ಚಿತ್ರದುರ್ಗ:
ಚಳ್ಳಕೆರೆಯಿಂದ ಹದಿಮೂರು ಕಿ.ಮೀ.ದೂರದಲ್ಲಿರುವ ಏಳು ಹಳ್ಳಿಗಳಿಗೆ ನೀರು ಪೂರೈಸುವ ರಾಣಿಕೆರೆ ಪೂರಕ ನಾಲೆಯ ಕಾಮಗಾರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಆಪಾದಿಸಿದರು.
ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು 24 ಅಡಿ ನೀರು ಸಂಗ್ರಹಿಸಿಕೊಳ್ಳುವ ಸಾಮಥ್ರ್ಯವಿರುವ ರಾಣಿಕೆರೆಗೆ ಸಿಡ್ಲಯ್ಯನಕೋಟೆಯಿಂದ 39 ಕಿ.ಮೀ.ಫೀಡರ್‍ಚಾನಲ್‍ಗೆ ನಲವತ್ತು ವರ್ಷಗಳ ಹಿಂದೆ ಬಿ.ಎಲ್.ಗೌಡ ಚಾಲನೆ ನೀಡಿದ್ದರು. ಆಗಲೂ ನೀರು ಹರಿಯಲಿಲ್ಲ. ತಹಶೀಲ್ದಾರ್, ಜಿಲ್ಲಾಧಿಕಾರಿ, ಸಣ್ಣ ನೀರಾವರಿ ಇಲಾಖೆಗೆ ಸಾಕಷ್ಟು ಬಾರಿ ಮನವಿ ಕೊಟ್ಟಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. 21 ಕೋಟಿ 75 ಲಕ್ಷ ರೂ.ಮಂಜೂರಾಗಿದೆ. ಇದರಲ್ಲಿ ಕೇವಲ ಎರಡರಿಂದ ಮೂರು ಕೋಟಿ ರೂ.ಗಳ ಕೆಲಸವಾಗಿರಬಹುದಷ್ಟೆ. ಅವ್ಯವಹಾರನ್ನು ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಫೀಡರ್ ಚಾನಲ್‍ನಲ್ಲಿ 2 ಕಿ.ಮೀ.ನಷ್ಟು ತೇಪೆ ಹಾಕಿರುವುದನ್ನು ಬಿಟ್ಟರೆ ಉಳಿದಂತೆ ಯಾವ ಕಾಮಗಾರಿಯೂ ಆಗಿಲ್ಲ.
ಮೂಲ ಕಾಮಗಾರಿಯೇ ಇನ್ನು ಕೆಲವೊಂದು ಪೂರ್ಣಗೊಂಡಿಲ್ಲ. ಅಲ್ಪಸ್ವಲ್ಪ ಕಾಮಗಾರಿಯೂ ಕಳಪೆಯಿಂದ ಕೂಡಿದೆ ಎಂದು ದೂರಿದರು.ಮುಖ್ಯವಾಗಿ ನಾಲೆಯಲ್ಲಿ ಪುನಶ್ಚೇತನ ಹಾಗೂ ಆಧುನೀಕರಣಕ್ಕಾಗಿ 25 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ ಕಾಮಗಾರಿಯನ್ನು ಕನ್‍ಸ್ಟ್ತಕ್ಷನ್ ಪ್ರೈವೆಟ್ ಲಿಮಿಟೆಡ್ ಬಳ್ಳಾರಿಗೆ ನೀಡಲಾಗಿದೆ. 28.5.2015 ರಂದು 11 ತಿಂಗಳ ಅವಧಿಯೊಳಗೆ ಪೂರ್ಣಗೊಳಿಸುವ ಷರತ್ತಿಗೆ ಒಳಪಟ್ಟು ಕಾಮಗಾರಿ ನೀಡಲಾಗಿದೆ. 21.75 ಕೋಟಿ ಜೊತೆಗೆ ಹೆಚ್ಚುವರಿಯಾಗಿ 7.32 ಕೋಟಿಯನ್ನು ಖರ್ಚು ಮಾಡಲಾಗಿದೆ. ಗುತ್ತಿಗೆದಾರರು ಮಾಡಿರುವ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿದರು.
ಪುನರ್ ನಿರ್ಮಿಸಿದ ಕಟ್ಟಡಗಳ ಗುಣಮಟ್ಟ ಕಳಪೆಯಾಗಿದೆ. ವಿಂಗ್‍ವಾಲ್ಸ್ ತೀರಾ ಕಳಪೆಯಾಗಿದ್ದು ಕೈಯಿಂದಲೇ ಕಾಂಕ್ರೀಟ್ ಕೀಳಬಹುದಾಗಿದೆ. ಕಾಮಗಾರಿಗಳಿಗೆ ಬಳಕೆ ಮಾಡಿರುವ ವಸ್ತುಗಳ ಪರಿಮಾಣವು ಅಂದಾಜುಪಟ್ಟಿ ಮತ್ತು ಅಳತೆಗಳಲ್ಲಿ ಒಂದೇ ತೆರನಾಗಿರುತ್ತದೆ. ಇದು ಸಾಧ್ಯವೇ? ಇಷ್ಟೊಂದು ಕೋಟಿಗಳ ಹಣ ಖರ್ಚು ಮಾಡಿದರೂ ಜನರಿಗೆ ಉಪಯೋಗವಾಗುತ್ತಿಲ್ಲ. ಅಲ್ಲದೆ ಫಲವತ್ತಾದ ಮಣ್ಣನ್ನು ತೆಗೆದು ರೈತರ ಹೊಲಗಳಿಗೆ ಹಾಕಬೇಕಾಗಿತ್ತು. ಇಲ್ಲಿ ಸಾಕಷ್ಟು ಮಣ್ಣು ತೆಗೆಯಲಾಗಿದ್ದು ಎಲ್ಲಿಗೆ ಸಾಗಾಣೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ನಾಲೆಯ ನಿರ್ಮಾಣ, ನಿರ್ವಹಣೆ, ಪುನಶ್ಚೇತನ, ಆಧುನೀಕರಣ ಕಾಮಗಾರಿಗಳು ಕಳಪೆಯಾಗಿದ್ದು ತನಿಖೆ ನಡೆಸುವಂತೆ ದಾಖಲೆ ಸಮೇತ ಭ್ರಷ್ಟಾಷಾರ ನಿಗ್ರಹ ದಳಕ್ಕೆ ಒಂದೆರೆಡು ದಿನದಲ್ಲಿ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ನಿವೃತ್ತ ಇಂಜಿನಿಯರ್ ದೊಡ್ಡಯ್ಯ ಮಾತನಾಡುತ್ತ ಹತ್ತು ಸಾವಿರದ ಎಂಟುನೂರು ಮರದ ಮೋಟುಗಳನ್ನು ತೆಗೆಯುವುದಕ್ಕಾಗಿ ಇಪ್ಪತ್ತು ಲಕ್ಷ 84 ಸಾವಿರ ರೂ.ಗಳ ಖರ್ಚು ಮಾಡಲಾಗಿದೆ. ಹೂಳು ತೆಗೆಯುವುದಕ್ಕಾಗಿ 1.76 ಕೋಟಿ ರೂ.ಖರ್ಚು ಮಾಡಿರುವುದಾಗಿ ಲೆಕ್ಕ ತೋರಿಸುತ್ತಿದ್ದಾರೆ. ಮರದ ಮೋಟುಗಳನ್ನು ಹರಾಜು ಹಾಕಿದರೋ ಇಲ್ಲವೋ ಗೊತ್ತಿಲ್ಲ. ಮೋಟುಗಳು ಕಾಣೆಯಾಗಿವೆ. ಒಟ್ಟಾರೆ ರಾಣಿಕೆರೆ ಪೂರಕ ನಾಲೆಯ ಕಾಮಗಾರಿಯಲ್ಲಿ ನಡೆದಿರುವ ಹಗರಣವನ್ನು ಬಯಳಿಗೆಳೆಯುವಲ್ಲಿ ಸರ್ಕಾರ ಗಮನ ಕೊಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡರುಗಳಾದ ಶ್ರೀಕಂಠಮೂರ್ತಿ, ಆರ್.ಚಂದ್ರಪ್ಪ, ಬಸವರಾಜಪ್ಪ, ಪ್ರವೀಣ್‍ಗೌಡ, ಯರ್ರಿಸ್ವಾಮಿ, ರಾಜಣ್ಣ ಇನ್ನು ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ