ರಂಗ ಕಲೆಯನ್ನು ಶುದ್ಧವಾಗಿ ಉಳಿಸಿಕೊಳ್ಳಿ

ದಾವಣಗೆರೆ:

           ಹಿಂದಿನಂತೆ ರಂಗ ಕಲೆಯನ್ನು ಶುದ್ಧವಾಗಿ ಉಳಿಸಿಕೊಳ್ಳುವತ್ತ ಕಂಪನಿಗಳು ಚಿತ್ತ ಹರಿಸಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು.

        ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಸಂಜೆ ರಾಜ್ಯ ರಂಗಭೂಮಿ ಕಲಾವಿದರ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ನಾಟಕೋತ್ಸವ, ಸುಗಮ ಸಂಗೀತ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

         ಹಿಂದಿನ ನಾಟಕಗಳಲ್ಲಿ ಒಳ್ಳೆಯ ಸಂಭಾಷಣೆ, ಸಾಹಿತ್ಯ ಇರುತ್ತಿತ್ತು. ಇತ್ತೀಚೆಗೆ ಜನರನ್ನು ಸೆಳೆಯುವ ದೃಷ್ಟಿಯಿಂದ ದ್ವಂದ್ವಾರ್ಥ ಸಂಭಾಷಣೆ, ಅಬ್ಬರದ ಸಂಗೀತ ಪ್ರಾಧಾನ್ಯತೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಜನರು ಕುಟುಂಬಸಮೇತ ನಾಟಕ ನೋಡಲು ಬರುವುದು ಕಡಿಮೆಯಾಗುತ್ತಿದೆ. ಹಿಂದಿನಂತೆ ರಂಗ ಕಲೆಯನ್ನು ಶುದ್ಧವಾಗಿ ಉಳಿಸಿಕೊಳ್ಳುವತ್ತಲೂ ಕಂಪನಿಗಳು ಗಮನ ಹರಿಸಬೇಕೆಂದು ಹೇಳಿದರು.
ದೃಶ್ಯ ಮಾಧ್ಯಮಗಳಲ್ಲಿ ಧಾರವಾಹಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದೆ. ಹಾಸ್ಯ ಪ್ರಸ್ತುತಿ, ರಿಯಾಲಿಟಿ ಶೋಗಳು ಜನಪ್ರಿಯವಾಗುತ್ತಿವೆ. ಅದೇ ರೀತಿ ರಂಗಭೂಮಿ ಕಲಾವಿದರೂ ಮಹತ್ವ ಕೊಡುವ ಕೆಲಸವಾಗಬೇಕು. ಕಲಾವಿದರು ಉಳಿದರೆ ಮಾತ್ರ ರಂಗಭೂಮಿ ಉಳಿಯಲು ಸಾಧ್ಯ ಎಂದ ಅವರು, ಹಿತ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ನಗರದಲ್ಲಿ ಸಾಹಿತ್ಯ ಭವನ ನಿರ್ಮಾಣವಾಗಿದೆ. ಆದರೆ ನಾಟಕ ಪ್ರದರ್ಶಿಸಲು ಸೂಕ್ತ ರಂಗ ಮಂದಿರ ವ್ಯವಸ್ಥೆ ಇಲ್ಲ. ನಗರದಲ್ಲಿ ಸುಸಜ್ಜಿತವಾದ ರಂಗ ಭವನ ನಿರ್ಮಾಣ ಬಹುವರ್ಷಗಳ ಬೇಡಿಕೆಯಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದರು.

          ಉತ್ತರ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಟಿವಿ, ಸಿನಿಮಾಗಳ ಹಾವಳಿಯಿಂದ ರಂಗಭೂಮಿಯ ಮೇಲೆ ಆಸಕ್ತಿ ಕಡಿಮೆಯಾಗಿದೆ. ಮನೆಯಲ್ಲೇ ಮನರಂಜನೆ ಸಿಗುತ್ತಿರುವುದರಿಂದ ನಾಟಕಗಳ ಬಗ್ಗೆ ಜನರು ಆಸಕ್ತಿ ತೋರಿಸುತ್ತಿಲ್ಲ. ಸರ್ಕಾರ ರಂಗ ಕಲೆಗೆ ಸಾಕಷ್ಟು ಉತ್ತೇಜನ ನೀಡುತ್ತಿದ್ದರೂ, ಪ್ರೇಕ್ಷಕರ ಕೊರತೆ ಕಂಡುಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

           ಹಿರಿಯ ಪತ್ರಕರ್ತ ಬಸವರಾಜ ದೊಡ್ಡಮನಿ ಮಾತನಾಡಿ, ಪ್ರಸ್ತುತ ರಂಗಭೂಮಿ ಕಲಾವಿದರು ಸರ್ಕಾರವನ್ನು ಅವಲಂಬಿಸುವಂತಾಗಿದೆ. ಇದಕ್ಕೆ ತಕ್ಕಂತೆ ಸಮಾಜ ಕೂಡ ಕಲಾವಿದರಿಗೆ ಸ್ಪಂದಿಸಬೇಕು. ಹೊನ್ನಾವರ ಭಾಗದಲ್ಲಿ ಯಕ್ಷಗಾನ ಪ್ರಸಂಗ ಆಯೋಜಿಸುವುದಾಗಿ ಭಕ್ತರು ದೇವರಿಗೆ ಹರಕೆ ಹೊರುತ್ತಾರೆ. ಅದೇ ರೀತಿ ಶುಭ ಸಮಾರಂಭ, ಹರಕೆ ತೀರಿಸುವ ಸಂದರ್ಭದಲ್ಲಿ ನಾಟಕ ಪ್ರದರ್ಶನ ಏರ್ಪಡಿಸುವ ಪದ್ಧತಿ ಚಾಲ್ತಿಗೆ ಬರಬೇಕು ಎಮದರು.

         ಒಕ್ಕೂಟದ ಅಧ್ಯಕ್ಷ ಕೆ.ವೀರಯ್ಯಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಲಾವಿದ ಕೊಡಗನೂರು ಜಯಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ಮಾರುತೇಶ ಮಾಂಡ್ರೆ ರಚನೆಯ ತವರುಮನೆ ನಾಟಕ ಪ್ರದರ್ಶನಗೊಂಡಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap