ಜಗಳೂರು:
ಪಟ್ಟಣದ ಪ.ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ಮೆಟ್ರಿಕ್ ನಂತರದ ಪ.ವರ್ಗಗಳ ವಿದ್ಯಾರ್ಥಿನೀಯರ ನಿಲಯದಲ್ಲಿ ರಂಗೋಲಿ ಬಿಡಿಸುವ ಮೂಲಕ ವಿಶಿಷ್ಟವಾಗಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಹತ್ತಕ್ಕೂ ಹೆಚ್ಚು ರಂಗೋಲಿ ಚಿತ್ತಾರದ ಮದ್ಯೆ ಕಡ್ಡಾಯ ಮತದಾನ ಹಾಗೂ ಮತದಾನದ ಮಹತ್ವವನ್ನು ಸಾರುವಂತಹ ಘೋಷವಾಕ್ಯಗಳನ್ನು ಬರೆಯಲಾಗಿತ್ತು.
ತಾಲೂಕು ಪ.ವರ್ಗಗಳ ಇಲಾಖೆಯ ತಾಲೂಕು ಅಧಿಕಾರಿ ಗಂಗಪ್ಪ ಮಾತನಾಡಿ,ದೇಶದಲ್ಲಿನ ಪ್ರತಿಯೊಬ್ಬ ಮತದಾರರು ಇಂದು ಮತದಾನದ ಮಹತ್ವವನ್ನು ತಿಳಿಯುವ ಮೂಲಕ ಕಡ್ಡಾಯ ಮತದಾನವನ್ನು ಚಲಾಯಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಂದ ರಂಗೋಲಿ ಚಿತ್ತಾರ ಹಾಕುವ ಮೂಲಕ ವಿದ್ಯಾರ್ಥಿನಿಯರಿಗೆ ಮತದಾನದ ಅರಿವನ್ನು ಮೂಡಿಸಲು ಹಾಗೂ ಪೋಷಕರಿಗೆ ತಮ್ಮ ಅಮೂಲ್ಯ ಮತದಿಂದ ವಂಚಿತರಾಗದೆ ತಮ್ಮ ಹಕ್ಕನ್ನು ಚಲಾಯಿಸುವಂತೆ ಪ್ರೆರೇಪಿಸಲು ಇಂತಹ ವಿಶಿಷ್ಟ ಜಾಗೃತಿಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಿಲಯಪಾಲಕಿ ಮಂಗಳಗೌರಿ ಮಾತನಾಡಿ, ಪರಿಶಿಷ್ಟ ವರ್ಗದ ಜನರು ಮೂಲತಃ ಬುಡಕಟ್ಟು ಸಂಸ್ಕøತಿಯುಳ್ಳವರಾಗಿದ್ದು ಇಂದು ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಬದುಕುತ್ತಿದ್ದಾರೆ ಇಂತಹ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿದೆಸೆಯಿಂದ ಮತದಾನ ಹಕ್ಕು ಹಾಗೂ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ತಿಳಿಸುವುದರ ಮೂಲಕ ಉತ್ತಮ ಸಮಸಮಾಜ ನಿರ್ಮಾಣಕ್ಕೆ ಪ್ರೋತ್ಸಾಹಿಸಲು ಇಂತಹ ಜಾಗೃತಿ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಇದರ ಮಹತ್ವ ತಿಳಿದು ವಿದ್ಯಾವಂತರಾದ ತಾವುಗಳು ಸಂವಿಧಾನಬದ್ದ ಮತದಾನದ ಹಕ್ಕನ್ನು ಚಲಾಯಿಸಲು ತಮ್ಮ ನೆರೆಹೊರೆಯವರಿಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ.ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಶಿವಣ್ಣ, ದಲಿತ ಸಂಘರ್ಷಸಮಿತಿ ತಾಲೂಕು ಅಧ್ಯಕ್ಷ ಸತೀಶ್ ಮಲೆಮಾಚಿಕೆರೆ, ಗ್ರಾ.ಪಂ ಮಾಜಿ ಉಪಾದ್ಯಕ್ಷ ಮರೇನಹಳ್ಳಿ ನಜೀರ್ ಅಹ್ಮದ್, ಎಐಎಸ್‍ಎಫ್ ನ ಜಿಲ್ಲಾಧ್ಯಕ್ಷ ಮಾದಿಹಳ್ಳಿ ಮಂಜುನಾಥ್, ಸಿಬ್ಬಂದಿಗಳಾದ ನಾಗರತ್ನಮ್ಮ ಉಮೇಶ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.