ತುರುವೇಕೆರೆ
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ದಬ್ಬೆಘಟ್ಟ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಮಸಾಲೆಜಯರಾಮ್ ಗುರುವಾರ ಪಟ್ಟಣದ ಬೆಸ್ಕಾಂ ಕಚೇರಿ ಎದುರು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಪಟ್ಟಣದ ದಬ್ಬೆಘಟ್ಟ ಸರ್ಕಲ್ನಿಂದ ಮುತ್ತುರಾಯ ಸ್ವಾಮಿ ದೇವಾಲಯದವರೆಗೆ ಮೊದಲನೇ ಹಂತದಲ್ಲಿ 2ಕೋಟಿ ವೆಚ್ಚದಲ್ಲಿನ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕರು ಪತ್ರಕರ್ತರೊಂದಿಗೆ ಮಾತನಾಡಿ, ಪ್ರಸ್ತುತ 600 ಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು,
ಈಗಿರುವ ರಸ್ತೆಯ ಮಧ್ಯಭಾಗದಿಂದ 41 ಅಡಿ ರಸ್ತೆ ವಿಸ್ತರಿಸಲಾಗುತ್ತಿದ್ದು, ಒಟ್ಟು 82 ಅಡಿಗಳಲ್ಲಿ ಸುಸಜ್ಜಿತವಾದ ರಸ್ತೆ ನಿರ್ಮಾಣದ ಗುರಿ ಹೊಂದಿದ್ದು, 45 ಅಡಿ ವಿಸ್ತರಿಸುವ ಉದ್ದೇಶವಿತ್ತು. ಆದರೆ ಅಂಗಡಿ ಮಾಲೀಕರು ಹಾಗೂ ಸ್ಥಳೀಯ ನಿವಾಸಿಗಳ ಮನವಿಗೆ ಸ್ಪಂದಿಸಿ 41 ಅಡಿಗಳಲ್ಲಿ ರಸ್ತೆ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಯಿತು. ರಸ್ತೆಯ ಇಕ್ಕೆಲಗಳಲ್ಲಿನ ಅಂಗಡಿ ಮಾಲೀಕರು ಹಾಗೂ ವಾಸವಿರುವ ನಿವಾಸಿಗಳು ತೆರವು ಕಾರ್ಯಚರಣೆಗೆ ಸಹಕರಿಸಬೇಕು, ಸದರಿ ರಸ್ತೆಯ ಅಗಲೀಕರಣಕ್ಕೆ ಒತ್ತಾಯಿಸಿದ್ದ ಪ್ರತಿಭಟನಾಕಾರರೂ ಇದಕ್ಕೆ ಸಮ್ಮತಿಸಿದ್ದು, ಎಲ್ಲರನ್ನು ಸಹಮತಕ್ಕೆ ಪಡೆದು ರಸ್ತೆಯ ಅಭಿವೃದ್ಧಿಕೈಗೊಳ್ಳಲಾಗಿದೆ. ಇದರಲ್ಲಿ ಯಾವುದೇ ಮುಲಾಜಿಗೆ ಒಳಗಾಗದೆ ಸದರಿ ವಿಸ್ತೀರ್ಣದಲ್ಲೆ ರಸ್ತೆ ನಿರ್ಮಾಣ ಮಾಡಲಾಗುವುದು.
ಎರಡನೇ ಹಂತದಲ್ಲಿ ಮುತ್ತುರಾಯಸ್ವಾಮಿ ದೇವಾಲಯದಿಂದ ಡಿಪೋವರೆವಿಗೂ ಸದರಿ ವಿಸ್ತೀರ್ಣದಲ್ಲೇ ರಸ್ತೆ ಅಭಿವೃದ್ಧಿಪಡಿಸುವ ಯೋಜನೆಯಿದೆ. ರಸ್ತೆ ನಿರ್ಮಾಣದ ಹೆಸರಿನಲ್ಲಿ ಈಗಾಗಲೇ 200 ಮರಗಳನ್ನು ಕಡಿದಿರುವುದರಿಂದ ರಸ್ತೆ ನಿರ್ಮಾಣವಾದ ನಂತರ ಅದರ ಎರಡು ಪಟ್ಟು ಅಂದರೆ 400 ಗಿಡಗಳನ್ನು ನೆಟ್ಟು ಬೆಳೆಸುವ ಕೆಲಸವನ್ನು ಪಟ್ಟಣ ಪಂಚಾಯಿತಿಗೆ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಜೆಸಿಬಿ ಬಳಸಿ ಬೆಸ್ಕಾಂ ಕಚೇರಿಯ ಕಾಂಪೌಂಡ್ ಹಾಗೂ ಕೆ.ಎಸ್.ಆರ್.ಟಿ.ಸಿ. ಕಾಂಪೌಂಡ್, ತಾಲ್ಲೂಕು ಪಂಚಾಯಿತಿ ಕಾಂಪೌಂಡ್ ಗೋಡೆಗಳನ್ನು ಉರುಳಿಸುವ ಮೂಲಕ ಶಾಸಕರು ಕಾಮಗಾರಿಗೆ ಶರವೇಗದ ಚಾಲನೆ ನೀಡಿದರು. ಪಿ.ಎಸ್.ಐ.ರಾಜು ಸ್ಥಳದಲ್ಲಿಯೇ ಇದ್ದು ತೆರವು ಕಾರ್ಯಾಚರಣೆಗೆ ಸಹಕರಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ನೂತನ ಸದಸ್ಯರುಗಳಾದ ಯಜಮಾನ್ ಮಹೇಶ್, ಚಿದಾನಂದ್, ಅಂಜನ್ಕುಮಾರ್, ಮೇಘನ, ಭಾಗ್ಯ, ಎ.ಪಿ.ಎಂ.ಸಿ.ಸದಸ್ಯ ವಿ.ಟಿ.ವೆಂಕಟರಾಮ್. ಬಿಜೆಪಿ ಅಧ್ಯಕ್ಷ ದುಂಡ ರೇಣುಕಪ್ಪ, ಮುಖಂಡರುಗಳಾದ ಕೊಂಡಜ್ಜಿ ವಿಶ್ವನಾಥ್, ಹಾವಾಳ ರಾಮೇಗೌಡ, ಕಾಳಂಜಿಹಳ್ಳಿ ಸೋಮಣ್ಣ, ಕೆಂಪೇಗೌಡ, ಬಿಎಮ್ಎಸ್ ಉಮೇಶ್, ವಿ.ಬಿ.ಸುರೇಶ್, ಕಡೇಹಳ್ಳಿಸಿದ್ದೇಗೌಡ, ಜಿ.ಆರ್.ರಂಗೇಗೌಡ, ಕೊಳಾಲನಾಗರಾಜ್ ಸೇರಿದಂತೆ ಅನೇಕ ಮುಖಂಡರು ಇದ್ದರು.