ಚಿಕ್ಕನಾಯಕನಹಳ್ಳಿ
ಶಿರಾ-ಹುಳಿಯಾರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಭೂಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ರೈತರಿಗೆ ಅವಾರ್ಡ್ ವಿಚಾರಣೆ ನಡೆಸುವ ಕುರಿತು ಶುಕ್ರವಾರ ಬೆಳ್ಳಾರ ಭಾಗದ ರೈತರೊಂದಿಗೆ ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾನಾಧಿಕಾರಿಗಳ ವ್ಯವಸ್ಥಾಪಕ ಮಂಜುನಾಥ್ ಹಾಗೂ ಅಧಿಕಾರಿಗಳು ಚರ್ಚೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಬೆಳ್ಳಾರ ಹತ್ತಿರ ಸೇತುವೆ ನಿರ್ಮಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ರೈತರು ತಮ್ಮ ಜಮೀನುಗಳಿಗೆ ಅಪೇಕ್ಷಿಸುವ ಪರಿಹಾರ ನೀಡಲು ರೈತರ ಬಳಿಯಿರುವ ಜಮೀನಿನ ಹಕ್ಕುಪತ್ರ, ಸ್ವತ್ತಿನ ಮೇಲೆ ಇರುವ ದಾಖಲೆಗಳು, ಅದರಲ್ಲಿರುವ ಕಟ್ಟಡಗಳು, ಬೆಳೆ, ಗಿಡ-ಮರಗಳ ಸಂಖ್ಯೆಯನ್ನು ಅಧಿಕಾರಿಗಳು ನೀಡುವ ಅರ್ಜಿಗಳಲ್ಲಿ ನಮೂದಿಸಿ ಕೊಡುವಂತೆ ರೈತರಿಗೆ ಸಲಹೆ ನೀಡಿದರು.
ಸೇತುವೆ 16 ಮೀಟರ್ ಅಗಲ, 250 ಮೀಟರ್ ಉದ್ದವಿದ್ದು, ಇದಕ್ಕೆ ಬೇಕಾಗುವ ಜಮೀನು ಅವಶ್ಯಕತೆ ಇದೆ. ಪ್ರತಿ ರೈತರಿಂದ 1 ಗುಂಟೆಯಿಂದ 4 ಗುಂಟೆಯವರೆಗೆ ಜಮೀನು ಬೇಕಾಗುತ್ತದೆ ಎಂದರು. ಈಗಾಗಲೆ ನೋಂದಣಾಧಿಕಾರಿಗಳಿಂದ ಈ ಭಾಗದಲ್ಲಿ ಎಷ್ಟು ಬೆಲೆ ಇದೆಯೋ ಅದಕ್ಕೆ ನಾಲ್ಕುಪಟ್ಟು ಪರಿಹಾರ ಸರ್ಕಾರ ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ರೈತರು ಮಾತನಾಡಿ, ಈ ಭಾಗದಲ್ಲಿ 1 ಗುಂಟೆಗೆ 75 ಸಾವಿರದಿಂದ 1 ಲಕ್ಷದವರೆಗೆ ಜಮೀನು ಬೆಲೆ ಬಾಳುತ್ತಿದೆ. ಆದ್ದರಿಂದ ಅಧಿಕಾರಿಗಳು ರೈತರಿಗೆ ಸರಿಯಾದ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.