ಹುಳಿಯಾರು
ಗಿಡಗಳನ್ನು ನೆಟ್ಟಲ್ಲಿ ಮಾತ್ರವೇ ನಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸದೆ ನೆಟ್ಟ ಬಳಿಕವೂ ಅದರ ನಿರ್ವಹಣೆಯತ್ತ ಗಮನಹರಿಸಬೇಕು ಎಂದು ಬುಕ್ಕಾಪಟ್ಟಣ ಅರಣ್ಯವಲಯದ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದರು.
ಹುಳಿಯಾರಿನ ಜಾಮಿಯ, ಮದೀನಾ, ನೂರಾನಿ ಮಸೀದಿಯ ಸುನ್ನಿ ಖಬರಸ್ಥಾನದಲ್ಲಿ ರಂಜಾನ್ ಹಾಗೂ ಪರಿಸರ ದಿನಾಚರಣೆಯ ಅಂಗವಾಗಿ ಬುಕ್ಕಾಪಟ್ಟಣ ವಲಯ ಅರಣ್ಯ ಇಲಾಖೆಯ ಸಹಯೋಗದೊಂದಿಗೆ 450 ವಿವಿಧ ಜಾತಿಯ ಕಾಡು ಗಿಡಗಳನ್ನು ನೆಡುವುದರೊಂದಿಗೆ ವಿಶ್ವ ಪರಿಸರ ದಿನ ಆಚರಿಸಿ ಅವರು ಮಾತನಾಡಿದರು.
ಹತ್ತಾರು ಬಗೆಯ ಕಾಡು ಜಾತಿಯ ಗಿಡಗಳನ್ನು ನೆಡಲಾಗಿದ್ದು ಸದ್ಯ ಮಳೆ ಕೂಡ ಉತ್ತಮವಾಗಿರುವುದರಿಂದ ಸಸಿಗಳು ಹೆಚ್ಚಿನ ಆರೈಕೆ ಇಲ್ಲದೆ ಬೆಳೆಯುತ್ತದೆ ಎಂದರು.
ಬದಲಾಗುತ್ತಿರುವ ಜೀವನ ಶೈಲಿ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು,ಪರಿಸರವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದರಲ್ಲದೆ ಗಿಡ ಕಾಪಾಡಿಕೊಳ್ಳುವುದರ ಬಗ್ಗೆ ತಿಳಿಹೇಳಿ ಪರಿಸರ ಜಾಗೃತಿ ಮೂಡಿಸಿದರು.
ಈ ವೇಳೆ ಉಪ ವಲಯ ಅರಣ್ಯಾಧಿಕಾರಿ ಸಿದ್ದಲಿಂಗಮೂರ್ತಿ, ಅರಣ್ಯ ರಕ್ಷಕ ದಿಲೀಪ್, ಆರೀಫ್ ಉಲ್ಲಾ ಖಾನ್, ಹಾರೂನ್ ಶರೀಫ್, ಮಹಮ್ಮದ್ ಸಲೀಂ, ಮೆಹಬೂಬ್ ಆಲಂ, ಮಹಮ್ಮದ್ ಕದೀರ್, ಇಸ್ಮಾಯಿಲ್, ಮಹಮ್ಮದ್ ಗೌಸ್, ರಫೀಕ್ ಅಹಮದ್, ಸೈಯದ್ ಆಸಿಫ್, ಮಹಮ್ಮದ್ ಇಕ್ಬಾಲ್, ಮಹಮ್ಮದ್ ಅಲಿ ಮೊದಲಾದವರಿದ್ದರು.