ದಾವಣಗೆರೆ:
ನಗರದಲ್ಲಿ ಅವೈಜ್ಞಾನಿಕವಾಗಿ ರಂಗ ಮಂದಿರ ನಿರ್ಮಾಣ ಮಾಡುತ್ತಿದ್ದು, ಇದು ರಂಗ ಪ್ರದರ್ಶನಕ್ಕೆ ಯೋಗ್ಯವಿಲ್ಲ ಎಂದು ರಂಗಕರ್ಮಿ ಸಿ.ಬಸವಲಿಂಗಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ವಿದ್ಯಾನಗರದ ಉದ್ಯಾನವನದ ಕಾವ್ಯ ಮಂಟಪಲ್ಲಿ ಸಾಣೇಹಳ್ಳಿ ಶಿವಕುಮಾರ ಕಲಾಸಂಘ, ಗ್ರಂಥ ಸರಸ್ವತಿ ಪ್ರತಿಭಾರಂಗದ ಸಂಯುಕ್ತಾಶ್ರಯದಲ್ಲಿ ಶಿವಸಂಚಾರ ನಾಟಕೋತ್ಸವದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಂಗಮಂದಿರಕ್ಕೆ ತನ್ನದೇ ಆದ ಸೂಕ್ತ ವಾತಾವರಣ ಸೃಷ್ಟಿಸುವ ಅವಶ್ಯಕತೆ ಇದೆ. ಆದರೆ, ಈಗಾಗಲೇ ನಿರ್ಮಾಣದ ಹಂತದಲ್ಲಿರುವ ರಂಗಮಂದಿರ ನಯಾ ಪೈಸೆಗೂ ಉಪಯುಕ್ತವಾಗಿಲ್ಲ. ಇದೊಂದು ಶಾದಿ ಮಹಲ್‍ನಂತಾಗಿದೆ ಎಂದು ಕಿಡಿಕಾರಿದರು.
ಈ ರಂಗ ಮಂದಿರವು ರಂಗಭೂಮಿ ಕಲೆಗಳ ಪ್ರದರ್ಶನಕ್ಕೆ ಯೋಗ್ಯವಾಗಿಲ್ಲ. ಹೀಗಾಗಿ ಸುಸಜ್ಜಿತ ರಂಗಮಂದಿರ ನಿರ್ಮಾಣ ಮಾಡಬೇಕಾದ ಅವಶ್ಯಕತೆ ಇದ್ದು, ಸಂಸದರ ಅನುದಾನದ 25 ಕೋಟಿಗಳಲ್ಲಿ 5 ಕೋಟಿ ಅನುದಾನವನ್ನಾದರೂ ನೀಡುವಂತಾಗಬೇಕು. ಅಲ್ಲದೇ ದಾನಿಗಳು ಸಹ ಸಹಕಾರ ನೀಡಬೇಕೆಂದು ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸುಮಾರು 260 ಕೋಟಿ ರೂ. ಅನುದಾನ ಬರಲಿದ್ದು, ರಾಜ್ಯದಲ್ಲಿ ಬೇರೆ ಯಾವ ಇಲಾಖೆಗಳಿಗೂ ಇಷ್ಟು ಅನುದಾನ ಬಂದಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಾಟಕಕಾರರಿಗಾಗಲೀ, ಸಾಹಿತಿಗಳಿಗಾಗಲೀ ಹೆಚ್ಚಿನ ಆದ್ಯತೆ ಇದೆ. ಆದರೆ, ಕಲೆಗಳ ಪ್ರದರ್ಶನಕ್ಕೆ ಉತ್ತಮವಾದ ವೇದಿಕೆ ಕಲ್ಪಿಸುವುದನ್ನು ಮೊದಲ ಆದ್ಯತೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕುಲಕರ್ಣಿ ಜಿ. ಅಂಬಾದಾಸ್ ಮಾತನಾಡಿ, ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳು ಸಮಾಜಕ್ಕೆ ಒಳ್ಳೇ ಸಂದೇಶಗಳನ್ನು ನೀಡಲಿವೆ. ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ, ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಗುಗಳ ನಿರ್ಮೂಲನೆ ಕುರಿತ ನಾಟಕಗಳು ಸಹ ಪ್ರದರ್ಶನಗೊಂಡು ಜನರಲ್ಲಿ ಉತ್ತಮ ಸಂದೇಶ ಬಿತ್ತುವಂತಾಗಬೇಕು ಎಂದರು.ಹಿರಿಯ ಸಾಹಿತಿ ಬಾಮ ಬಸವರಾಜಯ್ಯ ಮಾತನಾಡಿದರು. ಇದೇ ವೇಳೆ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ರಚಿಸಿದ ಗುರುಮಾತೆ ಅಕ್ಕನಾಗಲಾಂಬಿಕೆ ನಾಟಕ ಪ್ರದರ್ಶನ ಜನಮನಸೂರೆಗೊಂಡಿತು. ಗ್ರಂಥ ಸರಸ್ವತಿ ಪ್ರತಿಭಾರಂಗದ ಅಧ್ಯಕ್ಷ ಶಿವಕುಮಾರಸ್ವಾಮಿ ಕುರ್ಕಿ ಕಾರ್ಯಕ್ರಮ ನಿರೂಪಿಸಿದರು.