹರಿಸುವಂತೆ ಮನವಿ ಮಾಡಿದರು.

      ತಾಲ್ಲೂಕು ಪಂಚಾಯಿತಿ ಸದಸ್ಯ ಇ.ರಾಮರೆಡ್ಡಿ, ತಳಕು ಹೋಬಳಿಯ ಗೌರಸಮುದ್ರ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಹಲವಾರು ಸಮಸ್ಯೆಗಳಿಂದ ಪ್ರಗತಿಸಾಧಿಸಲು ಸಾಧ್ಯವಾಗುತ್ತಿಲ್ಲ. ಬೇಡರೆಡ್ಡಿಹಳ್ಳಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ವಾಹನ ನೀಡುವ ಮೂಲಕ ಇಲ್ಲಿನ ಜನರಿಗೆ ಹೆಚ್ಚು ಸೌಲಭ್ಯ ಪಡೆಯಲು ಶಾಸಕರು ಸಹಕರಿಸಿದ್ದಾರೆ. ಮುಂಬರುವ ದಿನಗಳಲ್ಲೂ ಸಹ ಶಾಸಕರು ನಿರಂತರ ಪ್ರವಾಸ ಕೈಗೊಂಡು ಈ ಭಾಗದ ಜನರಿಗೆ ಇನ್ನು ಹೆಚ್ಚು ಸ್ಪಂದಿಸುವಂತೆ ಮನವಿ ಮಾಡಿದರು.

        ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಮಾತನಾಡಿ, ಕ್ಷೇತ್ರದ ಶಾಸಕರಾದ ಬಿ.ಶ್ರೀರಾಮುಲುರವರ ಮನವಿ ಮತ್ತು ಈ ಭಾಗದ ಜನರ ಉತ್ತಮ ಆರೋಗ್ಯಕ್ಕಾಗಿ ಸುಸಜ್ಜಿತ ಅಂಬ್ಯುಲೆನ್ಸ್ ವಾಹನವನ್ನು ನೀಡಲಾಗಿದೆ. ಶಾಸಕರು ಒಂದು ಸಾರ್ವಜನಿಕರ ಸೇವೆ ವಾಹನವನ್ನು ಅರ್ಪಿಸಿದ್ದು, ಯಾವುದೇ ಹಂತದಲ್ಲೂ ಯಾರೂ ಸಹ ಅನಾರೋಗ್ಯ ಉಂಟಾದಲ್ಲಿ ಭಯಭೀತರಾಗದೆ ನಿಮ್ಮ ವ್ಯಾಪ್ತಿಯ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದರು.

       ಕಾರ್ಯಕ್ರಮದಲ್ಲಿ ಹಿರೇಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ.ಜಯಪಾಲಯ್ಯ, ಎಚ್.ವಿ.ಪ್ರಕಾಶ್, ಹಿರಿಯ ಮುಖಂಡ ಮೋಹನ್, ಹೊನ್ನೂರು ಗೋವಿಂದಪ್ಪ, ಟಿ.ಜೆ.ತಿಪ್ಪೇಸ್ವಾಮಿ, ಎಂ.ವೈ.ಟಿ.ಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ತಿಪ್ಪಕ್ಕಮಲ್ಲೇಶ್. ವೆಂಕಟಪ್ಪ, ಕುಬೇಂದ್ರರೆಡ್ಡಿ, ಶಿವಣ್ಣ, ತರಕಾರಿ ಓಬಣ್ಣ, ನಾಗೇಂದ್ರಪ್ಪ, ತಳಕು ನಾಗರಾಜು, ದಾಸರೆಡ್ಡಿ, ಪಾಪಣ್ಣ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link