ದಾವಣಗೆರೆ
2020ರ ಜನವರಿ 1ಕ್ಕೆ 18 ವರ್ಷ ತುಂಬಿರುವ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಜ.6ರಿಂದ ಮೂರು ದಿನಗಳ ವರೆಗೆ ಹಮ್ಮಿಕೊಂಡಿರುವ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಅಧಿಕಾರಿಗಳು ಅತ್ಯಂತ ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ಅನುಷ್ಟಾನದ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2020ರ ಜನವರಿ 1ಕ್ಕೆ 18 ವರ್ಷಗಳನ್ನು ಪೂರೈಸಿರುವ ಯುವ ಮತದಾರರು ನಮೂನೆ-6 ಅನ್ನು ಅಂತರ್ಜಾಲದಲ್ಲಿ ಅಥವಾ ನೇರವಾಗಿ ಭರ್ತಿ ಮಾಡಿ ಪೂರಕ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ ಮತಗಟ್ಟೆ ಅಧಿಕಾರಿ(ಬಿಎಲ್‍ಓ)ಗಳಿಗೆ ನೀಡುವ ಮೂಲಕ ನೋಂದಾಯಿಸಿಕೊಳ್ಳಲು ಎಲ್ಲಾ ಕಾಲೇಜುಗಳ, ವಿಶ್ವವಿದ್ಯಾನಿಲಯದ ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಜ.6ರಂದು ಪ್ರಭಾತ್ ಪೇರಿ:
ಜಿ.ಪಂ ಸಿಇಓ ಅಧ್ಯಕ್ಷತೆಯ ಸ್ವೀಪ್ ಸಮಿತಿ, ಪಾಲಿಕೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳು, ಎಲ್ಲಾ ಪ್ರೌಢಶಾಲೆಗಳು ಹಾಗೂ ಕಾಲೇಜುಗಳ ವಿದ್ಯಾರ್ಥಿಗಳನ್ನೊಂಡು ಜ.6ರಂದು ಬೆಳಿಗ್ಗೆ 9.30ಕ್ಕೆ ನಗರದ ಮುಖ್ಯ ಭಾಗದಲ್ಲಿ ಪ್ರಭಾತ್ ಪೇರಿ ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.
ಆಯೋಗವು ನಿಗದಿಪಡಿಸಿದ ಲೋಗೊ ಎಂಬ ಘೋಷಣೆ ಹೊಂದಿದ ಬ್ಯಾಡ್ಜ್‍ನ್ನು ಯುವ ಮತದಾರರಿಗೆ ವಿತರಿಸಬೇಕು. ಹಾಗೂ ಆಯೋಗ ತಯಾರಿಸಿರುವ ಚುನಾವಣಾ ಚಲನ ಚಿತ್ರಗಳನ್ನು(ನೋಂದಣಿ ಒಳಗೊಳ್ಳುವ) ಪ್ರದರ್ಶಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜ.25ಕ್ಕೆ ಚುನಾವಣಾ ದಿನ:
ಹೊಸದಾಗಿ ನೋಂದಾಯಿಸಿದ ಮತದಾರರಿಗೆ ಜ.25 ರಂದು ಏರ್ಪಡಿಸುವ ರಾಷ್ಟ್ರೀಯ ಚುನಾವಣಾ ದಿನದಂದು ಎಪಿಕ್ ಕಾರ್ಡ್‍ನ್ನು ವಿತರಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳ ವತಿಯಿಂದ ಹಾಗೂ ಸ್ವೀಪ್ ಸಮಿತಿ ಮೂಲಕ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಿ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಬೇಕು.
ಪ್ರತಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ತಾಂತ್ರಿಕ ಶಿಕ್ಷಣ ಕಾಲೇಜು ಹಾಗೂ ಇತರೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಸ್ವೀಪ್ ಚಟುವಟಿಕೆಯ ಗುರಿ ನಿಗದಿಪಡಿಸಿ, ಈ ಗುರಿ ಸಾಧಿಸುವ ಬಗ್ಗೆ ಅಂಕಿ ಅಂಶಗಳನ್ನು ನಿಗದಿತ ನಮೂನೆಯಲ್ಲಿ ಜಿ.ಪಂ ಸಿಇಓ ಇವರಿಗೆ ವರದಿ ಮಾಡಿಕೊಳ್ಳಬೇಕು ಎಂದರು.
ಜಿ.ಪಂ ಸಿಇಓ ಇವರ ಅಧ್ಯಕ್ಷತೆಯ ಸ್ವೀಪ್ ಸಮಿತಿ ಮೂಲಕ ನಗರದ ವಿವಿಧ ಶಾಲಾ ಕಾಲೇಜು, ವಿಶ್ವವಿದ್ಯಾನಿಲಯ, ನರ್ಸಿಂಗ್ ಶಾಲೆಗಳು, ಪಾಲಿಟೆಕ್ನಿಕ್ ಸೇರಿದಂತೆ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸಬೇಕು. ಸಿಇಓ, ಎಡಿಸಿ ಮತ್ತು ಎಸಿ ಜೊತೆಗೂಡಿ ರಚನಾತ್ಮಕವಾಗಿ ಸ್ವೀಪ್ ಕಾರ್ಯಗಳನ್ನು ಕೈಗೊಳ್ಳಬೇಕು.
ಡಿಡಿಪಿಐ ಮತ್ತು ಡಿಡಿಪಿಯು ಶೈಕ್ಷಣಿಕ ಸಂಸ್ಥೆಗಳಲ್ಲಿ ಅರ್ಹ ಯುವ ಮತದಾರರನ್ನು ಸೆಳೆಯುವಂತಹ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ತಾಲ್ಲೂಕುಗಳಲ್ಲಿರುವ ಚುನಾವಣಾ ಜಾಗೃತಿ ಕ್ಲಬ್‍ಗಳನ್ನು ತಹಶೀಲ್ದಾರರು ಚುರುಕುಗೊಳಿಸಿ ಬಿಎಲ್‍ಓಗಳ ಮುಖಾಂತರ ತಮ್ಮ ವ್ಯಾಪ್ತಿಯಲ್ಲಿನ ಶಾಲಾ ಕಾಲೇಜುಗಳಲ್ಲಿ ಅರ್ಹ ಯುವ ಮತದಾರರು ಹಾಗೂ ಭವಿಷ್ಯದ ಮತದಾರರನ್ನು ಕೇಂದ್ರೀಕರಿಸಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ ಜಿ ಮಾತನಾಡಿ, ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಚುನಾವಣಾ ತಹಶೀಲ್ದಾರ್ ಪ್ರಸಾದ್, ಜಿ.ಪಂ.ನ ಪಿಎಇಓ ಶಾರದ, ತಾಲ್ಲೂಕುಗಳ ತಹಶೀಲ್ದಾರರು, ನಗರದ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಬಿಎಲ್‍ಓಗಳು, ಇತರೆ ಸಿಬ್ಬಂದಿಗಳು ಹಾಜರಿದ್ದರು.








