ರಂಜಾನ್ ಹಬ್ಬದಲ್ಲಿ ಸಮೋಸ, ಖರ್ಜೂರಕ್ಕೆ ಬೇಡಿಕೆ

ತುಮಕೂರು

ವಿಶೇಷ ವರದಿ: ರಾಕೇಶ್.ವಿ.

     ಮುಸ್ಲೀಂ ಜನಾಂಗದ ಪವಿತ್ರ ಹಬ್ಬಗಳಲ್ಲಿ ಒಂದಾದ ರಂಜಾನ್ ಹಬ್ಬದಲ್ಲಿ ಒಂದು ಮಾಸದ ವರೆಗೆ ಉಪವಾಸ ಇದ್ದು, ದಿನನಿತ್ಯ ನಮಾಜ್ ಓದುವ ಮೂಲಕ ದೈನಂದಿನ ಉಪವಾಸವನ್ನು ಅಂತ್ಯ ಮಾಡುತ್ತಾರೆ. ಬೆಳಗ್ಗೆಯಿಂದಲೂ ಉಪವಾಸ ಇರುವ ಮುಸ್ಲೀಂ ಭಾಂದವರು ಸಂಜೆ ವೇಳೆಗೆ ನಮಾಜ್ ಮುಗಿಸಿ ಸಮೋಸ ಖರ್ಜೂರ, ಗೋಡಂಬಿ ದ್ರಾಕ್ಷಿ ಸೇರಿದಂತೆ ಹಣ್ಣುಗಳ ಸೇವನೆ ಮೂಲದ ಉಪವಾಸ ಮುಕ್ತಾಯ ಮಾಡುವುದು ವಾಡಿಕೆಯಾಗಿದ್ದು, ಈ ನಿಟ್ಟಿನಲ್ಲಿ ಈ ಮಾಸದಲ್ಲಿ ಖರ್ಜೂರ ಹಾಗೂ ಸಮೋಸಕ್ಕೆ ಭಾರಿ ಬೇಡಿಕೆ ಕಂಡು ಬರುತ್ತದೆ.

    ಪ್ರತೀ ವರ್ಷದಂತೆ ಈ ವರ್ಷವೂ ಮುಸ್ಲಿಂ ಬಾಂದವರಿಗೆ ಈ ಉಪವಾಸದ ರಂಜಾನ್ ಮಾಸ ಮೇ 5 ರಂದು ಗೋಚರಿಸಿದ ಚಂದ್ರನ ದರ್ಶನದೊಂದಿಗೆ ಪ್ರಾರಂಭವಾಗಿದ್ದು ಜೂನ್ 05ರಂದು ಚಂದ್ರನ ದರ್ಶನ ಮಾಡುವ ಮೂಲಕ ರಂಜಾನ್ ಹಬ್ಬದ ಆಚರಣೆಯನ್ನು ನಡೆಸುವ ಮೂಲಕ ಉಪವಾಸ ವ್ರತ ಮುಕ್ತಾಯಮಾಡುತ್ತಾರೆ.

     ಕಲ್ಪತರು ನಾಡು ತುಮಕೂರಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಗರಿಗೆದರಿದ್ದು, ಸೋಮವಾರದಂದು ನಗರದ ಎಂಜಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳು ಮುಸ್ಲೀಂ ಬಾಂಧವರಿಂದ ತುಂಬಿಕೊಂಡಿತ್ತು. ಇನ್ನು ರಂಜಾನ್ ಹಬ್ಬಕ್ಕೆ ಸ್ಪೆಷಲ್ ಎಂಬಂತೆ ಖರ್ಜೂರ್ ಮತ್ತು ಸಮೋಸಕ್ಕೆ ಬಾರಿ ಬೇಡಿಕೆಯಿದ್ದು, ಪ್ರತಿ ನಿತ್ಯ ಸಂಜೆಯಾಗುತ್ತದೆ ಮಸೀದಿ ಬಳಿ ಸಮೋಸ ಮಾರಾಟ ಮಾಡಲಾಗುತ್ತದೆ.

      ಬೆಳಗ್ಗೆ 4.30 ರಿಂದ ಸಂಜೆ 6.45ರ ವರೆಗೆ ಉಪವಾಸವಿರುವ ಮುಸ್ಲೀಂ ಬಾಂಧವರು, ಸಂಜೆ ನಮಾಜ್ ಮುಗಿಸಿ ನಂತರ ಹಣ್ಣುಗಳ ಸೇವನೆ ಜೊತೆಗೆ ಸಮೋಸಗಳನ್ನು ತಿನ್ನುವ ಮೂಲಕ ಉಪವಾಸ ಅಂತ್ಯ ಮಾಡುತ್ತಾರೆ. ಇದಕ್ಕಾಗಿ ನಗರದ ವಿವಿಧೆಡೆ ಸಮೋಸಗಳನ್ನು ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಸಮೋಸ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.

ನಗರದಲ್ಲಿ ಸಿಗದ ಖರ್ಜೂರ

      ಖರ್ಜೂರಕ್ಕೆ ಬೆಲೆ ಹೆಚ್ಚಿರುವುದರಿಂದ ಈ ಬಾರಿ ತುಮಕೂರು ನಗರದಲ್ಲಿ ಖರ್ಜೂರದ ಮಾರಾಟ ಕಡಿಮೆಯಾಗಿದೆ. ಹಬ್ಬದ ವಿಶೇಷವಾಗಿ ಮೆಕ್ಕಾಗೆ ಹೋಗಿ ಪ್ರಾರ್ಥನೆ ಸಲ್ಲಿಸುವ ಸಮಾಜದ ಬಾಂಧವರು ಅಲ್ಲಿಂದಲೇ ಖರ್ಜೂರಗಳನ್ನು ಖರೀದಿ ಮಾಡಿಕೊಂಡು ಬರುತ್ತಾರೆ. ಅಲ್ಲದೆ ಅಲ್ಲಿ ದೊರೆಯುವ ಖರ್ಜೂರಗಳಿಗೆ ತಮ್ಮ ದೇವರ ಶಕ್ತಿ ತುಂಬಿಕೊಂಡಿರುತ್ತದೆ ಎಂಬ ನಂಬಿಕೆಯೂ ಇರುತ್ತದೆಯಂತೆ. ಆದರೆ ಈ ಬಾರಿ ನಗರದಲ್ಲಿ ಖರ್ಜೂರ ಸಿಗದಂತಾದರೆ ಇನ್ನೊಂದು ಕಡೆ ಇರುವ ಕಡೆಗಳಲ್ಲಿ ಕೊಂಡುಕೊಳ್ಳುವರು ಇಲ್ಲದಂತಾಗಿದೆ.

      ನಗರದ ರೈಲ್ವೇ ನಿಲ್ದಾಣದ ಬಳಿಇರುವ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಓರ್ವ ವ್ಯಕ್ತಿ ಉತ್ತುತ್ತು, ಖರ್ಜೂರ, ಒಣದ್ರಾಕ್ಷಿ, ಗೋಡಂಬಿ ಸೇರಿದಂತೆ ಹಬ್ಬಕ್ಕೆ ಬೇಕಾದ ಎಲ್ಲವನ್ನು ಮಾರಾಟ ಮಾಡುತ್ತಿದ್ದಾನೆ. ಆದರೆ ಅಲ್ಲಿ ಕೊಂಡುಕೊಳ್ಳುವವರೇ ಇಲ್ಲದಾಗಿದೆ.

ಜಾಮೀಯಾ ಮಸೀದಿ ಬಳಿ ಸಮೋಸ ಸ್ಟಾಲ್

       ತುಮಕೂರಲ್ಲಿ ಹೆಚ್ಚಾಗಿ ಎಂಜಿ ರಸ್ತೆಯ ಮಸೀದಿ, ಬಾರ್‍ಲೇನ್ ರಸ್ತೆಯ ಮಸೀದಿ, ಜಯಪುರ, ರೈಲ್ವೆ ಸ್ಟೇಷನ್ ರಸ್ತೆ ಹಾಗೂ ಮಂಡಿಪೇಟೆ ಮಸೀದಿ ಬೀದಿಗಳಲ್ಲಿ ಹೆಚ್ಚಾಗಿ ಸಮೋಸದ ವ್ಯಾಪಾರ ಕಂಡು ಬರುತ್ತದೆ. ಬಡವರಿಗೆ ಅನುಕೂಲಕರವಾದ ಸಮೋಸ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದ್ದು, ಉಪವಾಸ ಬಿಡಲು ಕೆಲವರು ಸಮೋಸಗಳನ್ನು ಅವಲಂಬಿಸಿದ್ದಾರೆ ಎಂದರೆ ತಪ್ಪಾಗಲಾರದು.

ಗನಕ್ಕೇರಿದ ಕರ್ಜೂರದ ಬೆಲೆ

      ಇರಾನ್, ಇರಾಕ್, ಸೌದಿ ಅರೇಬಿಯಾ ಸೇರಿದಂತೆ ಇತರ ದೇಶಗಳಲ್ಲಿ ಹೆಚ್ಚಾಗಿ ಖರ್ಜೂರ ಬೆಳೆಯಲಾಗುತ್ತದೆ. ಹಾಗಾಗಿ ಅಲ್ಲಿಂದ ಕರ್ಜೂರವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ನೆರೆಯ ತಮಿಳುನಾಡು, ಗೋವಾ, ಆಂಧ್ರದಿಂದಲೂ ಖರ್ಜೂರವನ್ನು ರವಾನೆ ಮಾಡಿಕೊಳ್ಳಲಾಗುತ್ತಿದ್ದು, ಒಂದು ಕಿಲೋ ಖರ್ಜೂರ ಕನಿಷ್ಠ 200 ರೂ. ದಿಂದ ಗರಿಷ್ಠ 2,000 ರೂ. ವರೆಗೆ ಮಾರಾಟ ಮಾಡಲಾಗುತ್ತದೆ ಎಂದು ಖರ್ಜೂರ ವ್ಯಾಪಾರಿಗಳು ಹೇಳುತ್ತಾರೆ.

ಔಷಧಿ ಗುಣಗಳುಳ್ಳ ಖರ್ಜೂರ

       ರಂಜಾನ್ ಹಬ್ಬದಲ್ಲಿ ಮುಸ್ಲಿಂಮರು ಉಪವಾಸ ಇರುವುದರಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಅವಕಾಶಗಳಿದ್ದು, ಖರ್ಜೂರ ತಿನ್ನುವುದರ ಮೂಲಕ ಆರೋಗ್ಯರಕ್ಷಣೆ ಮಾಡಿಕೊಳ್ಳುತ್ತಾರೆ. ಖರ್ಜೂರದಲ್ಲಿ ಮಹಮ್ಮದರ ಆಶೀರ್ವಾದವಿರುತ್ತದೆ ಎಂಬುದು ಮುಸ್ಲಿಂಮರ ನಂಬಿಕೆಯಾಗಿದ್ದು, ಕೇವಲ ಹಸಿವು ನೀಗಿಸುವುದರ ಜೊತೆಗೆ ಅದರಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಜೀರ್ಣಕ್ರಿಯೆ, ಹೃದಯಾಘಾತ, ನಿಶ್ಯಕ್ತಿ, ಚರ್ಮರೋಗ, ರಕ್ತಹೀನತೆ, ರಕ್ತಶುದ್ಧಿ, ಕೂದಲು ಉದುರುವಿಕೆಗೆ ತಡೆಯುಡ್ಡುತ್ತದೆ. 


    ಖರ್ಜೂರದಲ್ಲಿ ಕಾರ್ಬೋ ಹೈಡ್ರೆಟ್, ಪ್ರೋಟೀನ್ ಅಂಶ, ವಿಟಮಿನ್, ಐರನ್ ಪ್ರಮಾಣ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಖರ್ಜೂರ ಸೇವಿಸುವುದರಿಂದ ಹಸಿವು ಉಂಟಾಗುವುದಿಲ್ಲ. ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ. ಯಾವುದೇ ಆದರೂ ಮಿತಿಗಿಂತ ಹೆಚ್ಚಾಗಿ ಸೇವಿಸಿದರೆ ಅಪಾಯ ಕಾಡುತ್ತದೆ ಎಂಬಂತೆ ಖರ್ಜೂರಿಂದ ಕೂಡ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿವೆ. ಹಾಗಾಗಿ ಉಪವಾಸ ಮಾಡುವವರು ಕೇವಲ 4 ರಿಂದ 5 ಅನ್ನುಮಾತ್ರ ಸೇವನೆ ಮಾಡುತ್ತಾರೆ.

ಡಾ.ವೀರಭದ್ರಯ್ಯ, ಜಿಲ್ಲಾ ಶಸಚಿಕಿತ್ಸಕ


      ರಂಜಾನ್ ಹಬ್ಬದಲ್ಲಿ ಒಂದು ತಿಂಗಳ ಕಾಲ ಉಪವಾಸ ಮಾಡುವುದರಿಂದ ಆರೋಗ್ಯ ದೃಷ್ಠಿಯಿಂದ ಉಪವಾಸದ ನಂತರ ಏಕಾಏಕಿ ಆಹಾರ ಸೇವಿಸಿದರೆ ಸಣ್ಣಪುಟ್ಟ ತೊಂದರೆಗಳು ಎದುರಾಗುತ್ತವೆ ಹಾಗಾಗಿ ಖರ್ಜೂರ, ಸಮೋಸ ದಂತಹ ಲಘು ಉಪಹಾರ ಸೇವನೆ ಮಾಡುತ್ತಾರೆ. ಇದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಂತಹ ಆಚರಣೆಯಾಗಿದ್ದು, ಇಂದಿಗೂ ಅದನ್ನು ಮುಂದುವರೆಸಲಾಗುತ್ತಿದೆ. ಉಪವಾಸ ಮಾಡುವುದರಿಂದ ಆರೋಗ್ಯ ಅಭಿವೃದ್ಧಿಯಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಕಾರಣವೂ ಇದೆ.

ಈಚನೂರು ಇಸ್ಮಾಯಿಲ್, ಸಾಮಾಜಿಕ ಚಿಂತಕರು


ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link