ಅಪರೂಪದ ಶ್ವೇತ ನಾಗ ಸೆರೆ…!!!

ತುಮಕೂರು
       
          ಇತ್ತೀಚೆಗೆ ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಹಾವುಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಅದರಿಂದ ಜನರು ಭಯಭೀತರಾಗುತ್ತಿದ್ದಾರೆ. ಹಾವುಗಳು ವಿಷಪೂರಿತವಾಗಿದ್ದು, ಹಾವುಗಳ ಬಗ್ಗೆ ಹೆಚ್ಚಿನ ಅರಿವು ಇಲ್ಲದೆ ಇದ್ದವರು ಹಾವುಗಳನ್ನು ಕಂಡಾಕ್ಷಣ ಅವುಗಳನ್ನು ಹೊಡೆದು ಸಾಯಿಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. 
         ತುಮಕೂರಿನಲ್ಲಿರುವ ವಿವಿಧ ಉರಗತಜ್ಞರ ತಂಡಗಳು ಹಾವುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಗಮನಾರ್ಹ. ಇದರ ಬೆನ್ನಲ್ಲೇ ಕಳೆದ ಎರಡ್ಮೂರು ದಿನಗಳ ಹಿಂದೆ ರಾತ್ರಿ 12 ಗಂಟೆ ಸುಮಾರಿಗೆ ಅಪರೂಪದ ಶ್ವೇತನಾಗು ಸೆರೆ ಸಿಕ್ಕಿದೆ. 
 
         

 ನಗರದ ಶೆಟ್ಟಿಹಳ್ಳಿ ಪಾಳ್ಯದ ಕೆಸರುಮಡು ರಸ್ತೆಯಲ್ಲಿರುವ ರೈತ ಶಿವರಾಜು ಎಂಬುವವರ ಜಮೀನಿನಲ್ಲಿ ಅಪರೂಪದ ಬಿಳಿ ನಾಗರಹಾವು ಸೆರೆ ಸಿಕ್ಕಿದೆ. ಅಪರೂಪ ಎನ್ನುವಂತೆ ತುಮಕೂರಿನಲ್ಲಿ ಸೆರೆ ಸಿಕ್ಕಿ ಶ್ವೇತನಾಗು ಮೊದಲನೇಯದ್ದಾಗಿದೆ. ರಾಜ್ಯಕ್ಕೆ 2ನೇಯದ್ದಾಗಿದೆ. ಇಡೀ ದೇಶದಲ್ಲಿ ನೋಡುವುದಾದರೆ 9ನೇ ಹಾವು ಇದಾಗಿದೆ ಎಂದು ತಿಳಿದು ಬಂದಿದೆ. 
ಈ ಹಾವನ್ನು ಎಸ್‍ಎಸ್‍ಐಟಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ ಧನುಷ್ ಎಂಬುವವರು ಹಿಡಿದಿದ್ದು, ಹಾವನ್ನು ಸುರಕ್ಷಿತವಾಗಿ ಕಾಡಿಗೆ ರವಾನಿಸಿದ್ದಾರೆ.
           ಸಾಮಾನ್ಯವಾಗಿ ಬಂಗಾರದ ಮೈಬಣ್ಣ ಹೊಂದಿರುವ ಹಾವು ಆಲ್ಬಿನಿಸಂ ಎಂಬ ಚರ್ಮರೋಗಕ್ಕೆ ತುತ್ತಾದಾಗ ಅದರ ಬಣ್ಣ ಬಿಳಿ ಬಣ್ಣವಾಗಿ ಪರಿವರ್ತನೆಯಾಗುತ್ತದೆ. ಹಾಗಾಗಿ ಇಂತಹ ಹಾವುಗಳು ಸಾಮಾನ್ಯವಾಗಿ ಕಂಡು ಬರುವುದಿಲ್ಲ. 
          ಸಾಮಾನ್ಯವಾಗಿ ಬಿಳಿ ನಾಗರಹಾವು ಕಂಡು ಬರುವುದಿಲ್ಲ ತೊನ್ನು ಎಂಬ ಚರ್ಮರೋಗ ಬಂದ ಹಾವುಗಳು ಬಿಳಿ ಬಣ್ಣಕ್ಕೆ ತಿರುಗುತ್ತವೆ. ಈ ಪ್ರಕ್ರಿಯೆ ನಡೆಯುವುದು ತುಂಬಾ ವಿರಳ. ದೇಶದಲ್ಲಿಯೇ 9ನೇ ಹಾವು ಇದಾಗಿದ್ದು ತುಮಕೂರಿನಲಿ ಸಿಕ್ಕ ಮೊದಲನೇ ಹಾವಾಗಿದೆ. ಈ ಹಾವುಗಳು ಹೆಚ್ಚು ದಿನಗಳ ಕಾಲ ಬದುಕಲಾರವು. ಹಾಗಾಗಿಯೇ ಹೆಚ್ಚಾಗಿ ಕಂಡು ಬರುವುದಿಲ್ಲ. 
ಧನುಷ್, ಜಂಟಿ ಕಾರ್ಯದರ್ಶಿ, ವಾರ್ಕೋ ಸಂಸ್ಥೆ
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ